ನಿಜ ಜೀವನದಲ್ಲಿ ಕ್ಯಾಬ್ ಡ್ರೈವರ್ ಆಗ್ತಾರಂತೆ ಪ್ಯಾನ್ ಇಂಡಿಯಾ ಸ್ಟಾರ್
ಜೀವನದಲ್ಲಿ ಸಾಕಷ್ಟು ಜನ ತಮಗೆ ಇಷ್ಟವಿಲ್ಲದ ಕೆಲಸವನ್ನು ಅನಿವಾರ್ಯವಾಗಿ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಯಾವುದೋ ಒತ್ತಡಕ್ಕೆ ಸಿಲುಕಿ ಬೇರೆ ವಿಧಿಯಿಲ್ಲದೇ ಆ ವೃತ್ತಿ ಮಾಡುವಂತಾಗುತ್ತದೆ. ಅಚಾನಕ್ ಆಗಿ ಚಿತ್ರರಂಗಕ್ಕೆ ಬರುವ ಕಲಾವಿದರು ಕೂಡ ಕೊನೆಗೆ ಅದರಲ್ಲೇ ಮುಂದುವರೆಯುತ್ತಾರೆ.
ಇದೀಗ ದಕ್ಷಿಣದ ಸ್ಟಾರ್ ನಟರೊಬ್ಬರು ತಮ್ಮ ಕನಸಿನ ವೃತ್ತಿ ಏನು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು ನನ್ನಿಷ್ಟದಂತೆ ಆ ಕೆಲಸ ಮಾಡಲು ಬಯಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಭಿಮಾನಿಗಳು ಇದನ್ನು ಕೇಳಿ ಅಚ್ಚರಿಗೊಂಡಿದ್ದಾರೆ. ಅರೇ, ಕೋಟಿ ಕೋಟಿ ಸಂಪಾದನೆ ಮಾಡಿರುವ ನಟನಿಗೆ ಇಂತಹ ಆಸೆ ಯಾಕೆ? ಆರಾಮಾಗಿ ನಿವೃತ್ತಿ ಜೀವನ ಸಾಗಿಸುವುದು ಬಿಟ್ಟು ಇಂತಹ ಆಸೆ ಯಾಕೆ ಬಂತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಮಲಯಾಳಂ ನಟ ಫಹಾದ್ ಫಾಸಿಲ್ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಧೂಮಂ' ಚಿತ್ರದಲ್ಲಿ ಸಹ ನಟಿಸಿದ್ದರು. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ತಮ್ಮ ವಿಲಕ್ಷಣ ನಟನೆಯಿಂದ ಫಹಾದ್ ಮೋಡಿ ಮಾಡುತ್ತಾ ಬರ್ತಿದ್ದಾರೆ. ದೊಡ್ಡ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ತಮಿಳಿನಲ್ಲಿ ಫಹಾದ್ ನಟನೆಯ 'ಮಾಸಿರನ್' ಸಿನಿಮಾ ಈ ವಾರ ತೆರೆಗೆ ಬಂದಿದೆ. ಚಿತ್ರದ ಪ್ರಚಾರಕ್ಕಾಗಿ ಕೆಲ ಸಂದರ್ಶನಗಳಲ್ಲಿ ಫಹಾದ್ ಕಾಣಿಸಿಕೊಂಡಿದ್ದರು. 5 ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಫಹಾನ್ ನಿವೃತ್ತಿ ಬಳಿಕ ಕ್ಯಾಬ್ ಡ್ರೈವರ್ ಆಗುವ ಆಸೆ ಇದೆ ಎಂದಿದ್ದರು. ಇದೇ ಪ್ರಶ್ನೆಯನ್ನು ಇತ್ತೀಚೆಗೆ ಮತ್ತೆ ಕೇಳಿದಾಗ "ಹೌದು.. ಖಂಡಿತ, ಅದೇ ನನ್ನ ಕನಸು" ಎಂದು ಪುನರುಚ್ಚರಿಸಿದ್ದಾರೆ. "ಇತ್ತೀಚೆಗೆ ಬಾರ್ಸಿಲೊನಾಗೆ ಹೋಗಿದ್ದೆ. ಆಗ ಮತ್ತೆ ಈ ಬಗ್ಗೆ ಗಂಭೀರವಾಗಿ ಆಲೋಚಿಸಿದೆ. ಸಿನಿಮಾಗಳಲ್ಲಿ ನಟಿಸುವುದು ಬಿಟ್ಟ ಬಳಿಕ ಆ ನಿರ್ಧಾರ" ಎಂದಿದ್ದಾರೆ.

