ಲೈಂಗಿಕ ಕಿರುಕುಳದ ಆರೋಪ, ಮಲಯಾಳಂ ನಟ ಎಡವೇಲು ಬಾಬು ಬಂಧನ..!
ಪಾತ್ರಕ್ಕಾಗಿ ಪಲ್ಲಂಗದ ಕಥೆಗಳಿಂದ ತುಂಬಿ ತುಳುಕುತ್ತಿರುವ ಮಲಯಾಳಂ ಚಿತ್ರರಂಗದಲ್ಲಿ ಈಗ ಹೇಮಾ ಆಯೋಗದ ವರದಿಯಿಂದ ಬಂಧನ ಮತ್ತು ಬಿಡುಗಡೆಯ ಭಾಗ್ಯ ಅನೇಕರಿಗೆ ಪ್ರಾಪ್ತಿಯಾಗುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಮಲಯಾಳಂ ನಟ ಹಾಗೂ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಡವೇಲು ಬಾಬು ಅವರನ್ನು ಬಂಧಿಸಲಾಗಿದೆ. ಆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ಹೇಮಾ ವರದಿ ಬಹಿರಂಗವಾದ ಬೆನ್ನಲ್ಲಿಯೇ, ಎಡವೇಲು ಬಾಬು ವಿರುದ್ಧ ಜುಬಿತಾ ಆಂಡಿ ಆರೋಪ ಮಾಡಿದ್ದರು. ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA } ದಲ್ಲಿ ಸದಸ್ಯತ್ವ ಪಡೆಯಲು ಶುಲ್ಕವಾಗಿ ಎರಡು ಲಕ್ಷ ನೀಡುವ ಬದಲು ನನ್ನ ಜೊತೆ ಮಲಗುವಂತೆ ಎಡವೇಲು ಬಾಬು ಬೇಡಿಯನ್ನಿಟ್ಟಿದ್ದ ಎಂದು ಹೇಳಿದ್ದರು.

ಕೇವಲ ಜುಬಿತಾ ಆಂಡಿ ಮಾತ್ರವಲ್ಲ ಮಾಲಿವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೀನು ಮುನೀರ್ ಕೂಡ ಎಡವೇಲು ಬಾಬು ವಿರುದ್ದ ಅತ್ಯಾಚಾರದ ಆರೋಪ ಮಾಡಿದ್ದರು. ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಸದಸ್ಯತ್ವದ ಅರ್ಜಿಗೆ ನನ್ನನ್ನು ಸಂಪರ್ಕಿಸಿದ್ದ ಕಾರ್ಯದರ್ಶಿ ಎಡವೇಲ ಬಾಬು ಆ ನಂತರ ಸದಸ್ಯತ್ವ ನೀಡುವ ನೆಪದಲ್ಲಿ ತನ್ನ ಫ್ಲಾಟ್‌ಗೆ ಕರೆದು ದೈಹಿಕ ಹಿಂಸೆಯನ್ನು ನೀಡಿದ್ದಾನೆ ಎಂದು ಮೀನು ದೂರಿದ್ದರು.
ಈ ಹಿನ್ನೆಲೆ ಎಡವೇಲ ಬಾಬು ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 376ರ ಅಡಿ ಅತ್ಯಾಚಾರದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆ ಇಂದು ಮೂರು ಘಂಟೆಗಳ ಕಾಲ ವಿಚಾರಣೆಯನ್ನು ನಡೆಸಿದ್ದ ವಿಶೇಷ ಅಧಿಕಾರಿಗಳು ಎಡವೇಲು ಬಾಬು ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಆ ನಂತರ ಪ್ರಕರಣದ ವಿಚಾರಣೆಯನ್ನು ನಡೆಸಿದ ಎರ್ನಾಕುಲಂನ ಸೆಷನ್ಸ್ ನ್ಯಾಯಾಲಯ ಎಡವೇಲು ಬಾಬು ಅವರಿಗೆ ಜಾಮೀನು ಮಂಜೂರು ಮಾಡಿತು.

