ನಾಲ್ಕೇ ತಿಂಗಳಲ್ಲಿ 1000 ಕೋಟಿ ಗಳಿಸಿದ ಮಲಯಾಳಂ ಚಿತ್ರರಂಗದಲ್ಲಿ ಇದೆಂಥಾ ಕೆಟ್ಟ ಸಂಸ್ಕ್ರತಿ..!
ಒಂದು ಸಿನಿಮಾ ಯಾರೋ ಒಬ್ಬರ ಪಾಲ್ಗೊಳ್ಳುವಿಕೆಯಿಂದ ಆಗುವಂಥಾದ್ದಲ್ಲ. ಅದರಲ್ಲಿ ಡೈರೆಕ್ಟರ್, ಹೀರೋ, ಕ್ಯಾಮೆರಾದಿಂದ ಮೊದಲ್ಗೊಂಡು ಲೈಟ್ ಬಾಯ್‌ಗಳ ತನಕ ನೂರಾರು ಮಂದಿಯ ಶ್ರಮವಿರುತ್ತೆ. ನಿರ್ದೇಶನ, ಕ್ಯಾಮೆರಾ, ಕಲಾ ನಿರ್ದೇಶನ, ಎಡಿಟಿಂಗ್, ಸಂಗೀತ, ಸಾಹಸ ನಿರ್ದೇಶನ... ಇಂಥಾ ಅದೆಷ್ಟೋ ವಿಭಾಗಗಳ, ಅದೆಷ್ಟೋ ಜನರ ಬೆವರ ಹನಿಗಳು ತಾಕದಿದ್ದರೆ ಯಾವ ಚಿತ್ರವೂ ತಯಾರಾಗೋದಿಲ್ಲ. ಆದರೆ ಈ ಸತ್ಯ ಕೆಲವೊಮ್ಮೆ ಕೆಲವರಿಗೆ ಅರ್ಥವೇ ಆಗುವುದಿಲ್ಲ. ಯಾಕೆಂದರೆ ಅವರಿಗೆ ನಾನು..ನನ್ನದು..ನನ್ನಿಂದ.. ಎಂಬ ಅಂಹಕಾರ ನೆತ್ತಿಗೇರಿರುತ್ತೆ. ಇದಕ್ಕೆ ಮಲಯಾಳಂ ಚಿತ್ರರಂಗದಲ್ಲಿ ನಡೆದ ಒಂದು ಬೆಳವಣಿಗೆ ಒಂದು ತಾಜಾ ಉದಾಹರಣೆ.
ಹೌದು. ಮಲಯಾಳಂ ಚಿತ್ರರಂಗದಲ್ಲಿ ಹೀರೋಗಿರಿಯ ಸಿನಿಮಾಗಳಿಗೆ ಕಟ್ಟು ಬೀಳದೆ ತಮ್ಮದೇ ಆದ ಮಾದರಿಯಲ್ಲಿ ಸಿನಿಮಾಗಳನ್ನು ಮಾಡುತ್ತಿರುವ ಸ್ಟಾರ್ ನಟ ಟೊವಿನೋ ಥಾಮಸ್ ಚಿತ್ರವೊಂದನ್ನ ಮಾಡಿದ್ದರು. ಇಷ್ಟೇ ಅಲ್ಲ ತಾವೇ ಹಣವನ್ನೂ ಕೂಡ ಹೂಡಿದ್ದರು. ಆ ಚಿತ್ರದ ಹೆಸರು ವಳ್ಳಕ್ಕು. ಸನಲ್ ಕುಮಾರ್ ಶಶಿಧರನ್ ಈ ಚಿತ್ರದ ನಿರ್ದೇಶಕ.

