'ತಮಿಳ್ ರಾಕರ್ಸ್' ಅಡ್ಮಿನ್ ಬಂಧನ; ಇನ್ಮುಂದೆ ಪೈರಸಿ ಕಾಪಿ ನೋಡೋಕೆ ಸಿಗಲ್ವಾ?
ಪೈರಸಿ ಅನ್ನೋದು ಚಿತ್ರರಂಗವನ್ನು ಬೆಂಬಿಡದೇ ಕಾಡುತ್ತಿದೆ. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಇದನ್ನು ತಡೆಯೋಕೆ ಸಾಧ್ಯವಾಗುತ್ತಿಲ್ಲ. 'ತಮಿಳ್ ರಾಕರ್ಸ್' ಅಂತೂ ಬಹಳ ಜನಪ್ರಿಯತೆ ಗಳಿಸಿದ ಪೈರಸಿ ವೆಬ್‌ಸೈಟ್ ಆಗಿದೆ.
ಸಿನಿಮಾ ಪೈರಸಿ ತಡೆಯೋದು ನಿಜಕ್ಕೂ ಸವಾಲಿನ ಕೆಲಸ. ಏನೂ ಮಾಡೋಕೆ ಸಾಧ್ಯವಿಲ್ಲ ಎಂದು ಚಿತ್ರ ನಿರ್ಮಾಪಕರು ಯಾರು ಪೈರಸಿ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುವಂತಾಗಿಬಿಟ್ಟಿದೆ. ಸೈಬರ್ ಕ್ರೈಂ ವಿಭಾಗದವರು ಒಂದು ಸೈಟ್ ಡೀ-ಲಿಂಕ್ ಮಾಡಿದರೂ ಹೊಸ ಹೊಸ ಸೈಟ್‌ಗಳನ್ನು ಕ್ರಿಯೇಟ್ ಮಾಡಿ ಸಿನಿಮಾ ಪೈರಸಿ ಕಾಪಿಗಳನ್ನು ಅಪ್‌ಲೋಡ್ ಮಾಡುತ್ತಾರೆ.

ಹಲವು ವರ್ಷಗಳಿಂದ ತಮಿಳ್ ರಾಕರ್ಸ್ ಭಾರೀ ಸದ್ದು ಮಾಡ್ತಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ರಿಲೀಸ್ ದಿನವೇ ಚಿತ್ರಮಂದಿರಗಳಲ್ಲಿ ಸೆರೆಹಿಡಿದು ಅಪ್‌ಲೋಡ್ ಮಾಡುತ್ತಿದ್ದರು. ಇದರಿಂದ ಜನ ಥಿಯೇಟರ್‌ಗೆ ಹೋಗುವುದು ಕಮ್ಮಿ ಆಗಿತ್ತು. ಪೈರಸಿ ಕಾಪಿಗಳನ್ನೇ ಹೆಚ್ಚು ನೋಡಲು ಆರಂಭಿಸಿದ್ದಾರೆ. ಇದೀಗ ತಮಿಳ್ ರಾಕರ್ಸ್ ಸೈಟ್ ಅಡ್ಮಿನ್ ಜೆಬ್ ಸ್ಟೀಫನ್ ರಾಜ್ ಎಂಬಾತನನ್ನು ಕೇರಳದ ತಿರುವಂತನಪುರ ಪೊಲೀಸರು ಬಂಧಿಸಿದ್ದಾರೆ.
ಜೆಬ್ ಸ್ಟೀಫನ್ ರಾಜ್ ತಮಿಳುನಾಡಿನ ಮದುರೆ ಮೂಲದವನು ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಹೊಸ ಹೊಸ ಸಿನಿಮಾಗಳನ್ನು ಚಿತ್ರೀಕರಿಸಿ ಆತ ತಮಿಳ್ ರಾಕರ್ಸ್ ಪೈರೆಟ್ ಸೈಟ್‌ನಲ್ಲಿ ಹಾಕುತ್ತಿದ್ದ ಎನ್ನಲಾಗುತ್ತಿದೆ. ಇನ್ನು ಪೊಲೀಸರ ವಿಚಾರಣೆ ವೇಳೆ ಆತ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿರುವುದಾಗಿ ವರದಿಯಾಗಿದೆ. ಈ ವೆಬ್‌ಸೈಟ್‌ಗೆ 12 ಜನ ಕೆಲಸ ಮಾಡುತ್ತಿರುವುದಾಗಿ ಆತ ತಿಳಿಸಿದ್ದಾನೆ.

