ಮಗಳ ವಯಸ್ಸಿನ ನಟಿಯ ಮೇಲೆ ಮಲಯಾಳಂನ ಹಿರಿಯ ನಟನಿಂದ ಅತ್ಯಾಚಾರ..?
ಪಾತ್ರಕ್ಕಾಗಿ ಪಲ್ಲಂಗದ ಕಥೆಗಳಿಂದ ತುಂಬಿ ತುಳುಕುತ್ತಿರುವ ಮಲಯಾಳಂ ಚಿತ್ರರಂಗದಲ್ಲಿ ಈಗ ಹೇಮಾ ಆಯೋಗದ ವರದಿಯಿಂದ ಕಂಪನ ಶುರುವಾಗಿದೆ. ರಾಜಿ ಮಾಡಿಕೊಳ್ಳುವಂತೆ ಒತ್ತಾಯ ಮಾಡಿರುವ ಆರೋಪವನ್ನೊತ್ತವರ ರಾಜೀನಾಮೆ ಪರ್ವ ಆರಂಭವಾಗಿದೆ.
ಹೌದು, ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನಲ್ಲಿ ಪ್ರಧಾನ ಕಾರ್ಯದರ್ಶಿ ಕುರ್ಚಿಯ ಮೇಲೆ ಕುಳಿತುಕೊಂಡಿದ್ದ ಮಲಯಾಳಂ ಚಿತ್ರರಂಗದ ಸೀನಿಯರ್ ಆಕ್ಟರ್ ಸಿದ್ದಿಕ್ ಈಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕುರ್ಚಿಯಿಂದ ಕೆಳಗೆ ಇಳಿದಿದ್ದಾರೆ.

ಹೆಚ್ಚು ಕಡಿಮೆ 350 ಚಿತ್ರಗಳಲ್ಲಿ ಅಭಿನಯಿಸಿರುವ ಸಿದ್ದಿಕ್ ನಾನು ನನ್ನ ರಾಜೀನಾಮೆಯನ್ನು AMMA ಅಧ್ಯಕ್ಷ ಮೋಹನ್ ಲಾಲ್ ಅವರಿಗೆ ಕಳೀಸಿದ್ದೇನೆ ಎಂದಿದ್ದಾರೆ. ನನ್ನ ಮೇಲೆ ಆರೋಪ ಮಾಡಲಾದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿರುವ ಸಿದ್ದಿಕ್, ಆರೋಪಗಳ ಕುರಿತು ನಾನು ಈಗ ಮಾತನಾಡಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.
ಅಂದ್ಹಾಗೇ ಈ ಸಿದ್ದಿಕಿ ಮೇಲೆ 2019ರಲ್ಲಿಯೇ ನಟಿಯೊಬ್ಬರು ಆರೋಪ ಮಾಡಿದ್ದರು. ಫೇಸ್‌ಬುಕ್ ಮೂಲಕ ಸಿದ್ದಿಕ್ ಮಾನ ಕಳೆದಿದ್ದರು. ಆದರೆ, ಆಗ ಆರೋಪ ಮಾಡಿದ ನಟಿಯ ಪರ ಯಾರು ಧ್ವನಿ ಎತ್ತಲಿಲ್ಲ. ಈ ಕಾರಣಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಸಿದ್ದಿಕಿಗೆ ಈಗ ಹೇಮಾ ಆಯೋಗದ ವರದಿ ಮುಳ್ಳಾಗಿದೆ. ವರದಿ ಬಂದ ಬೆನ್ನಲ್ಲಿಯೇ 2019ರಲ್ಲಿ ಆರೋಪ ಮಾಡಿದ್ದ ನಟಿ ಮತ್ತೊಮ್ಮೆ ಪ್ರತ್ಯಕ್ಷರಾಗಿದ್ದಾರೆ. ಪತ್ರಿಕಾಗೋಷ್ಠಿಯನ್ನು ನಡೆಸಿ ಸಿದ್ದಿಕ್ ವಿರುದ್ಧ ಕೆಂಡ ಕಾರಿದ್ದಾರೆ.

