ಕೋಮಲ್ ಜೊತೆ ಮಲಯಾಳಂ ಮಾಳವಿಕಾ ಕೋಕೋ
ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಮಾಳವಿಕಾ. 'ಮಲರ್ವಾಡಿ ಆರ್ಟ್ಸ್ ಕ್ಲಬ್' ಚಿತ್ರದ ಮೂಲಕ ಚಿತ್ರಯಾನ ಆರಂಭಿಸಿದ ಮಾಳವಿಕಾ ನಂತರ ಒಂದೆರಡು ಚಿತ್ರಗಳಲ್ಲಿ ನಟಿಸಿ ಪರಿಚಿತೆ ಎನಿಸಿದ್ದಾರೆ. ಇದೀಗ ಮಾಳವಿಕಾರನ್ನು ಕೋಮಲ್ ಕುಮಾರ್ ನಾಯಕತ್ವದ ಚಿತ್ರವೊಂದರ ಮೂಲಕ ಕನ್ನಡಕ್ಕೆ ಕರೆ ತರುತ್ತಿದ್ದಾರೆ.
ಜಯರಾಜ್ ನಿರ್ದೇಶನದ ಮಲಯಾಳಮ ಚಿತ್ರ 'ತಿಲಕಂ' 2003ರಲ್ಲಿ ಬಿಡುಗಡೆಯಾಗಿತ್ತು. ಬರೋಬ್ಬರಿ 9 ವರ್ಷಗಳ ನಂತರ ಅದೀಗ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಬಾಲ್ಯದಲ್ಲೇ ಕಳೆದು ಹೋಗಿರುವ ಬಾಲಕ ಕೈಗೆ ಸಿಕ್ಕಿದಾಗ ಮಾನಸಿಕ ಅಸ್ವಸ್ಥನಾಗಿರುತ್ತಾನೆ. ಆರೈಕೆ ಮಾಡುವ ನಾಯಕಿ ಆತನಲ್ಲಿ ಅನುರಕ್ತಳಾಗುತ್ತಾಳೆ. ಇದೇ ಚಿತ್ರದ ಕಥೆಯ ಎಳೆ.
ಈ ಪಾತ್ರದಲ್ಲಿ ದಿಲೀಪ್ ಮತ್ತು ಕಾವ್ಯಾ ಮಾಧವನ್ ಅಮೋಘವಾಗಿ ಅಭಿನಯಿಸಿದ್ದರು. ಈ ಚಿತ್ರದ ರೀಮೇಕ್ ಕನ್ನಡ ಚಿತ್ರದಲ್ಲಿ ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ನಟಿಸಲಿರುವ ಕೋಮಲ್ ಅವರಿಗೆ ಮಾಳವಿಕಾ ಹೀರೋಯಿನ್. ಮಲಯಾಳಿ ನಟಿಯರಿಗೆ ಕನ್ನಡ ಚಿತ್ರರಂಗವೆಂದರೆ ಆಕರ್ಷಣೆ ಸಹಜ. ಏಕೆಂದರೆ ಅಲ್ಲಿಗಿಂತ ಇಲ್ಲಿ ಸಂಭಾವನೆ ಹೆಚ್ಚು.
ಬರಲಿರುವ ಈ ಚಿತ್ರಕ್ಕೆ ನಿರ್ದೇಶಕರು ಕಣ್ಣೀರ ಚಿತ್ರಗಳ ನಿರ್ದೇಶಕ ಖ್ಯಾತಿಯ ಸಾಯಿಪ್ರಕಾಶ್. ಕೋಮಲ್ ನಂಬಿ ಚಿತ್ರ ನಿರ್ಮಿಸುತ್ತಿರುವವರು ರಾಜೇಶ್ ಮತ್ತು ರಮೇಶ್ ಎಂಬ ಹೊಸ ನಿರ್ಮಾಪಕರು. ಇನ್ನೊಬ್ಬರು ಕೂಡ ಇವರ ಜತೆ ಕೈ ಜೋಡಿಸುವ ಸಾಧ್ಯತೆಯಿದೆ. ಸಾಯಿಪ್ರಕಾಶ್-ಕೋಮಲ್ ಜೋಡಿ ಅದೇನು ಮೋಡಿ ಮಾಡಲಿದೆಯೋ ಕಾದು ನೋಡಬೇಕಷ್ಟೇ! (ಒನ್ ಇಂಡಿಯಾ ಕನ್ನಡ)


Click it and Unblock the Notifications