ಧನುಷ್ ನಟನೆಯ 'ರಾಯನ್' ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಚಿತ್ರವನ್ನು ತಿರುವಂತನಪುರದ ಚಿತ್ರಮಂದಿರದಲ್ಲಿ ಜೆಬ್ ಸ್ಟೀಫನ್ ರಾಜ್ ಸೆರೆಹಿಡಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಪೃಥ್ವಿರಾಜ್ ಸುಕುಮಾರನ್ ನಟನೆಯ 'ಗುರುವಾಯೂರ್ ಅಂಬಲನಾಡಾಯಿಲ್' ಸಿನಿಮಾ ಕೆಲ ದಿನಗಳ ಹಿಂದೆ ರಿಲೀಸ್ ಆಗಿತ್ತು. ಆ ಚಿತ್ರಕ್ಕೂ ಪೈರಸಿ ಕಾಟ ಎದುರಾಗಿತ್ತು.
ಪೃಥ್ವಿರಾಜ್ ಪತ್ನಿ ಸುಪ್ರಿಯಾ ಮೆನನ್ 'ಗುರುವಾಯೂರ್ ಅಂಬಲನಾಡಾಯಿಲ್' ಚಿತ್ರಕ್ಕೆ ಬಂಡವಾಳ ಹೂಡಿದ್ದರು. ತಮ್ಮ ಸಿನಿಮಾ ಪೈರಸಿ ಆಗಿದ್ದರ ಬಗ್ಗೆ ಅವರು ಕೇರಳದ ಕೊಕನಾಡ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. 'ರಾಯನ್' ಸಿನಿಮಾ ಸೆರೆ ಹಿಡಿಯಲು ಚಿತ್ರಮಂದಿರಕ್ಕೆ ಬಂದಿದ್ದಾಗಿ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಯಾವ ರೀತಿ ತಾವು ಚಿತ್ರಮಂದಿರಗಳಲ್ಲಿ ಸಿನಿಮಾ ಸೆರೆ ಹಿಡಿಯುತ್ತಿದ್ದೆವು ಎನ್ನುವುದನ್ನು ಆರೋಪಿ ಸ್ಟೀಫನ್ ವಿವರಿಸಿದ್ದಾನೆ. ಸಿನಿಮಾ ರಿಲೀಸ್ ಆದ ದಿನ ಚಿತ್ರಮಂದಿರದ ಹಿಂಬದಿಯಲ್ಲಿ ಆರರಿಂದ ಏಳು ಸೀಟುಗಳನ್ನು ಬುಕ್ ಮಾಡುತ್ತಿದ್ದೆವು. ಮೊಬೈಲ್‌ನ ಬ್ರೈಟ್ ನೆಸ್ ಕಡಿಮೆ ಮಾಡಿ ಸೀಟಿನ ಮೇಲಿರುವ ಕಪ್ ಹೋಲ್ಡರ್ ಮೇಲೆ ಮೊಬೈಲ್ ಫೋನ್ ಇಟ್ಟು ಶೂಟ್ ಮಾಡುತ್ತಿದ್ದರು. ಬಳಿಕ ಅದನ್ನು ಪೈರೆಟ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ.
ತಮಿಳು ರಾಕರ್ಸ್ ಮಾತ್ರವಲ್ಲದೇ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ಕೂಡ ಜೆಬ್ ಸ್ಟೀಫನ್ ರಾಜ್ ಪೈರಸಿ ಸಿನಿಮಾ ಕಾಪಿಗಳನ್ನು ಹಾಕುತ್ತಿದ್ದ ಎನ್ನಲಾಗ್ತಿದೆ. 'ರಾಯನ್' ಮಾತ್ರವಲ್ಲ ಹೊರತಾಗಿ 'ಕಲ್ಕಿ 2898AD' ಹಾಗು 'ಮಹಾರಾಜ' ಸಿನಿಮಾಗಳ ಕಾಪಿಗಳು ಪೊಲೀಸರಿಗೆ ಸಿಕ್ಕಿವೆ. ಸ್ಟೀಫನ್ ಸಿನಿಮಾಗಳನ್ನು ಚಿತ್ರೀಕರಿಸಿ ಪೈರಸಿ ಕಾಪಿಗಳನ್ನು ಪ್ರಮೋಟ್ ಮಾಡುವವರಿಗೆ ಕಳುಹಿಸುತ್ತಿದ್ದ ಎನ್ನಲಾಗ್ತಿದೆ. ಆತನ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವುದರ ಬಗ್ಗೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.


Click it and Unblock the Notifications











