ನಟಿ ಮೇಲೆ ಅತ್ಯಾಚಾರ ಯತ್ನ: ನಟ ದಿಲೀಪ್ ಮನೆಯಲ್ಲಿ ವಿಡಿಯೋಕ್ಕಾಗಿ ಪೊಲೀಸ್ ಹುಡುಕಾಟ
2017 ರಲ್ಲಿ ಮಲಯಾಳಂ ಸ್ಟಾರ್ ನಟಿಯೊಬ್ಬರ ಮೇಲೆ ನಡೆದಿದ್ದ ಅತ್ಯಾಚಾರ ಯತ್ನ ಮತ್ತು ಹಲ್ಲೆ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ನಟಿಯ ಮೇಲಿನ ಅತ್ಯಾಚಾರ ಯತ್ನ ಹಾಗೂ ಮಾರಣಾಂತಿಕ ಹಲ್ಲೆಯ ಹಿಂದೆ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ದಿಲೀಪ್ ಇದ್ದ ವಿಷಯ ಬಹಿರಂಗಗೊಂಡಿದ್ದು, ಈ ಪ್ರಕರಣ ಕಳೆದ ಐದು ವರ್ಷಗಳಲ್ಲಿ ಹಲವು ತಿರುವುಗಳನ್ನು ಪಡೆದುಕೊಂಡಿದೆ.
ಇದೀಗ ಕೆಲ ದಿನಗಳ ಹಿಂದೆ ದಿಲೀಪ್ ವಿರುದ್ಧ ಹೊಸ ಸಾಕ್ಷಿಯೊಂದು ಎದುರು ಬಂದಿದ್ದು, ಅದರ ಜೊತೆಗೆ ದಿಲೀಪ್ ಮೇಲೆ ಹೊಸ ಪ್ರಕರಣಗಳನ್ನು ಕೇರಳ ಪೊಲೀಸರು ದಾಖಲಿಸಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹಲ್ಲೆಗೆ ಒಳಗಾದ ನಟಿ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಅಂದಿನ ಘಟನೆ ಬಗ್ಗೆ ಮಾತನಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಂದಿನ ಘಟನೆ ಬಗ್ಗೆ ನಟಿಯು ಬರೆದುಕೊಂಡಿದ್ದು, 'ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ನಾನು ಒಂಟಿಯಲ್ಲ ಎನಿಸಿದೆ' ಎಂದಿದ್ದಾರೆ. ಆ ನಟಿಗೆ ಇಡೀ ಮಲಯಾಳಂ ಸಿನಿಮಾ ಉದ್ಯಮ ಬೆಂಬಲ ಸೂಚಿಸಿದೆ.

2017 ರಲ್ಲಿ ನಡೆದಿದ್ದ ಘಟನೆ
2017ರ ಫೆಬ್ರವರಿಯಲ್ಲಿ ಮಲಯಾಳಂ ಸ್ಟಾರ್ ನಟಿ (ಕನ್ನಡದಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ) ಚಿತ್ರೀಕರಣ ಮುಗಿಸಿ ಕಾರಿನಲ್ಲಿ ಮನೆಗೆ ಮರಳುವಾಗ ಕಾರನ್ನು ಅಡ್ಡಗಟ್ಟಿದ ಕೆಲವು ದುಷ್ಕರ್ಮಿಗಳು ನಟಿಯನ್ನು ತಮ್ಮ ಕಾರಿಗೆ ಎಳೆದುಕೊಂಡು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನಟಿಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಈ ಎಲ್ಲ ಘಟನೆಯ ವಿಡಿಯೋವನ್ನು ಸಹ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಪಲ್ಸರ್ ಸುನಿಗೂ ದಿಲೀಪ್‌ಗೂ ಸಂಬಂಧ!
ಬಳಿಕ ಈ ಪ್ರಕರಣದ ಪ್ರಮುಖ ರುವಾರಿ ಆಗಿದ್ದ ನಟ ದಿಲೀಪ್ ಅನ್ನು ಬಂಧಿಸಲಾಯ್ತು. ನಟಿಯ ಮೇಲೆ ಹಲ್ಲೆ ಮಾಡಿದ್ದ ಪಲ್ಸರ್ ಸುನಿಗೂ ದಿಲೀಪ್‌ಗೂ ಸಂಬಂಧ ಇದೆ ಎಂದು ಆರೋಪಿಸಲಾಗಿತ್ತು. ಆದರೆ ದಿಲೀಪ್ ಇದನ್ನು ನಿರಾಕರಿಸುತ್ತಲೇ ಬಂದಿದ್ದರು. ಇದೀಗ ಹೊಸದಾಗಿ ಬಂದಿರುವ ಸಾಕ್ಷಿ ನಿರ್ದೇಶಕ ಬಾಲಚಂದ್ರಕುಮಾರ್, ತಾನು ಪಲ್ಸರ್ ಸುನಿಯನ್ನು ದಿಲೀಪ್ ಮನೆಯಲ್ಲಿ ನೋಡಿದ್ದಾಗಿ ಹೇಳಿದ್ದಾರೆ. ಅಲ್ಲದೆ, ಅಂದು ನಡೆದ ಘಟನೆಯ ವಿಡಿಯೋವನ್ನು ಪಲ್ಸರ್ ಸುನಿ, ನಟ ದಿಲೀಪ್‌ಗೆ ತಂದು ತೋರಿಸಿದ್ದ. ಆ ವಿಡಿಯೋದ ಒಂದು ಕಾಪಿ ದಿಲೀಪ್ ಬಳಿ ಇದೆ ಎಂದು ಹೇಳಿದ್ದಾರೆ.