ನಿನ್ನೆ ಸಿದ್ದಿಕ್ ವಿರುದ್ಧ ಹಿಂದೆ 2019ರಲ್ಲಿ ತಾವು ಮಾಡಿದ್ದ ಆರೋಪ ಎಲ್ಲವೂ ನಿಜಾ ಎಂದು ಪುನರುಚ್ಚಿಸಿರುವ ನಟಿ, ಅದು 2016 .. ನಾನು ಆಗಷ್ಟೇ ಚಿತ್ರರಂಗಕ್ಕೆ ಬಂದಿದ್ದೇ. ಈ ಸಮಯದಲ್ಲಿ ಚಿತ್ರದ ಕುರಿತು ಮಾತನಾಡಲು ಹೋಟೆಲ್‌ಗೆ ಕರೆಸಿಕೊಂಡು ಸಿದ್ದಿಕಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿ ನನ್ನ ಮೇಲೆ ಅತ್ಯಾಚಾರವನ್ನು ಮಾಡಿದ್ದಾನೆ ಎಂದಿದ್ದಾರೆ. ಈ ಕರಾಳ ಘಟನೆಯ ನಂತರ ನಾನು ನನ್ನ ಕನಸುಗಳಿಗೆ ಕೊಳ್ಳಿ ಇಟ್ಟೆ ಎಂದಿರುವ ನಟಿ, ನಾನು ಮಾನಸಿಕ ಆಘಾತ ಅನುಭವಿಸಿದೆ ಎಂದಿದ್ದಾರೆ.
ನಟಿ ನಿನ್ನೆ ಈ ಹೇಳಿಕೆ ನೀಡಿದ ಬೆನ್ನಲ್ಲಿಯೇ ಸಿದ್ದಿಕ್ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಹೇಮಾ ಆಯೋಗದ ವರದಿಯ ಕುರಿತು ಕೂಡ ಮಾತನಾಡಿರುವ ಸಿದ್ದಿಕ್ ನಾವು ವರದಿ ಮತ್ತು ಅದರ ಸಂಶೋಧನೆಗಳನ್ನು ಸ್ವಾಗತ ಮಾಡುತ್ತೇವೆ. ಈ ವರದಿಯಿಂದ ಉದ್ಯಮದಲ್ಲಿನ ಪರಿಸ್ಥಿತಿಯಲ್ಲಿ ಸುಧಾರಣೆಯಾಗಬಹುದು ಎಂದಿದ್ದಾರೆ. ಕೇರಳ ಸರ್ಕಾರ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದಿದ್ದಾರೆ.

ಆದರೆ ಇದೇ ಸಮಯದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಸಂಸ್ಕ್ರತಿ ಮಲಯಾಳಂ ಚಿತ್ರರಂಗದಲ್ಲಿರುವುದನ್ನು ನಿರಾಕರಿಸಿದ ಸಿದ್ದಿಕ್, ಮಲಯಾಳಂ ಚಿತ್ರರಂಗವನ್ನು ಒಂದು ಪ್ರಭಾವಶಾಲಿ ತಂಡ ಮುನ್ನಡೆಸುತ್ತಿದೆ ಎನ್ನುವುದನ್ನು ಅಲ್ಲಗೆಳೆದಿದ್ದಾರೆ. ಹೇಮಾ ವರದಿಯಲ್ಲಿ ಉಲ್ಲೇಖವಾಗಿರುವ ಸಾಕ್ಷಿ ಕೆಲವು ಪ್ರತೈಕ ಘಟನೆಗಳಿಗೆ ಸಂಬಂಧಿಸಿದ್ದಾಗಿರಬಹುದು ಅಷ್ಟೇ ಎಂದಿದ್ದಾರೆ


Click it and Unblock the Notifications