ಮಾತು ಮುಂದುವರೆಸಿರುವ ಫಹಾದ್ "ಜೋಕ್ ಬದಿಗಿಟ್ಟು ಮಾತನಾಡುವುದಾದರೆ, ಯಾರನ್ನಾದರೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಡುವುದು, ಬಹಳ ಚೆನ್ನಾಗಿರುತ್ತದೆ. ಕೊನೆ ಪಕ್ಷ ನೀವು ಒಬ್ಬರ ಗಮ್ಯಸ್ಥಾನವನ್ನು ನೋಡಬಹುದು. ನನಗೆ ಡ್ರೈವಿಂಗ್ ಅಂದರೆ ಬಹಳ ಇಷ್ಟ, ಅವಕಾಶ ಸಿಕ್ಕಾಗಲೆಲ್ಲಾ ಕಾರ್ ಚಲಾಯಿಸುತ್ತೇನೆ. ಅದನ್ನು ಬಹಳ ಎಂಜಾಯ್ ಮಾಡ್ತೀನಿ" ಎಂದು ತಿಳಿಸಿದ್ದಾರೆ.
5 ವರ್ಷಗಳ ಹಿಂದೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಕೂಡ ಫಹಾದ್ ಇದೇ ವಿಚಾರದ ಬಗ್ಗೆ ಮಾತನಾಡಿದ್ದರು. "ಕ್ಯಾಬ್ ಡ್ರೈವರ್ ಆಗಬೇಕು ಎನ್ನುವ ನನ್ನ ರಿಟೈರ್‌ಮೆಂಟ್ ಪ್ಲ್ಯಾನ್ ಬಗ್ಗೆ ನನ್ನ ಪತ್ನಿಗೂ ಹೇಳಿದ್ದೀನಿ. ಬಾರ್ಸಿಲೋನಾಗೆ ತೆರಳಿ ಸ್ಪೇನ್ ಸುತ್ತಾ ಮುತ್ತಾ ಕ್ಯಾಬ್ ಓಡಿಸಬೇಕು ಎಂದಿದ್ದೆ. ಆಕೆಗೂ ಆ ಪ್ಲ್ಯಾನ್ ಇಷ್ಟ" ಎಂದು ಹೇಳಿಕೊಂಡಿದ್ದರು.
ಸಿನಿಮಾಗಳ ವಿಚಾರಕ್ಕೆ ಬಂದರೆ ಕಳೆದ ವರ್ಷ 'ಆವೇಶಂ', 'ವೆಟ್ಟೆಯಾನ್', 'ಪುಷ್ಪ'-2 ರೀತಿಯ ಹಿಟ್ ಸಿನಿಮಾಗಳಲ್ಲಿ ಫಹಾನ್ ನಟಿಸಿದ್ದರು. ಇದೀಗ ತಮಿಳಿನ 'ಮಾರೀಸನ್' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. 'ಓಡಮ್ ಕುಠೀರ ಚಡಮ್ ಕುಠೀರ', 'ಡೋಂಡ್ ಟ್ರಬಲ್ ದಿ ಟ್ರಬಲ್', 'ಕರಾಟೆ ಚಂದ್ರನ್', 'ಪೇಟ್ರಿಯಾಟ್' ಹೀಗೆ ಸಾಲು ಸಾಲು ಸಿನಿಮಾಗಳು ಫಹಾದ್ ಕೈಯಲ್ಲಿವೆ.


Click it and Unblock the Notifications











