ಮಲಯಾಳಂನ 'ಉಯಿರ್' ಚಿತ್ರದಲ್ಲಿ ಕಿಚ್ಚ ಸುದೀಪ್; ಜೂನ್ 26ರಂದು ಸಿನಿಮಾ ಬಿಡುಗಡೆ
'ಮಾರ್ಕ್' ಬಳಿಕ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸೋಕೆ ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ. ಇನ್ನು ಎರಡ್ಮೂರು ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ. ಶೀಘ್ರದಲ್ಲೇ ಅದರ ಬಗ್ಗೆ ಮಾಹಿತಿ ಸಿಗಲಿದೆ. ಇದೆಲ್ಲದರ ನಡುವೆ ಬಿಗ್‌ಬಾಸ್ ಸೀಸನ್ 13 ಶುರುವಾಗಲಿದ್ದು ಮತ್ತೊಮ್ಮೆ ಕಿಚ್ಚ ನಿರೂಪಣೆ ಮಾಡಲಾಗಿದೆ. ಇದೆಲ್ಲದರ ನಡುವೆ ಮಲಯಾಳಂ ಚಿತ್ರದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಅರೇ ಯಾವ ಗ್ಯಾಪ್‌ನಲ್ಲಿ ಸುದೀಪ್ ಮಾಲಿವುಡ್ ಸಿನಿಮಾದಲ್ಲಿ ನಟಿಸಿದ್ರು ಎಂದು ಕೆಲವರು ಹುಬ್ಬೇರಿಸಿದ್ದಾರೆ.
'ಉಯಿರ್' ಎಂಬ ಮಲಯಾಳಂ ಚಿತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವುದು ನಿಜ. ಆದರೆ ಅವರು ಬಣ್ಣ ಹಚ್ಚಿ ನಟಿಸಿಲ್ಲ. ಒಂದು ದೃಶ್ಯದಲ್ಲಿ ಅವರ ರೆಫರೆನ್ಸ್ ಇದೆ. ಕಿಚ್ಚನ ಜೊತೆ ಕ್ಲಿಕ್ಕಿಸಿಕೊಂಡ ಕುಟುಂಬದ ಫೋಟೊವನ್ನು ಪ್ರದರ್ಶಿಸಲಾಗ್ತಿದೆ. ಸದ್ಯ ಆ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಕಿಚ್ಚನ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಾಲಿವುಡ್ ಮಂದಿಗೂ ಗೊತ್ತು ಕಿಚ್ಚನ ಗತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ದಶಕಗಳ ಹಿಂದೆಯೇ ಸುದೀಪ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದವರು. ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಬಂದವರು. ಇಂಗ್ಲೀಷ್ ಚಿತ್ರದಲ್ಲಿ ಕೂಡ ನಟಿಸೋಕೆ ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. ಅಂದಹಾಗೆ 'ಉಯಿರ್' ಚಿತ್ರದಲ್ಲಿ ಸುದೀಪ್ ರೆಫರೆನ್ಸ್ ಯಾಕೆ ಎನ್ನುವುದು ಟೀಸರ್ ನೋಡಿದರೆ ಅರ್ಥವಾಗುತ್ತದೆ. ಪೊಲೀಸ್ ಅಧಿಕಾರಿಯೊಬ್ಬರ ಜೀವನದ ನಿಜ ಜೀವನದ ಘಟನೆಗಳನ್ನು ಆಧರಿಸಿ ಚಿತ್ರವನ್ನು ಕಟ್ಟಿಕೊಡಲಾಗಿದೆ.
