ಶಾಲೆಯಲ್ಲೇ ಪರಿಚಯ- ಪ್ರೀತಿ, ಕೊನೆಗೂ ಕೀರ್ತಿ ಮದ್ವೆ ಫಿಕ್ಸ್; ಮಹಾನಟಿ ಮನಗೆದ್ದವನ್ಯಾರು?
ಬಹುಭಾಷಾ ನಟಿ ಕೀರ್ತಿ ಸುರೇಶ್ ಮದುವೆ ನಿಶ್ಚಯವಾಗಿದೆ ಎಂದು ವರದಿಯಾಗಿದೆ. ಮುಂದಿನ ತಿಂಗಳು ಗೋವಾದಲ್ಲಿ ಅದ್ಧೂರಿಯಾಗಿ ಮದುವೆಗೆ ಸಿದ್ಧತೆ ನಡೀತಿದೆ. ಬಹಳ ದಿನಗಳಿಂದ ಆಕೆಯ ಮದುವೆ ಬಗ್ಗೆ ಅಂತೆಕಂತೆ ಸುದ್ದಿ ಹರಿದಾಡುತ್ತಿತ್ತು. ಈ ಬಾರಿ ಕೀರ್ತಿ ಮದುವೆ ಬಹುತೇಕ ಕನ್ಫರ್ಮ್ ಎನ್ನಲಾಗ್ತಿದೆ.
ಶಾಲಾ ದಿನಗಳಲ್ಲಿ ಪರಿಚಯವಾಗಿದ್ದ ಸ್ನೇಹಿತನ ಜೊತೆಗೆ ನಟಿ ಕೀರ್ತಿ ಸುರೇಶ್ ಮದುವೆ ಆಗುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಆತ ಸದ್ಯ ದುಬೈನಲ್ಲಿ ದೊಡ್ಡಉದ್ಯಮಿ ಆಗಿ ಗುರ್ತಿಸಿಕೊಂಡಿದ್ದಾನೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚೆನ್ನೈನಲ್ಲಿ ಹುಟ್ಟಿ ಬೆಳೆದ ಕೀರ್ತಿ ಸುರೇಶ್ ತಂದೆ ಮಲಯಾಳಂ ಚಿತ್ರದ ನಿರ್ಮಾಪಕ. ತಾಯಿ ತಮಿಳು ನಟಿ. ಬಾಲನಟಿಯಾಗಿ ಕೀರ್ತಿ ಚಿತ್ರರಂಗ ಪ್ರವೇಶಿಸಿದರು. ಬಳಿಕ ನಾಯಕಿ ಕೂಡ ಆದರು.

ಆರಂಭದಲ್ಲಿ ದೊಡ್ಡ ಬ್ರೇಕ್ ಸಿಗಲಿಲ್ಲ. ಆದರೆ ತೆಲುಗಿನ 'ಮಹಾನಟಿ' ಚಿತ್ರದಿಂದ ಒಳ್ಳೆ ಹೆಸರು ಬಂತು. ಆ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. ಬಳಿಕ ಕೀರ್ತಿ ಹಿಂತಿರುಗಿ ನೋಡಲಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮೆರೆದರು.
ಇತ್ತೀಚೆಗೆ ಕೀರ್ತಿ ಸುರೇಶ್ ಬಾಲಿವುಡ್‌ಗೂ ಪ್ರವೇಶಿಸಿದ್ದಾರೆ. ಚೊಚ್ಚಲ ಬಾಲಿವುಡ್ ಚಿತ್ರ 'ಬೇಬಿ ಜಾನ್' ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಅಷ್ಟರಲ್ಲೇ ಮದುವೆ ಸುದ್ದಿ ಕೇಳಿಬಂದಿದೆ. ಇಷ್ಟು ದಿನ ಚಿತ್ರರಂಗದವರ ಜೊತೆ ಆಕೆಯ ಮದುವೆ ವದಂತಿ ಕೇಳಿಬರ್ತಿತ್ತು. ಆದರೆ ಇದೀಗ ಆಂಟನಿ ತಟ್ಟಿಲ್ ಎಂಬ ಉದ್ಯಮಿ ಜೊತೆ ಕೀರ್ತಿ ಕೈ ಹಿಡಿಯುವ ಬಗ್ಗೆ ಊಹಾಪೋಹ ಶುರುವಾಗಿದೆ.

