ಕಾಂತಾರ ತಂಡಕ್ಕೆ ಕೇರಳ ಕೋರ್ಟ್ ಮತ್ತೆ ಶಾಕ್: 'ವರಾಹ ರೂಪಂ' ಹಾಡು ಬಳಸದಂತೆ ಮಧ್ಯಂತರ ತಡೆಯಾಜ್ಞೆ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. 'ವರಾಹ ರೂಪಂ' ಹಾಡನ್ನು ಥಿಯೇಟರ್ ಹಾಗೂ ಓಟಿಟಿಯಲ್ಲಿ ಬಳಸದಂತೆ ಕೇರಳ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. 'ಕಾಂತಾರ' ತಂಡದವರು ನಮ್ಮ 'ನವರಸಂ' ಹಾಡಿನ ಟ್ಯೂನ್ ಕದ್ದಿದ್ದಾರೆ ಎಂದು ಕಳೆದ ವರ್ಷ ತ್ರೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ಕೋರ್ಟ್ ಮೆಟ್ಟಿಲೇರಿತ್ತು.
ತ್ರೈಕ್ಕುಡಂ ಬ್ರಿಡ್ಜ್ ಆರೋಪಕ್ಕೆ ಹೊಂಬಾಳೆ ಸಂಸ್ಥೆ ಕೂಡ ಈಗಾಗಲೇ ಸ್ಪಷ್ಟನೆ ನೀಡಿದೆ. ಕಾನೂನು ಹೋರಾಟಕ್ಕೂ ಮುಂದಾಗಿತ್ತು. ಈ ಪಿಟಿಷನ್ ವಿಚಾರಣೆ ನಡೆಸಿದ ಕೇರಳ ಕೋರ್ಟ್ 'ಕಾಂತಾರ' ತಂಡಕ್ಕೆ ಶಾಕ್ ನೀಡಿದೆ. ಕೋಳಿಕೋಡ್‌ನ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕೆ ಇ ಸಾಲಿಹ್ ಅವರು 'ನವರಸಂ' ಟ್ರ್ಯಾಕ್‌ನ ಹಕ್ಕುಸ್ವಾಮ್ಯವನ್ನು ಹೊಂದಿರುವ ಮ್ಯೂಸಿಕ್ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಮತ್ತು ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್‌ಗೆ 'ಕಾಂತಾರ' ತಂಡ ಕ್ರೆಡಿಟ್ ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

'ಕಾಂತಾರ' ಸಿನಿಮಾ ಹಿಟ್ ಆಗುತ್ತಿದ್ದಂತೆ 'ನವರಸಂ' ಹಾಡಿನ ಟ್ಯೂನ್ ಕದ್ದಿದ್ದಾರೆ ಎಂದು ಥೈಕ್ಕುಡಂ ಬ್ರಿಡ್ಜ್ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿತ್ತು. ನಂತರ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ "ಸ್ಟೈಲ್ ವಿಚಾರದಲ್ಲಿ 'ನವರಸಂ' ಸಾಂಗ್ ಕೇಳಿ ಇನ್‌ಸ್ಪೈರ್ ಆಗಿರೋದು ನಿಜ. ಇನ್ನುಳಿದಂತೆ ಆ ಹಾಡಿಗೂ ಈ ಹಾಡಿಗೂ ಸಂಬಂಧವೇ ಇಲ್ಲ. ಸಂಗೀತದ ಸೂಕ್ಷ್ಮಗಳು ಗೊತ್ತಿರುವವರಿಗೆ ಇದು ಗೊತ್ತಾಗುತ್ತದೆ" ಎಂದಿದ್ದರು.
ಕಳೆದ ವಾರ, ಕೋಳಿಕೋಡ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್, ಕೇಸ್ ಡೈರಿಯನ್ನು ಪರಿಶೀಲಿಸಿದ ನಂತರ, ಕೃತಿಸ್ವಾಮ್ಯ ಕಾಯ್ದೆ 1957 (ಹಕ್ಕುಸ್ವಾಮ್ಯ ಉಲ್ಲಂಘನೆ) ಸೆಕ್ಷನ್ 64 ರ ಅಡಿಯಲ್ಲಿ ಕೃತಿಚೌರ್ಯದ ಹಾಡಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು.

