ಮದುವೆಯಾಗುವಂತೆ ಒಂದು ವರ್ಷ ಖ್ಯಾತ ನಟಿಗೆ ಹಿಂಸೆ ಕೊಟ್ಟ 17 ವರ್ಷದ ಪೋಲಿ, ಆಮೇಲೇನಾಯ್ತು ?
ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.
ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಸಾಕಷ್ಟು ಮಂದಿ ಒಂದು ಕಡೆ ಚಿತ್ರರಂಗದಲ್ಲಿನ ಮಹಿಳೆಯರಿಗೆ, ನಟಿಯರಿಗೆ ಲೈಂಗಿಕ ಶೋಷಣೆ, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಸ್ತ್ರೀಯರ ಬಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ.

ಮತ್ತೊಂದು ಕಡೆ ಅಭಿಮಾನದ ಹೆಸರಿನಲ್ಲಿ ಅನೇಕರು ಅನೇಕ ನಾಯಕಿಯರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆಯೇ ಅವಂತಿಕಾ ಮೋಹನ್‌ಗೆ ಆದ ಅನುಭವ.
ಹೌದು ಅವಂತಿಕಾ ಮೋಹನ್.. ಮಲಯಾಳಂನ ಮನಮೋಹಕ ಚೆಲುವೆ. "ಯಕ್ಷಿ - ಫೇತ್‌ಫುಲ್ಲಿ ಯುವರ್ಸ್".."ನೀಲಾಕಾಶಂ ಪಚ್ಚಕಡಲ್ ಚುವನ್ನ ಭೂಮಿ".. "ಮಿಸ್ಟರ್ ಬೀನ್".."ಕ್ರೊಕೊಡೈಲ್ ಲವ್ ಸ್ಟೋರಿ" ..ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಅವಂತಿಕಾ ಕನ್ನಡದಲ್ಲಿ "ಪ್ರೀತಿಯಲ್ಲಿ ಸಹಜ" ಮತ್ತು "ಗರ"" ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.
ಕೇವಲ ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿರುವ ಅವಂತಿಕಾ "ಆತ್ಮಸಖಿ".."ಪ್ರಿಯಪೆಟ್ಟವಲ್" .."ರಾಜ ರಾಣಿ".. "ಶಿವಕಾಮಿ".. ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ತಮ್ಮ ಅಭಿನಯದಿಂದ ಮಲಯಾಳಿ ಪ್ರೇಕ್ಷಕರ ಹೃದಯವನ್ನು ಕೂಡ ಗೆದ್ದಿದ್ದಾರೆ.
ಇಂಥಾ ಅವಂತಿಕಾ ಮೋಹನ್ ಅವರ ಹಿಂದೆ ಮೀಸೆ ಚಿಗುರದ ಹುಡುಗನೊಬ್ಬ ಬಿದ್ದಿದ್ದಾನೆ. ಕಳೆದೊಂದು ವರ್ಷದಿಂದ ಥೇಟ್ " ಓಂ" ಚಿತ್ರದ ಶೈಲಿಯಲ್ಲಿ "ಐ ಲವ್ ಯೂ.. ಯೂ ಮಸ್ಟ್ ಲವ್ ಮೀ".. ಎಂದು ಪೀಡಿಸುತ್ತಿದ್ದಾನೆ. ಇಷ್ಟೇ ಅಲ್ಲ ನನ್ನ ಮದುವೆಯಾಗು ಎಂದು ದುಂಬಾಲು ಬಿದ್ದಿದ್ದಾನೆ.

