ಮಮ್ಮುಟ್ಟಿ ಇವತ್ತಿಗೂ ಬಹಳ ಮಿಸ್ ಮಾಡಿಕೊಳ್ಳುತ್ತಿರುವ ಆ ಕನ್ನಡ ನಟ ಯಾರು?
ಮಾಲಿವುಡ್ ನಟ ಮಮ್ಮುಟ್ಟಿ ಕನ್ನಡ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಅವರ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಯುಟ್ಯೂಬ್‌ಗೆ ಬಂದಿದೆ. ಕನ್ನಡ ಚಿತ್ರರಂಗದ ಬಗ್ಗೆಯೂ ಮಮ್ಮುಟ್ಟಿ ಅವರಿಗೆ ಅಭಿಮಾನ ಇದೆ. ನಟ ವಿಷ್ಣುವರ್ಧನ್ ಅಂದರೆ ಅವರಿಗೆ ಅಚ್ಚುಮೆಚ್ಚು.
ಸಾಹಸಸಿಂಹ ವಿಷ್ಣುವರ್ಧನ್ ಕನ್ನಡ ಮಾತ್ರವಲ್ಲ ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಮಮ್ಮುಟ್ಟಿ ಜೊತೆ 'ಕೌರವರ್' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಅಂದೇ ದಾದಾ ಖದರ್ ನೋಡಿ ಮಾಲಿವುಡ್ ಸೂಪರ್ ಸ್ಟಾರ್ ಫಿದಾ ಆಗಿದ್ದರು. ಇಬ್ಬರ ನಡುವೆ ಆತ್ಮೀಯ ಒಡನಾಟ ಇತ್ತು. ಇವತ್ತಿಗೂ ವಿಷ್ಣು ಅವರನ್ನು ಮಮ್ಮುಟ್ಟಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹಿರಿಯ ನಟಿ ವಿನಯ ಪ್ರಸಾದ್ ಕಾರ್ಯಕ್ರಮವೊಂದರಲ್ಲಿ ನೆನಪು ಮಾಡಿಕೊಂಡಿದ್ದರು.

400ಕ್ಕೂ ಅಧಿಕ ಸಿನಿಮಾಗಳಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ. ವಯಸ್ಸು 70 ದಾಟಿದ್ರು ಇವತ್ತಿಗೂ ಅವರ ಎನರ್ಜಿ ಕಮ್ಮಿ ಆಗಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕಮಾಲ್ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಮೋಹನ್ ಲಾಲ್ ರೀತಿಯಲ್ಲೇ ಮಮ್ಮುಟ್ಟಿ ಸ್ಟಾರ್ ನಟರಾಗಿ ಗುರ್ತಿಸಿಕೊಂಡಿದ್ದಾರೆ. ಸದ್ಯ ಅವರ ಮಗ ದುಲ್ಕರ್ ಸಲ್ಮಾನ್ ಕೂಡ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
ವಿಷ್ಣುವರ್ಧನ್ ಬಗ್ಗೆ ಮಮ್ಮುಟ್ಟಿ ಅವರಿಗೆ ಬಹಳ ಅಭಿಮಾನ ಇತ್ತು. 2018ರಲ್ಲಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಕಾರ್ಯಕ್ರಮದಲ್ಲಿ ನಟಿ ವಿನಯ ಪ್ರಸಾದ್ ಭಾಗಿ ಆಗಿದ್ದರು. ವೇದಿಕೆಯಲ್ಲಿ ಮಾತನಾಡುತ್ತಾ ಮಮ್ಮುಟ್ಟಿ ಆಡಿದ್ದ ಮಾತನ್ನು ನೆನಪಿಸಿಕೊಂಡಿದ್ದರು. "ನಾನು ಒಂದು ಮಲಯಾಳಂ ಚಿತ್ರದಲ್ಲಿ ನಟಿಸ್ತಿದ್ದೀನಿ. ಮಮ್ಮುಟ್ಟಿ ಚಿತ್ರದ ಹೀರೊ. ಇವತ್ತು ವಿಷ್ಣುವರ್ಧನ್ ಇದ್ದಿದ್ರೆ ಈ ಪಾತ್ರ ಅವ್ರೇ ಮಾಡಬೇಕಿತ್ತು. 'ಕೌರವರ್' ಚಿತ್ರದಲ್ಲಿ ಮಮ್ಮುಟ್ಟಿ- ವಿಷ್ಣು ಒಟ್ಟಿಗೆ ನಟಿಸಿದ್ರು. ವಿಷ್ಣು ಎಷ್ಟು ಸುಂದರವಾಗಿದ್ದಾರೆ, ಎಂಥಹ ಆಕ್ಷನ್ ಮಾಡ್ತಾರೆ ಎಂದು ಹೇಳುತ್ತಿದ್ರು" ಎಂದು ವಿನಯ ಪ್ರಸಾದ್ ನೆನಪಿಸಿಕೊಂಡಿದ್ದರು.

1973ರಲ್ಲಿ 'ಅಲೈಗಳ್' ಎಂಬ ಸಿನಿಮಾ ಮೂಲಕ ವಿಷ್ಣು ತಮಿಳು ಚಿತ್ರರಂಗ ಪ್ರವೇಶಿಸಿದ್ದರು. 1981ರಲ್ಲಿ 'ಅಡಿಮ ಚಂಗಲ' ಎಂಬ ಮಲಯಾಳಂ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಪ್ರೇಮ್ ನಜೀರ್ ಆ ಚಿತ್ರದ ಹೀರೊ. ಬಳಿಕ 1992ರಲ್ಲಿ 'ಕೌರವರ್' ಚಿತ್ರದಲ್ಲಿ ಮಿಂಚಿದ್ದರು. ಹರಿದಾಸ್ ಐಪಿಎಸ್ ಪಾತ್ರದಲ್ಲಿ ಅಬ್ಬರಿಸಿದ್ದರು. ದಾದಾ ಪಾತ್ರಕ್ಕೆ ಚಿತ್ರದಲ್ಲಿ ಬಹಳ ಪ್ರಾಮುಖ್ಯತೆ ಇತ್ತು.
ನಟ ಮಮ್ಮುಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಮತ್ತಷ್ಟು ಸಿನಿಮಾಗಳಲ್ಲಿ ನಟಿಸಿ ರಂಜಿಸಲು ಶಕ್ತಿ ನಿಮಗೆ ದೇವರ ಕರುಣಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 'ಶಿಕಾರಿ' ಎಂಬ ಕನ್ನಡ ಚಿತ್ರದಲ್ಲಿ ಕೂಡ ಅವರು ನಟಿಸಿದ್ದರು. ಅಭಯ್ ಸಿಂಹ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
2012ರಲ್ಲಿ 'ಶಿಕಾರಿ' ಸಿನಿಮಾ ತೆರೆಗೆ ಬಂದಿತ್ತು. ಚಿತ್ರದಲ್ಲಿ ಮಮ್ಮುಟ್ಟಿ ಹಾಗೂ ನಾಯಕಿ ಪೂನಂ ಬಾಜ್ವಾ ದ್ವಿಪಾತ್ರಗಳಲ್ಲಿ ಮಿಂಚಿದ್ದರು. ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿತ್ತು. ಕೆ. ಮಂಜು ಸಿನಿಮಾ ನಿರ್ಮಾಣ ಮಾಡಿದ್ದು ವಿಶೇಷ. ಈ ಹಿಂದೆ ಮಮ್ಮುಟ್ಟಿ ಅವರನ್ನು ಸುದೀಪ್ ಭೇಟಿ ಮಾಡಿದ್ದರು. ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ.


Click it and Unblock the Notifications











