"ದಕ್ಷಿಣದ ಚಿತ್ರಗಳಲ್ಲಿ ನಟಿಯರ ಆ ಭಾಗಕ್ಕೆ ಜೂಮ್ ಹಾಕಿ ನೋಡ್ತಾರೆ"; ಮಾಳವಿಕಾ ಮೋಹನನ್
ಮಾಲಿವುಡ್ ನಟಿ ಮಾಳವಿಕಾ ಮೋಹನನ್ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೆ. ವಿ ಮೋಹನನ್ ಮಗಳಾದ ಮಾಳವಿಕಾ ಚಿತ್ರರಂಗಕ್ಕೆ ಬರೋದು ಕಷ್ಟವೇನು ಆಗಲಿಲ್ಲ.
ಬಿಂದಾಸ್ ಬೆಡಗಿಗೆ ಒಳ್ಳೆ ಅವಕಾಶಗಳು ಸಿಗುತ್ತಿಲ್ಲ. 'ತಂಗಳಾನ್' ಚಿತ್ರದಲ್ಲಿ ಆರತಿಯಾಗಿ ಮಾಳವಿಕಾ ಉತ್ತಮವಾಗಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಬಿಂದಾಸ್ ಫೋಟೊಶೂಟ್ ಮೂಲಕ ಗಮನ ಸೆಳೆಯುತ್ತಾರೆ. ಸದ್ಯ ಸಂದರ್ಶನವೊಂದರಲ್ಲಿ ಮಾತನಾಡಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸಂಗತಿ ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ಹುಟ್ಟಿ ಬೆಳೆದವರು ಮಾಳವಿಕಾ ಮೋಹನನ್. ಆದರೆ ದಕ್ಷಿಣದ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾಗ ಒಂದು ವಿಚಿತ್ರ ಸಂಗತಿಯನ್ನು ಗಮನಿಸಿದೆ ಎಂದಿದ್ದಾರೆ. "ದಕ್ಷಿಣದಲ್ಲಿ ನಟಿಯರ ಫೋಟೊಗಳನ್ನು ಜೂಮ್ ಮಾಡಿ ನೋಡ್ತಾರೆ, ಮುಖ್ಯವಾಗಿ ಹೊಕ್ಕಳು, ಸೊಂಟವನ್ನು ಹೆಚ್ಚು ನೋಡುತ್ತಾರೆ. ಸಿನಿಮಾಗಳಲ್ಲಿ ಕೂಡ ಅದೇ ಭಾಗವನ್ನು ಜೂಮ್ ಮಾಡಿ ತೋರಿಸುತ್ತಾರೆ" ಎಂದು ಮಾಳವಿಕಾ ಹೇಳಿದ್ದಾರೆ.
"ನಟಿಯರು ಬಳಕುವ ಬಳ್ಳಿಯಂತಿರಬೇಕು ಎಂದು ದಕ್ಷಿಣದವರು ಹೆಚ್ಚು ಬಯಸುತ್ತಾರೆ. ನಾನು ಮೊದಲ ಸಿನಿಮಾದಲ್ಲಿ ನಟಿಸಿದಾಗ 21 ವರ್ಷ ವಯಸ್ಸು. ಬಹಳ ತೆಳ್ಳಗಿದ್ದೆ. ಇದೇ ಕಾರಣಕ್ಕೆ ನಾನು ಬಹಳ ಟ್ರೋಲ್ ಎದುರಿಸುವಂತಾಯಿತು. 25 ವರ್ಷ ವಯಸ್ಸಿನ ಬಳಿಕ ನಾನು ದಪ್ಪ ಆಗಿದ್ದು. ಆಗಿನ್ನು ಇನ್‌ಸ್ಟಾಗ್ರಾಮ್ ಹೊಸದು. ಆದರೆ ಫೇಸ್‌ಬುಕ್‌ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಅದು ಆಗ ನನ್ನ ಮೇಲೆ ಪರಿಣಾಮ ಬೀರಿತ್ತು. ಆದರೆ ಈಗ ಟ್ರೋಲ್ ನೋಡಿ ಅಭ್ಯಾಸವಾಗಿದೆ" ಎಂದು ಮಾಳವಿಕಾ ಹೇಳಿದ್ದಾರೆ.