ಇದನ್ನು ಅಭಿಮಾನ ಎನ್ನಬೇಕೋ.. ಅಂಧಾಭಿಮಾನ ಎನ್ನಬೇಕೋ.. ಗೊತ್ತಿಲ್ಲ. ಕಳೆದೊಂದು ವರ್ಷದಿಂದ ಒಂದು ದಿನವೂ ತಪ್ಪದೇ ಈ 17ರ ಹರೆಯದ ಹುಡುಗ ಮೆಸೇಜ್ ಮಾಡುತ್ತಲೇ ಇದ್ದಾನೆ. ಹೀಗಾಗಿ ಸಹನೆ ಕಳೆದುಕೊಂಡಂತೆ ಇರುವ ಅವಂತಿಕಾ ಸದ್ಯ ಈ ಹುಡುಗನಿಗೆ ಉತ್ತರ ನೀಡಿದ್ದಾರೆ.
ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಅವಂತಿಕಾ ಮೋಹನ್, ಕಳೆದೊಂದು ವರ್ಷದಿಂದ ಮದುವೆ ಆಗುವಂತೆ ಮೆಸೇಜ್ ಮಾಡುತ್ತಿರುವ ನನ್ನ ಅಭಿಮಾನಿಗೆ ಈ ವಿಷಯ ಹೇಳಲು ಬಯಸುತ್ತೇನೆ ಎಂದು ತಮ್ಮ ಲೇಖನ ಶುರು ಮಾಡಿದ್ದಾರೆ.
ಬಹುಶಃ ನಿನಗೆ 16 ಅಥವಾ 17 ವರ್ಷ ಇರಬಹುದು. ಜೀವನ ಎಂದರೆ ಏನು ಎಂದು ನಿನಗೆ ಇನ್ನೂ ಸಂಪೂರ್ಣವಾಗಿ ಗೊತ್ತಿಲ್ಲ ಎಂದು ಹೇಳಿರುವ ಅವಂತಿಕಾ ಒಂದು ವರ್ಷದಿಂದ ನೀನು ನನ್ನನ್ನು ಮದುವೆ ಆಗುವಂತೆ ದುಂಬಾಲು ಬಿದ್ದಿದೀಯಾ ಆದರೆ, ನೀನು ಇನ್ನೂ ಚಿಕ್ಕವನು. ಮದುವೆಯ ಬಗ್ಗೆ ಯೋಚಿಸುವ ಬದಲು ಪರೀಕ್ಷೆಗಳ ಕಡೆ ಗಮನ ಹರಿಸು ಎಂದು ಹೇಳಿದ್ದಾರೆ.
ನನಗಿಂತ ನೀನು ತುಂಬಾ ಚಿಕ್ಕವನು. ಒಂದು ವೇಳೆ ನಾವಿಬ್ಬರೂ ಮದುವೆಯಾದರೆ, ಎಲ್ಲರೂ ನನ್ನನ್ನು ನಿನ್ನ ಪತ್ನಿ ಎಂದು ಭಾವಿಸುವುದಿಲ್ಲ, ಬದಲಿಗೆ ನಾನು ನಿನ್ನ ತಾಯಿ ಎಂದುಕೊಳ್ಳುತ್ತಾರೆ ಎಂದಿರುವ ಅವಂತಿಕಾ ಸದ್ಯ ನಿನ್ನ ಓದಿನ ಕಡೆ ಗಮನ ಕೊಡು, ಸರಿಯಾದ ಸಮಯ ಬಂದಾಗ ನಿನ್ನ ಪ್ರೇಮಕಥೆ ಆರಂಭವಾಗುತ್ತೆ ಎಂದು ಹೇಳಿದ್ದಾರೆ.
ಅವಂತಿಕಾ ಅವರ ಈ ನಡೆ ಸದ್ಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. 17 ವರ್ಷದ ಹುಡುಗನ ಈ ಕೆಲಸ ಇನ್ನೂ ಕೆಲವರ ಕಣ್ಣನ್ನೂ ಕೆಂಪಾಗಿಸಿದೆ. ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ಅಂದಹಾಗೆ, ಅವಂತಿಕಾ ಮೋಹನ್ 2017 ರಲ್ಲಿ ಅನಿಲ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದಾರೆ. ಇವರ ದಾಂಪತ್ಯಕ್ಕೆ ಸಾಕ್ಷಿ ಎನ್ನುವಂತೆ ರುದ್ರಾಂಶ ಎಂಬ ಮಗ ಇವರಿಗಿದ್ದಾನೆ.


Click it and Unblock the Notifications











