ಖುದ್ದು 'ಎಣ್ಣೆ' ಹೊಡೆಯುತ್ತಾ 'ಕುಡುಕರಿಗೆ' ಪುಕ್ಸಟ್ಟೆ ಸಲಹೆ ನೀಡಿದ 'ಕಿರಾತಕ'ನ ನಾಯಕಿ ಓವಿಯಾ...!
ಜಾಹಿರಾತಿನ ಸಲುವಾಗಿ, ಸೋಶಿಯಲ್ ಸಂದೇಶವನ್ನು ನೀಡುವುದಕ್ಕಾಗಿ ಸಿನಿಮಾ ತಾರೆಯರು ಸಾಮಾಜಿಕ ಸಮಸ್ಯೆಗಳ ವಿರುದ್ಧ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಪರ ನಿಂತು ಮಾತನಾಡುತ್ತಲೇ ಇರುತ್ತಾರೆ. ತಮ್ಮ ನೆಚ್ಚಿನ ತಾರೆಯರ ಮೇಲಿನ ಪ್ರೀತಿಯಿಂದ ಬಹಳಷ್ಟು ಬದಲಾವಣೆಗಳು ಈಗಾಗಲೇ ಆಗಿವೆ. ಆಗುತ್ತಿವೆ. ಆದರೆ ಹೀಗೆ ಮಾಡಬೇಡಿ.. ಹಾಗೇ ಮಾಡಬೇಡಿ ಎಂದು ಲೆಕ್ಚರ್ ಮಾಡಿದ್ದ ಸಿನಿತಾರೆಯರೇ ಆ ಕೆಲಸ ಮಾಡಿಬಿಟ್ಟರೇ ಹೇಗೆ? ಹೌದು.. ಸದ್ಯ ಅದೇ ವಿಚಾರವೇ ಸೋಶಿಯಲ್ ಮೀಡಿಯಾದಲ್ಲಿ ಪ್ರವರ್ಧಮಾನಕ್ಕೆ ಬಂದು ಓವಿಯಾ ಅವರ ಕಾಲೆಳೆಯುವಂತಾಗಿದೆ.
ಹೌದು, ಓವಿಯಾ.. ಮಲಯಾಳಂನ ಚೆಲುವೆ. ಕಿರಾತಕ ಚಿತ್ರದಲ್ಲಿ ಯಶ್ ಗೆ ಜೋಡಿಯಾಗುವ ಮೂಲಕ ಕನ್ನಡಿಗರ ಹೃದಯಕ್ಕೂ ಕನ್ನ ಹಾಕಿದವರು ಇವರು. ತಮ್ಮ ಒಂದೂವರೆ ದಶಕದ ಸಿನಿಮಾ ಪ್ರಯಾಣದಲ್ಲಿ ಖ್ಯಾತಿಯ ತುತ್ತ ತುದಿಯನ್ನೂ ತಲುಪಿ, ಏಕಾಏಕಿ ದೊಪ್ಪನೆ ಬಿದ್ದ ಓವಿಯಾ ಬಿಗ್ ಬಾಸ್ ಮನೆಯನ್ನೂ ಪ್ರವೇಶಿಸಿದರು. ಆದರೆ ಅಲ್ಲಿ ತಮಿಳು ನಟ ಆರವ್ ಅವರನ್ನೂ ಓನ್ ಸೈಡ್ ಲವ್ ಮಾಡಿದ್ದಷ್ಟೇ ಬಂತೇ ಹೊರತು ಬೇರೇನೂ ಗಿಟ್ಟಿರಲಿಲ್ಲ.

