ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಮನೆ, ಕಚೇರಿಗಳ ಮೇಲೆ ಇಡಿ ದಾಳಿ
ಮಲಯಾಳಂ ಖ್ಯಾತ ನಟರಿಗೆ ಇಡಿ ಶಾಕ್ ಕೊಟ್ಟಿದೆ. ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್‌ಮೆಂಟ್ ಆಕ್ಟ್ (FEMA) ನಿಬಂಧನೆಗಳ ಅಡಿಯಲ್ಲಿ, ಜಾರಿ ನಿರ್ದೇಶನಾಲಯದ (ED) ಕೊಚ್ಚಿ ವಲಯ ಬುಧವಾರ(ಅಕ್ಟೋಬರ್ 8) ಕೇರಳ ಮತ್ತು ತಮಿಳುನಾಡಿನಾದ್ಯಂತ 17 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ನಟರಾದ ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್ ಹಾಗೂ ಅಮಿತ್ ಚಕ್ಕಲಕ್ಕಲ್ ಮನೆಗಳ ಮೇಲೂ ದಾಳಿ ನಡೆದಿದೆ.
ಐಷಾರಾಮಿ ಕಾರುಗಳ ಅಕ್ರಮ ಸಾಗಣೆ ಮತ್ತು ಅದಕ್ಕೆ ಸಂಬಂಧಿಸಿದ ಅನಧಿಕೃತ ವಿದೇಶಿ ವಿನಿಮಯ ವಹಿವಾಟುಗಳ ಕುರಿತು ನಡೆಯುತ್ತಿರುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎರ್ನಾಕುಲಂ, ತ್ರಿಶೂರ್, ಕೋಳಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಕಳೆದ ಸೆಪ್ಟೆಂಬರ್ 23 ರಂದು ಕಸ್ಟಮ್ಸ್ (ಪ್ರಿವೆಂಟಿವ್) ಕಮಿಷನರೇಟ್, ಕೊಚ್ಚಿ ನಡೆಸಿದ ಪ್ರಮುಖ ದಾಳಿಯ ನಂತರ ಈ ಇತ್ತೀಚಿನ ಕ್ರಮ ಕೈಗೊಳ್ಳಲಾಗಿದೆ. ಆ ಕಾರ್ಯಾಚರಣೆಯಲ್ಲಿ ಭೂತಾನ್‌ನಿಂದ ಅಕ್ರಮವಾಗಿ ಸಾಗಿಸಲಾದ 36 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸಿನಿಮಾ ತಾರೆಯರ ಮನೆಗಳು ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳಿಂದ ಈ ಕಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇಂಡೋ-ಭೂತಾನ್ ಮತ್ತು ಇಂಡೋ-ನೇಪಾಳ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್, ಡಿಫೆಂಡರ್, ಮತ್ತು ಮಸೆರಾಟಿಯಂತಹ ವಾಹನಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ತೊಡಗಿರುವ ವ್ಯವಸ್ಥಿತ ಜಾಲದ ಬಗ್ಗೆ ಇಡಿ ಮಾಹಿತಿ ಕಲೆ ಹಾಕಿತ್ತು. ಪ್ರಾಥಮಿಕ ತನಿಖೆಯಲ್ಲಿ ಕೊಯಮತ್ತೂರ್ ಮೂಲದ ಸಿಂಡಿಕೇಟ್ ಒಂದು ಭಾರತೀಯ ಸೇನೆ, ಯುಎಸ್ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯವು ನೀಡಿರುವ ನಕಲಿ ದಾಖಲೆಗಳನ್ನು ಬಳಸಿ ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಮೋಸದ ವಾಹನ ನೋಂದಣಿಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ.

ಹೀಗೆ ಅಕ್ರಮವಾಗಿ ಆಮದರು ಮಾಡಿಕೊಂಡಿದ್ದ ಕಾರುಗಳನ್ನು ಸಿನಿಮಾ ನಟರು ಸೇರಿದಂತೆ ಶ್ರೀಮಂತರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ಇಡಿ ತನಿಖೆಯಲ್ಲಿ ಫೆಮಾ ಸೆಕ್ಷನ್‌ಗಳು 3, 4, ಮತ್ತು 8ರ ಉಲ್ಲಂಘನೆಯಾಗಿರುವುದು ಗೊತ್ತಾಗಿದೆ.
ಇದು ಗಡಿಯಾಚೆಗಿನ ಹವಾಲಾ ಪಾವತಿ ಹಾಗೂ ಅನಧಿಕೃತ ವಿದೇಶಿ ವಿನಿಮಯ ವಹಿವಾಟುಗಳನ್ನು ಒಳಗೊಂಡಿದೆ. ಸದ್ಯ ಏಜೆನ್ಸಿಯು ಹಣದ ಹರಿವನ್ನು ಪತ್ತೆಹಚ್ಚುತ್ತಿದೆ ಮತ್ತು ಈ ಅಕ್ರಮ ವ್ಯಾಪಾರದ ಎಲ್ಲಾ ಫಲಾನುಭವಿಗಳನ್ನು ಗುರುತಿಸುತ್ತಿದೆ.
ಕೊಚ್ಚಿಯಲ್ಲಿರುವ ಪೃಥ್ವಿರಾಜ್ ಅವರ ನಿವಾಸಕ್ಕೆ ಭೇಟಿ ನೀಡಿದ ಅಧಿಕಾರಿಗಳು ಯಾವುದೇ ವಾಹನಗಳನ್ನು ವಶಪಡಿಸಿಕೊಂಡಿಲ್ಲ. ದುಲ್ಕರ್ ಸಲ್ಮಾನ್ ತಮ್ಮ ಕಾರುಗಳ ಬಿಡುಗಡೆಗಾಗಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕಳೆದ ಮಂಗಳವಾರ, ಹೈಕೋರ್ಟ್ ಕಸ್ಟಮ್ಸ್ ಕಾಯ್ದೆಯಡಿ ನ್ಯಾಯನಿರ್ಣಯ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ನಿರ್ದೇಶಿಸಿದೆ.
ಕೆಲ ದಿನಗಳ ಹಿಂದೆ ಕಸ್ಟಮ್ಸ್ ಇಲಾಖೆಯ 'ನುಮ್ಖೋರ್' ಎಂಬ ಕಾರ್ಯಾಚರಣೆಯಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ದತ್ತಾಂಶದಲ್ಲಿ ಸುಮಾರು 150-200 ಐಷಾರಾಮಿ ಕಾರುಗಳ ಅಕ್ರಮ ನೋಂದಣಿ ವಿವರಗಳು ಪತ್ತೆಯಾಗಿತ್ತು. ಮೋಟಾರು ವಾಹನ ಇಲಾಖೆ, ಭಯೋತ್ಪಾದನಾ ನಿಗ್ರಹ ದಳ ಮತ್ತು ಕೇರಳ ಪೊಲೀಸರು ಈ ಕಾರ್ಯಾಚರಣೆಗೆ ಬೆಂಬಲ ನೀಡಿದ್ದರು. ದಾಳಿ ವೇಳೆ ದುಲ್ಕರ್ ಸಲ್ಮಾನ್ ಮತ್ತು ಅಮಿತ್ ಚಕ್ಕಲಕ್ಕಲ್ ಒಡೆತನದ ಹಲವು ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು.


Click it and Unblock the Notifications