ಮಹಿಳೆಯರ ಸುರಕ್ಷತೆ ಬಗ್ಗೆಯೂ ಇದೇ ಸಂದರ್ಶನದಲ್ಲಿ ಮಾಳವಿಕಾ ಮೋಹನನ್ ಮಾತನಾಡಿದ್ದಾರೆ. ಒಮ್ಮೆ ಮುಂಬೈ ಟ್ರೈನ್‌ನಲ್ಲಿ ತಮಗೆ ಎದುರಾಗಿದ್ದ ಕಹಿ ಅನುಭವದ ಬಗ್ಗೆ ಹೇಳಿದ್ದಾರೆ. "ಆಗ ನಾನಿನ್ನು ಚಿಕ್ಕವಳು, ಸ್ನೇಹಿತರ ಜೊತೆ ಎಲ್ಲೋ ಹೋಗಿ ವಾಪಸ್ ಬರ್ತಿದ್ದೆ. ಲೋಕಟ್ ಟ್ರೈನ್‌ನಲ್ಲಿ ರಾತ್ರಿ 9 ಗಂಟೆ ಸಮಯ. ಕಂಪಾರ್ಟ್‌ಮೆಂಟ್ ಬಹುತೇಕ ಖಾಲಿ ಇತ್ತು. ಒಬ್ಬ ನನ್ನ ಹತ್ತಿರ ಬಂದು ಒಂದು ಮುತ್ತು ಕೊಡ್ತೀಯಾ ಎಂದು ಕೇಳಿದ್ದ. ನಮಗೆ ಶಾಕ್ ಆಗಿತ್ತು. ಆತ ಟ್ರೈನ್ ಒಳಗೆ ಬಂದಿದ್ದರೆ ಏನು ಮಾಡೋದು? ಸಾಕಷ್ಟು ಮಹಿಳೆಯರು ಇಂತಹ ಸನ್ನಿವೇಶಗಳನ್ನು ಎದುರಿಸುತ್ತಾರೆ" ಎಂದು ಮಾಳವಿಕಾ ತಿಳಿಸಿದ್ದಾರೆ.

2013ರಲ್ಲಿ 'ಪಟ್ಟಂಪೊಲೆ' ಮಲಯಾಳಂ ಚಿತ್ರದಲ್ಲಿ ಮಾಳವಿಕಾ ಮೊದಲ ಬಾರಿ ನಟಿಸಿದ್ದರು. ಬಳಿಕ ಕನ್ನಡದ 'ನಾನು ಮತ್ತು ವರಲಕ್ಷ್ಮಿ' ಚಿತ್ರದಲ್ಲಿ ಮಿಂಚಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರದಲ್ಲಿ ಆಕೆ ಟೈಟಲ್ ರೋಲ್ ಪ್ಲೇ ಮಾಡಿದ್ದರು. 2016ರಲ್ಲಿ ಸಿನಿಮಾ ತೆರೆಕಂಡಿತ್ತು. ಆದರೆ ದೊಡ್ಡದಾಗಿ ಗೆಲ್ಲಲಿಲ್ಲ.
ತಮಿಳಿನ 'ಪೇಟಾ' ಹಾಗೂ 'ಮಾಸ್ಟರ್' ಚಿತ್ರಗಳು ತಕ್ಕ ಮಟ್ಟಿಗೆ ಸದ್ದು ಮಾಡಿದ್ದವು. ಆದರೆ ಆ ಎರಡು ಚಿತ್ರಗಳಲ್ಲಿ ನಟಿಸಿ ಮಾಳವಿಕಾಗೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಸದ್ಯ ಪ್ರಭಾಸ್ ಜೋಡಿಯಾಗಿ 'ದಿ ರಾಜಾಸಾಬ್' ಚಿತ್ರದಲ್ಲಿ ಮಾಳವಿಕಾ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. ತಮಿಳು 'ಸರ್ದಾರ್- 2' ಚಿತ್ರದಲ್ಲಿ ಕಾರ್ತಿ ಜೊತೆ ಮಿಂಚಲಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 40 ಲಕ್ಷಕ್ಕೂ ಅಧಿಕಾ ಫಾಲೋವರ್ಸ್ ಅನ್ನು ಮಾಳವಿಕಾ ಹೊಂದಿದ್ದಾರೆ. ಸದಾ ಒಂದಿಲ್ಲೊಂದು ಪೋಸ್ಟ್ ಮೂಲಕ ಸದ್ದು ಮಾಡುತ್ತಾರೆ. ಬಿಂದಾಸ್ ಫೋಟೊಶೂಟ್‌ಗಳಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ. ಅಭಿಮಾನಿಗಳು ರಾಜಾಸಾಬ್ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಮತ್ತಷ್ಟು ಒಳ್ಳೆ ಅವಕಾಶಗಳ ನಿರೀಕ್ಷೆಯಲ್ಲಿ ಮುಂಬೈ ಬೆಡಗಿ ಇದ್ದಾರೆ.


Click it and Unblock the Notifications