ಇಂಥಾ ಓವಿಯಾ ಕೈಯಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂತಹ ಕೆಲಸ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಮೂರ್ನಾಲ್ಕು ವರ್ಷದಲ್ಲಿ ಓವಿಯಾ ಮಾಡಿದ್ದು ಕೇವಲ ಎರಡು ಸಿನಿಮಾ ಮಾತ್ರ. ಸಿನಿಮಾದ ಬದಲು ಇಲ್ಲ-ಸಲ್ಲದ ಮಾತುಗಳನ್ನಾಡುವ ಮೂಲಕವೇ ಪ್ರಚಲಿತದಲ್ಲಿರುವ ಪ್ರಯತ್ನವನ್ನು ಮಾಡುತ್ತಿರುವ ಓವಿಯಾ, ಈ ಹಿಂದೆ.. ಸಲಿಂಗಕಾಮದ ವಿಷಯ ಮಾತನಾಡಿದ್ದರು. ನನಗೆ ಗಂಡನ ಅವಶ್ಯಕತೆಯಿಲ್ಲ. ನಾನು ಮದುವೆಯಾಗಲ್ಲ , ನಾನು ಮದುವೆ ಆಗದೇ ಇರುವುದಕ್ಕೆ ನನ್ನನ್ನು ಕೆಲವರು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ನಾನು ನೀವಂದುಕೊಂಡಂತೆ ಅಲ್ಲ ಎಂದಿದ್ದರು. ಆ ನಂತರ ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದು, ಬಿಗ್ ಬಾಸ್‌ನ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು. ಶಾಲೆಗೆ ಹೋಗಿ ಸಮಯ ಮತ್ತು ಹಣ ಹಾಳು ಮಾಡಿಕೊಂಡೆ ಎನ್ನುವ ಮೂಲಕ ಕಟು ಟೀಕೆಗೊಳಗಾದರು. 2021ರಲ್ಲಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸಿದ್ದಾಗ #GoBackModi ಎಂದು ಟ್ವೀಟ್ ಮಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇನ್ನೂ.. ವೇಶ್ಯಾವಾಟಿಕೆಯ ಕಾನೂನುಬದ್ಧತೆ ಮತ್ತು ಲೈಂಗಿಕ ಶಿಕ್ಷಣದ ಕುರಿತು ಕೂಡ ಹಿಂದೊಮ್ಮೆ ಓವಿಯಾ ಮುಕ್ತವಾಗಿ ಮಾತನಾಡಿದ್ದರು. ವೇಶ್ಯಾವಾಟಿಕೆಯನ್ನು ಕಾನೂನು ಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು ಎಂಬ ಹೇಳಿಕೆಯನ್ನೂ ನೀಡಿದ್ದರು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದರು. ಎಲ್ಲರೂ ಇಂದು ಮುಖವಾಡವನ್ನು ಧರಿಸಿ ಬದುಕುತ್ತಿದ್ದಾರೆ, ಕಡ್ಡಾಯವಾಗಿ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಆಗ್ರಹವನ್ನು ಮಾಡಿದ್ದರು.

ಹೀಗೆ ಕಾಲ ಕಾಲಕ್ಕೆ ವಿವಾದಗಳಿಂದ ಸದ್ದು ಮಾಡುತ್ತಾ, ಸುದ್ದಿಯಾಗುತ್ತಾ ಬಂದ ಓವಿಯಾ ಈಗ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಉಪದೇಶ ನೀಡಿ, ಖುದ್ದು ತಾವೇ ಖುದ್ದು ಎಣ್ಣೆ ಹೊಡೆದಿದ್ದಾರೆ. ಗ್ರಿಲ್ಡ್ ಏಡಿಯನ್ನು ಸೈಡ್ ಡಿಶ್ ಆಗಿ ತಿನ್ನುತ್ತಾ, ಪಕ್ಕದಲ್ಲಿ ಮದ್ಯದ ಬಾಟಲಿ ಇಟ್ಟುಕೊಂಡು ಫುಲ್ ಟೈಟ್ ಆಗಿರುವಂತೆ ಕಂಡು ಬಂದಿದ್ಧಾರೆ. ಈ ಮೂಲಕ ಮೂಲಕ ಟ್ರೋಲಿಗರಿಗೆ ತಾಂಬುಲವಾಗಿದ್ದಾರೆ.
ಓವಿಯಾ ಅವರ ಈ ಫೋಟೋಗೆ ಅನೇಕರು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. ಖುದ್ದು ಎಣ್ಣೆ ಹೊಡೆದು ಬೇರೆಯವರಿಗೆ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುತ್ತಿರುವುದು ತಮಾಷೆ ಎಂದಿರುವ ಕೆಲವರು, ಹೇಳೋದು ವೇದಾಂತ .. ತಿನ್ನೋದು ಬದನೆಕಾಯಿ ಎಂಬ ಹಿರಿಯರ ಮಾತು ನಿಮಗೆ ಹೆಚ್ಚು ಸೂಕ್ತವಾಗುತ್ತೆ ಎಂದಿದ್ದಾರೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುವ ಸರ್ಕಾರ ಅದೇ ಮದ್ಯವನ್ನು ತಯಾರಿಸಲು ಅನುಮತಿ ಕೊಡುತ್ತದೆ. ನಿಮ್ಮ ಮಾತು ಕೂಡ ಅದೇ ರೀತಿ ಇದೆ ಎಂದು ಓವಿಯಾ ಅವರ ಕಾಲೆಳೆಯುತ್ತಿದ್ದಾರೆ.


Click it and Unblock the Notifications