ಕೇವಲ ಎಡವೇಲು ಬಾಬು ಮಾತ್ರ ಅಲ್ಲ ನಿನ್ನೆ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಡಳಿತಾರೂಢ ಸಿಪಿಎಂ[ಎಂ]ನ ಶಾಸಕ ಮತ್ತು ನಟ ಮುಕೇಶ್ ಅವರನ್ನು ಕೂಡ ಬಂಧಿಸಿದ್ದರು. ಆದರೆ, ಮುಖೇಶ್ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದ ಹಿನ್ನೆಲೆ ಅವರನ್ನು ಕೂಡ ನಿನ್ನೆಯೇ ಬಿಡುಗಡೆ ಮಾಡಲಾಯಿತು. ಎಡವೇಲ ಬಾಬು ವಿರುದ್ಧ ಆರೋಪ ಮಾಡಿದ್ದ ಮೀನು ಮುನೀರ್ ಅವರೇ ಮುಖೇಶ್ ಮೇಲೂ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಹಾಸಿಗೆ ಹಂಚಿಕೊಳ್ಳದ ಕಾರಣಕ್ಕೆ ನನಗೆ ಮುಖೇಶ್ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನ ಸದಸ್ಯತ್ವವನ್ನು ನೀಡಲಿಲ್ಲ ಎಂದು ಹೇಳಿದ್ದರು
ಅಂದ್ಹಾಗೇ ಮಲಯಾಳಂ ಚಿತ್ರರಂಗದಲ್ಲಿನ ಮಹಿಳೆಯರ ಸುರಕ್ಷತೆಯ ಕುರಿತು ಅಧ್ಯಯನ ಮಾಡಿದ್ದ ಜಸ್ಟಿಸ್ ಹೇಮಾ ಮತ್ತು ಅವರ ಆಯೋಗ ಪಾತ್ರಕ್ಕಾಗಿ ಪಲ್ಲಂಗ ಹತ್ತುವಂತೆ ನಾಯಕಿಯರನ್ನು ಪೀಡಿಸುವ ಬಹುದೊಡ್ಡ ವರ್ಗ ಮಲಯಾಳಂ ಚಿತ್ರರಂಗದಲ್ಲಿದೆ ಎನ್ನುವ ಆಘಾತಕಾರಿ ವಿಚಾರವನ್ನು ತಮ್ಮ ವರದಿಯಲ್ಲಿ ಹೊರಗಡೆವಿತ್ತು. ಈ ವರದಿಯಲ್ಲಿ ಅನೇಕ ನಾಯಕಿಯರು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಇನ್ನೂ ಮಲಯಾಳಂ ಚಿತ್ರರಂಗ ಕಾಮುಕರಿಂದ ತುಂಬಿ ತುಳುಕುತ್ತಿದೆ ಎಂದು ಈ ವರದಿಯಲ್ಲಿ ಹೇಳಿರುವ ಆಯೋಗ, ಕನಸೊತ್ತು ಚಿತ್ರರಂಗಕ್ಕೆ ಬರುವ ಯುವತಿಯರ ಬಳಿ ಚಿತ್ರ ಮತ್ತು ಪಾತ್ರ ಬೇಕೆಂದರೆ ನಮ್ಮ ಜೊತೆ ರಾಜಿಯಾಗಬೇಕೆಂದು ನಿರ್ಮಾಪಕರು,ನಿರ್ದೇಶಕರು ಮಾತ್ರವಲ್ಲದೇ ಚಿತ್ರರಂಗದ ಸ್ಟಾರ್‌ಗಳು ಕೂಡ ಯಾವ ನಾಚಿಕೆ ಇಲ್ಲದೇ ಹೇಳಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಲೈಂಗಿಕ ಬೇಡಿಕೆಯನ್ನು ಪೂರೈಸುವಂತೆ ಮಹಿಳೆಯರಿಗೆ ಮಲಯಾಳಂ ಚಿತ್ರರಂಗದಲ್ಲಿ ಒತ್ತಾಯ ಮಾಡಲಾಗುತ್ತೆ ಎಂದು ಕೂಡ ಉಲ್ಲೇಖಿಸಲಾಗಿತ್ತು.


Click it and Unblock the Notifications











