ಮಲಯಾಳಂ ಬಿಗ್ ಬಾಸ್ 3ನೇ ಆವೃತ್ತಿ ಎರಡು ವಾರ ವಿಸ್ತರಣೆ
ಕೊರೊನಾ ವೈರಸ್ ಭೀತಿಯಿಂದ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಅರ್ಧದಲ್ಲೇ ಮೊಟಕುಗೊಂಡಿತು. ಆದರೆ, ಮಲಯಾಳಂ ಬಿಗ್ ಬಾಸ್ ಎರಡು ವಾರ ಹೆಚ್ಚುವರಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಶೋ ಆರಂಭವಾದಾಗ 100 ದಿನಗಳ ಸಂಚಿಕೆ ಎಂದು ಪ್ರಕಟಿಸಲಾಗಿತ್ತು. ಈಗ ಎರಡು ವಾರ ವಿಸ್ತರಿಸಿರುವ ಹಿನ್ನೆಲೆ 114 ದಿನಕ್ಕೆ ಮುಗಿಸಲು ತೀರ್ಮಾನಿಸಲಾಗಿದೆ ಎಂದು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.
ಫೆಬ್ರವರಿ 14 ರಂದು ಆರಂಭವಾಗಿದ್ದ ಮಲಯಾಳಂ ಬಿಗ್ ಬಾಸ್ ಮೂರನೇ ಆವೃತ್ತಿ ಮೇ ಕೊನೆಯಲ್ಲಿ ಮುಗಿಯಬೇಕಿತ್ತು. ಈಗಾಗಲೇ ಮಲಯಾಳಂ ಬಿಗ್ ಬಾಸ್ 89 ದಿನಗಳನ್ನು ಪೂರೈಸಿದೆ. ಎರಡು ವಾರ ವಿಸ್ತರಿಸಿರುವುದರಿಂದ ಜೂನ್ ತಿಂಗಳಿಗೆ ಫಿನಾಲೆ ಮುಂದೂಡಿಕೆಯಾಗಿದೆ.

ಒಟ್ಟು ಹದಿನಾಲ್ಕು ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ನಂತರ ವೈಲ್ಡ್ ಕಾರ್ಡ್ ಎಂಟ್ರಿಯೂ ಆಗಿತ್ತು. ಶೋ ನಿಯಮದಂತೆ ಇಷ್ಟು ವಾರಗಳ ಎಲಿಮಿನೇಷನ್ ನಂತರ 9 ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಕೇರಳದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆದರೂ ರಿಯಾಲಿಟಿ ಶೋ ಮುಂದುವರಿಸಲು ಯಾವುದೇ ಅಡೆ-ತಡೆ ಇಲ್ಲ. ಸದ್ಯ ರಾಜ್ಯದಲ್ಲಿ ಸೋಂಕು ಹೆಚ್ಚಾಗಿರುವ ಕಾರಣದಿಂದ ಮತ್ತೆರಡು ವಾರ ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ.


Click it and Unblock the Notifications











