ಕನ್ನಡದ ಬಳಿಕ ಮಲಯಾಳಂ ಚಿತ್ರರಂಗಕ್ಕೆ 'ಲೈಕಾ' ಎಂಟ್ರಿ: ಮೋಹನ್ ಲಾಲ್ ಅವರ ಲೂಸಿಫರ್-2ಗೆ ಬಂಡವಾಳ
ದಕ್ಷಿಣದ ಕೆಲವು ದೊಡ್ಡ ನಟರೊಂದಿಗೆ ಕೆಲಸ ಮಾಡಿರುವ ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಪೊನ್ನಿಯಿನ್ ಸೆಲ್ವನ್: 1 ಮತ್ತು ಪೊನ್ನಿಯಿನ್ ಸೆಲ್ವನ್: 2 , ಇತ್ತೀಚೆಗೆ ಬಿಡುಗಡೆಯಾದ ಚಂದ್ರಮುಖಿ 2, ಮುಂಬರುವ ಇಂಡಿಯನ್ 2 ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ಸ್ ಮಾಲಿವುಡ್‌ಗೆ ಕಾಲಿಟ್ಟಿದೆ.
ಇತ್ತೀಚೆಗಷ್ಟೇ ನಟ ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದ ಸಂಸ್ಥೆ ಈಗ ಅದ್ಧೂರಿಯಾಗಿ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸಿನಿಮಾಕ್ಕೆ ಬಂಡವಾಳ ಹೂಡಲಿದೆ. ಮೋಹನ್ ಲಾಲ್ ಅಭಿನಯದ ಸೂಪರ್ ಹಿಟ್ ಚಿತ್ರ ಲೂಸಿಫರ್ ಪಾರ್ಟ್-2ಗೆ ಬಂಡವಾಳ ಹೂಡುತ್ತಿದೆ. ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಲೈಕಾ ಪ್ರೋಡಕ್ಷನ್ ಅನ್ನು ಮಾಲಿವುಡ್‌ಗೆ ಸ್ವಾಗತಿಸಿದ್ದಾರೆ.

ಇಂಡಿಯನ್, ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ, 2.0, ಖೈದಿ 150ಯಂತಹ ಅದ್ಧೂರಿ ಹಾಗೂ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ಲೈಕಾ ಪ್ರೊಡಕ್ಷನ್ಸ್ ಕನ್ನಡದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾವನ್ನು ನಿರ್ಮಿಸುವುದಾಗಿ ಘೋಷಿಸಿತ್ತು.
ಲೈಕಾ ಪ್ರೋಡಕ್ಷನ್‌ನ ಸುಭಾಷ್ ಕರಣ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಪೃಥ್ವಿ ರಾಜ್ ಸುಕುಮಾರ್ ಜೊತೆ ಕೈ ಜೋಡಿಸಿದ್ದಾರೆ. 2019 ರಲ್ಲಿ ರಿಲೀಸ್ ಆಗಿದ್ದ ಸೂಪರ್ ಹಿಟ್ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಲೂಸಿಫರ್ ಸಿನಿಮಾದ ಮುಂದುವರೆದ ಭಾಗ ಲೂಸಿಫರ್ ಪಾರ್ಟ್-2ಗೆ ನಿರ್ದೇಶಕ ಪೃಥ್ವಿರಾಜ್ ಸುಕುಮಾರ್ ಸಜ್ಜಾಗಿದ್ದು, ಅವರ ಬೆಂಬಲಕ್ಕೆ ಲೈಕಾ ಕೈ ಜೋಡಿಸಿದೆ.

ಲೂಸಿಫರ್ ಎರಡನೇ ಭಾಗಕ್ಕೆ ಎಂಪುರನ್ (L2E Empuraan) ಎಂಬ ಶೀರ್ಷಿಕೆ ಇಡಲಾಗಿದೆ. ಮಲಯಾಳಂನ ಖ್ಯಾತ ನಿರ್ಮಾಣ ಸಂಸ್ಥೆ ಆಶೀರ್ವಾದ ಸಿನಿಮಾಸ್ ಜೊತೆಗೂಡಿ ಲೈಕಾ ಪ್ರೋಡಕ್ಷನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಜಿ.ಕೆ.ಎಂ. ತಮಿಳ್ ಕುಮಾರನ್ ಲೈಕಾ ಪ್ರೊಡಕ್ಷನ್‌ನ ಮುಖ್ಯಸ್ಥರಾಗಿದ್ದಾರೆ. ಮುರಳಿ ಗೋಪಿ ಲೂಸಿಫರ್ ಪಾರ್ಟ್-2ಗೆ ಚಿತ್ರಕಥೆ ಬರೆಯುತ್ತಿದ್ದು, ಸುಜಿತ್ ವಾಸುದೇವ್ ಛಾಯಾಗ್ರಹಣ ಸಿನಿಮಾಗೆ ಇರಲಿದೆ. ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ.
ಲೂಸಿಫರ್ ಪಾರ್ಟ್-2 ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣವಾಗಿದೆ. 'ಎಂಪುರನ್' ಅಧಿಕೃತ ಘೋಷಣೆಯ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಲೂಸಿಫರ್ ಪಾರ್ಟ್-2 ಚಿತ್ರೀಕರಣ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ.


Click it and Unblock the Notifications










