ಲೂಸಿಯಾ ಪವನ್ - ಫಹಾದ್ ಫಾಸಿಲ್ ಚಿತ್ರ ಘೋಷಿಸಿದ ಹೊಂಬಾಳೆ; ಇದೇನಾ ಅಪ್ಪು ಮಾಡಬೇಕಿದ್ದ ದ್ವಿತ್ವ?
ಹೊಂಬಾಳೆ ಫಿಲ್ಮ್ಸ್ ಸದ್ಯ ಸಾಕಷ್ಟು ಬ್ಯುಸಿ ಇರುವ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲೊಂದು. ರಾಜಕುಮಾರ ಹಾಗೂ ಕೆಜಿಎಫ್ ಚಿತ್ರಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡು ತನ್ನ ಮೊದಲೆರಡು ಚಿತ್ರಗಳಲ್ಲಿ ಆಗಿದ್ದ ಹಿನ್ನಡೆಯಿಂದ ಹೊರ ಬಂದ ಹೊಂಬಾಳೆ ಫಿಲ್ಮ್ಸ್ ಸದ್ಯ ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ಮಲಯಾಳಂ ಚಿತ್ರಗಳನ್ನೂ ಸಹ ನಿರ್ಮಿಸುತ್ತಿದೆ..
ತೆಲುಗಿನಲ್ಲಿ ಪ್ರಭಾಸ್ ಹಾಗೂ ಜೂನಿಯರ್ ಎನ್ಟಿಆರ್ ಚಿತ್ರಗಳು ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಟೈಸನ್ ಸಿನಿಮಾವನ್ನು ಘೋಷಿಸಿದ್ದ ಹೊಂಬಾಳೆ ಫಿಲ್ಮ್ಸ್ ಕನ್ನಡದಲ್ಲಿ ರಾಘವೇಂದ್ರ ಸ್ಟೋರ್ಸ್ ಮತ್ತು ಯುವ ರಾಜ್ ಕುಮಾರ್ ಪ್ರಥಮ ಚಿತ್ರವನ್ನು ನಿರ್ಮಿಸುತ್ತಿದೆ ಹಾಗೂ ಸಂಸ್ಥೆಯ ಕಾಂತಾರ ಸಿನಿಮಾ ಬಿಡುಗಡೆಗೊಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ದಿನವೇ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಮಲಯಾಳಂ ಸಿನಿಮಾವನ್ನು ಘೋಷಣೆ ಮಾಡಿದೆ.
ಹೌದು, ನಿನ್ನೆ ( ಸೆಪ್ಟೆಂಬರ್ 29 ) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಹೊಂಬಾಳೆ ಫಿಲ್ಮ್ಸ್ ನಾಳೆ ದಿನದಂದು ದೊಡ್ಡ ಘೋಷಣೆಯೊಂದನ್ನು ಮಾಡಲಿದ್ದೇವೆ ಎಂದು ಬರೆದುಕೊಂಡಿತ್ತು. ಅದರಂತೆ ಇದೀಗ ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಚಿತ್ರದ ಶೀರ್ಷಿಕೆಯನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದ್ದು ಈ ಚಿತ್ರಕ್ಕೆ ಮಲಯಾಳಂ ನಟ ಫಹಾದ್ ಫಾಸಿಲ್ ನಾಯಕ ನಟನಾಗಿದ್ದಾರೆ. ಈ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನಾನಾ ಕಾರಣಗಳಿಂದ ಚರ್ಚೆಗೊಳಪಟ್ಟಿದೆ.

ಧೂಮಂ ಎಂದು ಟೈಟಲ್ ಘೋಷಣೆ
ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿರುವ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಧೂಮಂ ಎಂದು ಟೈಟಲ್ ಇಡಲಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ತಯಾರಾಗಲಿದ್ದು, ಕೇವಲ ಮಲಯಾಳಂ ಅಕ್ಷರದ ಪೋಸ್ಟರ್ ಅನ್ನು ಮಾತ್ರ ಹೊಂಬಾಳೆ ಫಿಲ್ಮ್ಸ್ ಹಚ್ಚಿಕೊಂಡಿದೆ. ಹೀಗೆ ಕೇವಲ ಮಲಯಾಳಂನಲ್ಲಿ ಮಾತ್ರ ಪೋಸ್ಟರ್ ಹಂಚಿಕೊಂಡಿರುವುದಕ್ಕೆ ಹೊಂಬಾಳೆ ಫಿಲ್ಮ್ಸ್ ನಿರೀಕ್ಷಿತ ಟೀಕೆಗಳನ್ನು ಎದುರಿಸುತ್ತಿದೆ.