ಕಳೆದೆರಡು ದಿನಗಳಿಂದ ಕೀರ್ತಿ ಸುರೇಶ್ ಮದುವೆ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಈವರಿಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅದು ಸುಳ್ಳು ಎನ್ನುವ ಸ್ಪಷ್ಟನೆ ಕೂಡ ಬಂದಿಲ್ಲ. ಹಾಗಾಗಿ ಇದು ನಿಜವೇ ಎಂದು ವರದಿ ಆಗುತ್ತಿದೆ. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನಡೀತಿದೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಎದುರಾದ ಪ್ರಶ್ನೆಗೆ ಸಮಯ ಬಂದಾಗ ಎಲ್ಲಾ ಗೊತ್ತಾಗುತ್ತದೆ ಎಂದು ಕೀರ್ತಿ ಹೇಳಿದ್ದರು. ಅಂದೇ ಆಕೆಯ ಮದುವೆ ಬಗ್ಗೆ ಸುಳಿವು ಸಿಕ್ಕಿತ್ತು.
ಆಂಟನಿ ತಟ್ಟಿಲ್ ಹಾಗೂ ಕೀರ್ತಿ ಒಂದು ಸ್ಕೂಲ್‌ನಲ್ಲಿ ಓದಿದವರು. ಆತ ಕೊಚ್ಚಿನ್ ಮೂಲದವನು. ಸದ್ಯ ದುಬೈನಲ್ಲಿ ಉದ್ಯಮಿಯಾಗಿದ್ದಾರೆ. ಕೇರಳದಲ್ಲಿ ಕೂಡ ರೆಸಾರ್ಟ್ ಚೈನ್ ಅನ್ನು ಕೂಡ ಆಂಟನಿ ಹೊಂದಿದ್ದಾನೆ ಎನ್ನಲಾಗ್ತಿದೆ. ಒಟ್ಟಾರೆ ಕೀರ್ತಿ ಮದುವೆ ಸುದ್ದಿ ಕೇಳಿ ಕೆಲ ಪಡ್ಡೆ ಹುಡುಗರ ಹೃದಯ ನುಚ್ಚು ನೂರಾಗಿದೆ.
ಕೀರ್ತಿ ಹಾಗೂ ಆಂಟನಿ ಪ್ರೀತಿಗೆ ಪೋಷಕರು ಕೂಡ ಒಪ್ಪಿಗೆ ಸೂಚಿಸಿದ್ದು ಈಗ ಮದುವೆಯ ಮುದ್ರೆ ಬೀಳುತ್ತಿದೆ ಎಂದು ವರದಿಯಾಗಿದೆ. ಈಗಾಗಲೇ ಗೋವಾದಲ್ಲಿ ಮದುವೆ ತಯಾರಿ ಕೂಡ ಆರಂಭವಾಗಿದೆ ಎನ್ನಲಾಗ್ತಿದೆ. ಸದ್ಯ ಕೇರಳ ಕುಟ್ಟಿ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದು ಮದುವೆ ಬಳಿಕ ನಟನೆ ಮುಂದುವರೆಸುತ್ತಾರಾ? ಕಾದು ನೋಡಬೇಕಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ರಘುತಾತ' ಚಿತ್ರದಲ್ಲಿ ಕೀರ್ತಿ ಸುರೇಶ್ ಕೊನೆಯದಾಗಿ ನಟಿಸಿದ್ದರು. 'ರಿವಾಲ್ವರ್ ರೀಟಾ' ಹಾಗೂ 'ಕನ್ನಿವೆಡಿ' ಎಂಬ ಮತ್ತೆರಡು ಚಿತ್ರಗಳು ಕೈಯಲ್ಲಿವೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಡಿಸೆಂಬರ್ 25ಕ್ಕೆ 'ಬೇಬಿಜಾನ್' ಸಿನಿಮಾ ತೆರೆಗೆ ಬರಲಿದೆ. ಇನ್ನು ಕೀರ್ತಿ ಮದುವೆಗೆ ದಳಪತಿ ವಿಜಯ್, ರಜನಿಕಾಂತ್, ಚಿರಂಜೀವಿ, ಅಜಿತ್, ವಿಜಯ್ ದೇವರಕೊಂಡ, ಸಮಂತಾ ಸೇರಿದಂತೆ ಸಾಕಷ್ಟು ನಟ, ನಟಿಯರಿಗೆ ಆಮಂತ್ರಣ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.


Click it and Unblock the Notifications