ದಿಲೀಪ್ ಮನೆ, ಕಚೇರಿ ಮೇಲೆ ದಾಳಿ
ಇಂದು ದಿಲೀಪ್‌ರ ಅಳುವಾ ಮತ್ತು ಎರ್ನಾಕುಲಂನಲ್ಲಿನ ಮನೆಯ ಮೇಲೆ ಕೇರಳ ಪೊಲೀಸರು ದಾಳಿ ನಡೆಸಿದ್ದು, ಪಲ್ಸರ್ ಸುನಿ ಅಂದು ತಂದುಕೊಟ್ಟಿದ್ದ ವಿಡಿಯೋ ಕಾಪಿ ದಿಲೀಪ್ ಬಳಿ ಇದೆಯಾ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ. ಅಲ್ಲದೆ ಪಲ್ಸರ್ ಸುನಿಗೂ ದಿಲೀಪ್‌ಗೂ ಸಂಬಂಧ ಇದೆಯೆಂಬುದಕ್ಕೆ ಯಾವುದಾದರೂ ಸಾಕ್ಷ್ಯ ಸಿಗುತ್ತದೆಯೇ ಪರಿಶೀಲನೆ ನಡೆಸಿದ್ದಾರೆ. ಇಂದು ಮಧ್ಯಾಹ್ನ ವಿಶೇಷ ತನಿಖಾ ತಂಡ ಹಾಗೂ ಸ್ಥಳೀಯ ಪೊಲೀಸರು ದಿಲೀಪ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದಾರೆ.

ಪೊಲೀಸರ ಕೊಲೆಗೆ ನಟ ದಿಲೀಪ್ ಸಂಚು!
ದಿಲೀಪ್ ಮೇಲೆ ಪೊಲೀಸರು ಮತ್ತೊಂದು ಕೇಸ್ ದಾಖಲಿಸಿದ್ದಾರೆ. ದಿಲೀಪ್ ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ಹಾಗೂ ತನಿಖಾ ತಂಡವನ್ನು ಕೊಲೆ ಮಾಡುವ ಯೋಜನೆಯನ್ನು ದಿಲೀಪ್ ಹಾಕಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ''ನನ್ನ ಕೈಗೆ ಬೇಡಿ ಹಾಕುವ ಪೊಲೀಸ್ ಅಧಿಕಾರಿಯ ಕೈ ಕತ್ತರಿಸುತ್ತೇನೆ'' ಎಂದು ದಿಲೀಪ್ ಹೇಳಿದ್ದರು. ಈ ಪ್ರಕರಣದಲ್ಲಿ ದಿಲೀಪ್ ಅನ್ನು ಪ್ರಥಮ ಆರೋಪಿಯಾಗಿಯೂ ಅವರ ಸಹೋದರರನ್ನು ದ್ವಿತೀಯ ಮತ್ತು ತೃತೀಯ ಆರೋಪಿಗಳನ್ನಾಗಿಯೂ ಮಾಡಲಾಗಿದೆ.


Click it and Unblock the Notifications