ಅಕ್ಟೋಬರ್‌ನಲ್ಲಿ ಶೂಟಿಂಗ್ ಶುರ, ಮುಂದಿನ ಬೇಸಿಗೆಗೆ ಬಿಡುಗಡೆ
ಇನ್ನು ಧೂಮ ಚಿತ್ರದಲ್ಲಿ ನಾಯಕನಾಗಿ ಫಹಾದ್ ಪಾಸಿಲ್ ಅಭಿನಯಿಸುತ್ತಿದ್ದರೆ, ನಾಯಕಿಯಾಗಿ ಸೂರರೈ ಪೊಟ್ರು ಖ್ಯಾತಿಯ ಅಪರ್ಣಾ ಬಾಲಮುರುಳಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಇದೇ ಅಕ್ಟೋಬರ್ 9ರಂದು ಚಿತ್ರೀಕರಣವನ್ನು ಆರಂಭಿಸಲಿದ್ದು ಮುಂದಿನ ವರ್ಷದ ಬೇಸಿಗೆಗೆ ಚಿತ್ರ ತೆರೆ ಕಾಣಲಿದೆ. ಇನ್ನು ಈ ಚಿತ್ರ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗುತ್ತೋ ಅಥವಾ ಮಲಯಾಳಂನಲ್ಲಿ ತಯಾರಾಗಿ ಕನ್ನಡಕ್ಕೆ ಡಬ್ ಆಗುತ್ತೋ ಎಂಬ ಪ್ರಶ್ನೆ ಎದ್ದಿದೆ.

ಅಪ್ಪು ನಟಿಸಬೇಕಿದ್ದ ದ್ವಿತ್ವ ಇದೇನಾ?
ಇನ್ನು ಇದು ಪವನ್ ಕುಮಾರ್ ನಿರ್ದೇಶನದ ಸಿನಿಮಾ ಎಂಬ ವಿಷಯ ತಿಳಿಯುತ್ತಿದ್ದಂತೆ ಪುನೀತ್ ನಟಿಸಬೇಕಿದ್ದ ಬಹುಭಾಷೆಯ ದ್ವಿತ್ವ ಚಿತ್ರವೇ ಈ ಚಿತ್ರ ಎಂದು ಹಲವಾರು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಪವನ್ ಕುಮಾರ್ ದ್ವಿತ್ವ ಚಿತ್ರದ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಪುನೀತ್ ನಟಿಸಲಿದ್ದು, ಮಲಯಾಳಂ ಮತ್ತು ತಮಿಳು ಅವತರಣಿಕೆಯಲ್ಲಿ ಫಹಾದ್ ಫಾಸಿಲ್ ನಟಿಸಲಿದ್ದಾರೆ ಎಂದಿದ್ದರು. ಈಗ ಫಹಾದ್ ಫಾಸಿಲ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ ಅಡಿಯಲ್ಲಿ ಈ ಧೂಮ ಚಿತ್ರ ಘೋಷಣೆಯಾಗಿರುವುದರಿಂದ ಈ ಅನುಮಾನ ಹೆಚ್ಚಾಗಿದೆ.

ದ್ವಿತ್ವ ಸದ್ಯಕ್ಕಿಲ್ಲ ಎಂದಿದ್ರು ಪವನ್
ಇನ್ನು ಈ ಹಿಂದೆ ಸಂದರ್ಶನದಲ್ಲಿ ಪವನ್ ಕುಮಾರ್ ದ್ವಿತ್ವ ಚಿತ್ರದಲ್ಲಿ ಅಪ್ಪು ಅವರ ಬದಲಾಗಿ ಯಾರನ್ನೂ ಆಯ್ಕೆ ಮಾಡಲಾಗಿಲ್ಲ ಹಾಗೂ ಸದ್ಯಕ್ಕೆ ಆ ಚಿತ್ರ ಆರಂಭಗೊಳ್ಳುವುದಿಲ್ಲ ಎಂದಿದ್ದರು. ಇನ್ನು ದ್ವಿತ್ವ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಗೂ ಮತ್ತು ಈ ಚಿತ್ರದ ಪೋಸ್ಟರ್ ಹಾಗೂ ಶೀರ್ಷಿಕೆಗೂ ಸಾಮ್ಯತೆ ಇಲ್ಲದ ಕಾರಣ ಇದು ದ್ವಿತ್ವ ಚಿತ್ರ ಅಲ್ಲ ಎಂದು ಹೇಳಬಹುದು.


Click it and Unblock the Notifications











