ಹೇಮಾ ಸಮಿತಿ ವರದಿ ; ಮಲಯಾಳಂನಲ್ಲಿ ಮತ್ತೊಂದು ವಿಕೆಟ್ ಪತನ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿರ್ದೇಶಕ..!
ಒಂದು ಕಾಲದಲ್ಲಿ ಭಾರತದೆಲ್ಲೆಡೆ ಸದ್ದು ಮಾಡಿದ್ದ Me Too ಆಂದೋಲನ ಮತ್ತೊಮ್ಮೆ ಪ್ರವರ್ಧಮಾನಕ್ಕೆ ಬರುವ ಸಾಧ್ಯತೆಗಳಿವೆ. ಇದಕ್ಕೆ ಕೈಗನ್ನಡಿ ಎಂಬಂತೆ ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಮಲಯಾಳಂ ಚಿತ್ರರಂಗದಲ್ಲಿನ ಕಾಮಪುರಾಣ ಮತ್ತೊಮ್ಮೆ ಬಯಲಾಗಿದೆ. ಹೇಮಾ ಆಯೋಗ ಸಲ್ಲಿಸಿದ ವರದಿ ಮತ್ತು ಆ ವರದಿಯಲ್ಲಿನ ಕರಾಳ ಕಥೆಗಳನ್ನು ಕೇಳಿ ಮಲಯಾಳಂ ಇಂಡಸ್ಟ್ರೀ ಪತುರಗುಟ್ಟಿದೆ. ಇದಕ್ಕೆ ಇನ್ನೊಂದು ಸಾಕ್ಷಿ ಎಂಬಂತೆ ಮಲಯಾಳಂ ಚಿತ್ರರಂಗದ ನಿರ್ದೇಶಕ ರಂಜಿತ್ ಕೇರಳ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಹೌದು, ಅಸಲಿಗೆ ಹೇಮಾ ಆಯೋಗದ ವರದಿ ಹೊರ ಬಂದ ಬೆನ್ನಲ್ಲಿಯೇ ನಿನ್ನೆ ಬೆಂಗಾಲಿಯ ಚೆಲುವೆ ಶ್ರೀಲೇಖಾ ಮಿತ್ರಾ ಈ ರಂಜಿತ್ ಎಂಬ ಮಲಯಾಳಂ ನಿರ್ದೇಶಕನ ಮೇಲೆ ಆರೋಪ ಮಾಡಿದ್ದರು. 2009ರಲ್ಲಿ ರಂಜಿತ್ ಅವರಿಂದ ತಮಗಾದ ಕರಾಳ ಅನುಭವ ಹಂಚಿಕೊಂಡಿದ್ದರು.

''ಪೆಲೆರಿ ಮಾಣಿಕ್ಯಂ ಓರು ಪತಿರಕೋಲಪಥಕತಿಂತೆ ಕಥಾ''ದಲ್ಲಿ ನಾನು ಆಕ್ಟ್ ಮಾಡಬೇಕಿತ್ತು. ಆದರೆ ಆ ಚಿತ್ರದ ನಿರ್ದೇಶಕ ರಂಜಿತ್ ತನ್ನ ಮನೆಗೆ ನನ್ನ ಕರೆಸಿಕೊಂಡ, ಕೈಯಲ್ಲಿದ್ದ ನನ್ನ ಬಳೆಗಳೊಂದಿಗೆ ಆಟವಾಡಲು ಶುರು ಮಾಡಿದ, ನನ್ನ ಮೈಯೆಲ್ಲ ಮುಟ್ಟಿದ ಎಂದಿದ್ದರು. ರೂಮ್‌ನಲ್ಲಿ ಕತ್ತಲು ಆವರಿಸಿಕೊಂಡಿತ್ತು. ನಾನು ವಿರೋಧ ಮಾಡಲು ಮುಂದಾದಾಗ ನನ್ನ ಕತ್ತು ಮತ್ತು ಕೂದಲಿನ ಜೊತೆ ಆಟ ಆಡಿದ, ನನಗೆ ಯಾಕೋ ಸರಿ ಹೋಗುತ್ತಿಲ್ಲ ಎಂದು ಅಲ್ಲಿಂದ ನಾನು ಹೊರಟು ಬಂದೇ ಎಂದು ಹೇಳಿದ್ದರು.
ಶ್ರೀಲೇಖಾ ಮಿತ್ರಾ ಈ ಹೇಳಿಕೆ ನೀಡಿ 48 ಘಂಟೆ ಇನ್ನೂ ಉರುಳಿಲ್ಲ. ಅಷ್ಟರಲ್ಲಿಯೇ ರಾಜ್ಯ ಸರ್ಕಾರದ ಖರ್ಚು-ವೆಚ್ಚದಲ್ಲಿ ನಡೆಯುವ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಂಜಿತ್ ಕೈ ಮುಗಿದಿದ್ದಾರೆ. ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ತಮ್ಮ ಆಡಿಯೋ ತುಣುಕನ್ನ ಸುದ್ದಿವಾಹಿನಿಗೆ ಕಳುಹಿಸುವ ಮೂಲಕ ರಾಜೀನಾಮೆ ನಿರ್ಧಾರ ಘೋಷಿಸಿದ್ದಾರೆ.

ಅಕಾಡೆಮಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಒಂದು ವರ್ಗದ ಜನ ನನ್ನನ್ನು ಗುರಿ ಮಾಡಿದ್ದಾರೆ ಎಂದಿರುವ ರಂಜಿತ್ ನನ್ನ ವಿರುದ್ಧ ಮಾಡಲಾದ ಆರೋಪಗಳೆಲ್ಲ ಸುಳ್ಳು ಎಂದು ಸಾಬೀತು ಮಾಡಬೇಕಿದೆ ಎಂದು ಹೇಳಿದ್ದಾರೆ. ಇದು ನನ್ನ ಗೌರವಕ್ಕೆ ಧಕ್ಕೆ ತಂದಿದೆ. ನಾನು ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇನೆ. ಇದರ ಹಿಂದಿನ ಸತ್ಯವನ್ನು ನಾನು ತಿಳಿದುಕೊಳ್ಳಬೇಕೆಂದು ಎಂದು ಹೇಳಿದ್ದಾರೆ ರಂಜಿತ್
ಮುಂದುವರೆದು ಈ ಹುದ್ದೆಯಲ್ಲಿ ನಾನು ಮುಂದುವರೆದಲ್ಲಿ ಅದು ರಾಜ್ಯ ಸರ್ಕಾರದ ಘನತೆಯ ಮೇಲೆ ಕೂಡ ಪರಿಣಾಮ ಬೀರುತ್ತೆ ಎಂದಿರುವ ರಂಜಿತ್, ಸತ್ಯ ಶೀಘ್ರದಲ್ಲಿಯೇ ಹೊರಬರಲಿದೆ ಎಂದಿದ್ದಾರೆ. ಅಂದ್ಹಾಗೇ ಸದ್ಯ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಸಿಲುಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ರಂಜಿತ್ ಈ ಹಿಂದೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಐದು ಬಾರಿ ತಮ್ಮ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಐದು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಕೂಡ ರಂಜಿತ್ ಪಡೆದಿದ್ದಾರೆ.


Click it and Unblock the Notifications