'ವರಾಹ ರೂಪಂ' ಚಿತ್ರದ ಕೃತಿಚೌರ್ಯದ ಆರೋಪದ ಕುರಿತು ಗುರುವಾರ ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ಮಧ್ಯಂತರ ಆದೇಶವನ್ನು ನೀಡಿತು. 'ನವರಸಂ' ಹಾಡನ್ನು ನಕಲು ಮಾಡುವ ಮೂಲಕ 'ವರಾಹ ರೂಪಂ' ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ವಿಚಾರಣೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಮಾತೃಭೂಮಿ ಸಂಸ್ಥೆ ಆರೋಪಿಸಿದ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಈ ಪಿಟಿಷನ್‌ಗೆ ಸಂಬಂಧಿಸಿದಂತೆ ಸಂಪೂರ್ಣ ಸಾಕ್ಷ್ಯಾಧಾರವನ್ನು ಕೋರ್ಟ್‌ಗೆ ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಹಿಂದೆ ಒಮ್ಮೆ ಹೊಂಬಾಳೆ ಸಂಸ್ಥೆಗೆ ಇದೇ ಕೇಸ್‌ನಲ್ಲಿ ಹಿನ್ನಡೆ ಆಗಿತ್ತು. ಆಗ ಹಾಡಿನ ಬಳಕೆಗೆ ತಡೆ ಬಂದಾಗ ಅಜನೀಶ್ ಹೊಸ ಟ್ಯೂನ್ ಮಾಡಿ ಹಾಡು ಸಿದ್ಧಪಡಿಸಿದ್ದರು. ಅದನ್ನು ಓಟಿಟಿಯಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ 'ವರಾಹ ರೂಪಂ' ಒರಿಜಿನಲ್ ಸಾಂಗ್‌ನಷ್ಟು ಇದು ಸದ್ದು ಮಾಡಲಿಲ್ಲ. ತಡೆಯಾಜ್ಞೆ ತೆರವಾದ ಬಳಿಕ ಮತ್ತೆ ಒರಿಜಿನಲ್ ಹಾಡನ್ನು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದ ಚಿತ್ರಕ್ಕೆ ಸೇರಿಸಲಾಗಿತ್ತು. ಇದೀಗ ಮತ್ತೆ ತಡೆಯಾಜ್ಞೆ ಬಂದಿರುವುದರಿಂದ ಚಿತ್ರತಂಡ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದು ಗೊತ್ತಿಲ್ಲ.
ಸದ್ಯ ಕೋರ್ಟ್ ಆದೇಶದ ಬಗ್ಗೆ ಅಜನೀಶ್ ಲೋಕನಾಥ್ ಅವರನ್ನು ಫಿಲ್ಮಿಬೀಟ್ ಸಂಪರ್ಕಿಸಿದಾಗ ನನಗೆ ಆ ಬಗ್ಗೆ ಏನು ಗೊತ್ತಿಲ್ಲ ಎಂದು ಹೇಳಿದ್ದಾರೆ. ಕಳೆದ ವರ್ಷ ದಸರಾ ಹಬ್ಬದ ಸಂಭ್ರಮದಲ್ಲಿ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ ಮುಂದೆ ಪ್ಯಾನ್ ಇಂಡಿಯಾ ಸಿನಿಮಾ ಸ್ವರೂಪ ಪಡೆಯಿತು. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿದೆ. ಶೀಘ್ರದಲ್ಲೇ ಸ್ಪ್ಯಾನಿಷ್ ಹಾಗೂ ಇಟಲಿ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಮತ್ತೊಂದು ಕಡೆ ಚಿತ್ರದ ಪ್ರೀಕ್ವೆಲ್ ಕೆಲಸಗಳು ಆರಂಭವಾಗಿದೆ.


Click it and Unblock the Notifications