ಪ್ರೊಬೇಷನರಿ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಬ್-ಇನ್ಸ್‌ಪೆಕ್ಟರ್ ಅಜೀಬ್ ಪಾತ್ರದಲ್ಲಿ ರೋಷನ್ ಮ್ಯಾಥ್ಯೂ ಬಣ್ಣ ಹಚ್ಚಿದ್ದಾರೆ. ಕಣ್ಣೂರಿನ ಪೊಲೀಸ್ ಠಾಣೆಯಿಂದ ಟೀಸರ್ ಶುರುವಾಗುತ್ತದೆ. ಸರಣಿ ಹತ್ಯೆಗಳ ಸುತ್ತಾ ಪೊಲೀಸರ ತನಿಖೆ ಆರಂಭವಾಗುತ್ತದೆ. ಜಿಲ್ಲೆಯಲ್ಲಿ ಕಾಣೆಯಾದ ಮಹಿಳೆಯರಿಗೂ ಈ ಹತ್ಯೆಗಳಿಗೂ ಇರುವ ಲಿಂಕ್ ಹುಡುಕುತ್ತಾ ಹೋದಾಗ ಪ್ರಕರಣದ ತನಿಖೆ ಕರ್ನಾಟಕಕ್ಕೆ ಬಂದು ತಲುಪುತ್ತದೆ. ಬಳಿಕ ಮುಂಬೈನ ಧಾರಾವಿವರೆಗೆ ಹೋಗುತ್ತದೆ. ಕಿಚ್ಚ ಸುದೀಪ್ ಅಭಿಮಾನಿಯ ಕುಟುಂಬ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿರುತ್ತಾರೆ. ಆ ಕುಟುಂಬಕ್ಕೂ ಈ ಪ್ರಕರಣಗಳಿಗೂ ಇರುವ ನಂಟು ಏನು ಎನ್ನುವುದೇ ಸಿನಿಮಾ ಕಥೆ ಎಂದು ಗೊತ್ತಾಗುತ್ತಿದೆ.

ಕರ್ನಾಟಕದ ಊರುಗಳ ಹೆಸರುಗಳು, ಕೈ ಮೇಲೆ ಕನ್ನಡದಲ್ಲಿ 'ರಾಜು' ಎನ್ನುವ ಟ್ಯಾಟು, ಕನ್ನಡ ನಟ ಕಿಚ್ಚ ಸುದೀಪ್ ಹೀಗೆ 'ಉಯಿರ್' ಚಿತ್ರದಲ್ಲಿ ಕನ್ನಡ ಹಾಗೂ ಕರ್ನಾಟಕಕ್ಕೆ ಕನೆಕ್ಟ್ ಆಗುವ ಸಾಕಷ್ಟು ವಿಚಾರಗಳಿವೆ. ಜೂನ್ 26 ಅಂದ್ರೆ ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗುತ್ತಿದೆ. ಪೊಲೀಸ್ ಇನ್ವೆಸ್ಟಿಗೇಷನ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ರುಚಿಸಲಿದೆ. ಟೀಸರ್ ನೋಡಿ ಸಿನಿರಸಿಕರು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಸುದೀಪ್ ಅವರ ಫೋಟೊ ಮಾತ್ರ ಬಳಸಿಕೊಂಡಿದ್ದಾರಾ ಅಥವಾ ಸಣ್ಣ ಝಲಕ್‌ನಲ್ಲಿ ಕಿಚ್ಚ ನಟಿಸಿದ್ದಾರಾ? ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.
'ವರ್ಗಂ', 'ವಾಸ್ತವಂ', 'ಶಿಕ್ಕರ್' ಮತ್ತು 'ಜೋಸೆಫ್' ರೀತಿಯ ವಿಭಿನ್ನ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದ ಎಂ. ಪದ್ಮಕುಮಾರ್ ಇದೀಗ 'ಉಯಿರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅನ್ಷದ್ ಕಥೆ ಬರೆದಿದ್ದು ನಿಖಿಲ್ ಕೆ. ಮೆನನ್, ಶಾಜಿ ಮರಾದ್ ಚಿತ್ರಕಥೆ, ಸಂಭಾಷಣೆ ಒದಗಿಸಿದ್ದಾರೆ. ಮಣಿಕಂದನ್ ಅಯ್ಯಪ್ಪ ಸಂಗೀತ ಚಿತ್ರಕ್ಕಿದೆ. ವಾವ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ತ್ರಿವಿಕ್ರಮನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ರೋಷನ್ ಮ್ಯಾಥ್ಯೂ ಜೊತೆಗೆ ಬೈಜು ಸಂತೋಷ್, ವಿನೀತ್ ತಟ್ಟಿಲ್, ದಿವ್ಯಾ ಎಂ ನಾಯರ್, ಅತುಲ್ಯ ಚಂದ್ರ, ಶ್ರುತಿ ಮೆನನ್ ಹಾಗೂ ಬಾಲಿವುಡ್ ಕಲಾವಿದರಾದ ಸಯಾಮಿ ಖೇರ್ ಮತ್ತು ಮಹೇಶ್ ಶೆಟ್ಟಿ ಚಿತ್ರದ ತಾರಾಗಣದಲ್ಲಿದ್ದಾರೆ.


Click it and Unblock the Notifications