2020ರಲ್ಲಿಯೇ ಚಿತ್ರೀಕರಣ ಮುಕ್ತಾಯವಾದ ಈ ಚಿತ್ರ 2021ರದಿಂದ ಬಿಡುಗಡೆಯ ಬಾಗಿಲಿನಲ್ಲಿ ಬಂದು ಸಿಲುಕಿಕೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಈ ಚಿತ್ರ ಬಿಡುಗಡೆಯಾಗಬಹುದು, ಚಿತ್ರಮಂದಿರದಲ್ಲಿ ನೋಡಬಹುದು ಎಂದೇ ಟೊವಿನೋ ಥಾಮಸ್ ಅವರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ.. ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಏಕಾಏಕಿ ಟೊವಿನೋ ಥಾಮಸ್ ಮತ್ತು ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಪುಕ್ಸಟ್ಟೆಯಾಗಿಯೇ ತಮ್ಮ ಚಿತ್ರವನ್ನ ವಿಮಿಯೋ' ವಿಡಿಯೋ ಪ್ಲಾಟ್ಫಾರ್ಮ್ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಖುದ್ದು ನಿರ್ದೇಶಕರೇ ತಮ್ಮ ಚಿತ್ರವನ್ನ ಸೋರಿಕೆ ಮಾಡಿದಾಗ ಕಳ್ಳಗಣ್ಣುಗಳು ಜಾಗೃತವಾಗದೇ ಇರ್ತಾವೆ. ನೋಡ..ನೋಡ್ತಾ.. ಸಂಪೂರ್ಣ ಚಿತ್ರ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿದೆ. ಸಹಸ್ರಾರು ಸಂಖ್ಯೆಯಲ್ಲಿ ವೀಕ್ಷಣೆಯನ್ನೂ ಕಂಡಿದೆ. ಈ ಮೂಲಕ ನಾಯಕ ಕಂ ನಿರ್ಮಾಪಕ ಟೊವಿನೋ ಮತ್ತು ಸನಲ್ ಕುಮಾರ್ ಶಶಿಧರನ್ ನಡುವೆ ಇದ್ದ ಮನಸ್ತಾಪ ಮತ್ತೊಂದು ಹಂತಕ್ಕೆ ತಲುಪಿದೆ. ಇಬ್ಬರ ನಡುವೆ ಆಕ್ರೋಶದ ಕಿಡಿ ಹೊತ್ತಿಕೊಂಡಿದೆ.
ಚಿತ್ರದ ಬಿಡುಗಡೆಯ ವಿಚಾರದಲ್ಲಿ ಟೊವಿನೋ ಥಾಮಸ್ ಅಸಡ್ಡೆ ತೋರುತ್ತಿದ್ದಾರೆ ಎಂದು ಮೊದಲಿಂದ ಆರೋಪ ಮಾಡ್ತಾ ಬಂದ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಇವತ್ತು ಕೂಡ ತಮ್ಮ ಈ ಹೇಳಿಕೆಗೆ ಬದ್ಧರಾಗಿದ್ದಾರೆ. ಇನ್ನೂ ನಿರ್ದೇಶಕರ ಈ ಅನಾಹುತ ಮತ್ತು ಆಘಾತಕಾರಿ ಕೆಲಸದಿಂದ ವಿಚಲಿತಗೊಂಡಿರುವ ಟೊವಿನೋ ಥಾಮಸ್ ನಿರ್ದೇಶಕರ ಮೇಲಿನ ಗೌರವದಿಂದ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಯಾವುದೇ ಆದಾಯವಿಲ್ಲದೆ ಚಿತ್ರದ ನಿರ್ಮಾಣಕ್ಕೆ ₹27 ಲಕ್ಷ ಹೂಡಿಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.ಚಿತ್ರದ ಬಿಡುಗಡೆಗೆ ಅಡ್ಡಿಪಡಿಸಿದ್ದು ನಾನಲ್ಲ ಬದಲಿಗೆ ಖುದ್ದು ಸನಲ್ ಎಂದು ಹೇಳಿರುವ ಟೊವಿನೋ ಮುಂಬೈ ಫಿಲ್ಮ್ ಫೆಸ್ಟಿವಲ್ (MAMI) ನಲ್ಲಿ ಭಾಗವಹಿಸುವ ಪ್ರಸ್ತಾಪವನ್ನು ಸಹ ನಾನು ಪ್ರಸ್ತಾಪಿಸಿದ್ದೆ ಆದರೆ ಆನ್‌ಲೈನ್‌ನಲ್ಲಿ ಸೋರಿಕೆಯಾಗುತ್ತದೆ ಎಂಬ ಭಯದಿಂದ ನಿರ್ದೇಶಕರೇ ಬೇಡವೆಂದರು. ಈಗ ನೋಡಿದರೆ ಅವರೇ ಸಂಪೂರ್ಣ ಚಿತ್ರವನ್ನ ಸೋರಿಕೆ ಮಾಡಿದ್ದಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ
ಸದ್ಯಕ್ಕೆ ಇಬ್ಬರಲ್ಲಿ ಯಾರು ಸರಿ ಯಾರು ತಪ್ಪು ಅನ್ನುವ ವಾದ ವಿವಾದದ ಆಚೆ ನಿರ್ದೇಶಕ ಮತ್ತು ನಾಯಕ ನಟನ ನಡುವಿನ ಭಿನ್ನಾಭಿಪ್ರಾಯದಿಂದ ಬಿಡುಗಡೆಗೆ ಮುನ್ನ ಚಿತ್ರವೊಂದು ಕೊನೆಯುಸಿರೆಳೆದಿದೆ. ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ವಿರುದ್ಧ ಮಲಯಾಳಂ ಚಿತ್ರರಂಗದಲ್ಲಿ ಆಕ್ರೋಶ ಭುಗಿಲೆದ್ದಿದೆ. ಯಾಕೆಂದರೆ.. ಜಗತ್ತಿನೆಲ್ಲೆಡೆ ಮಲಯಾಳಂ ಚಿತ್ರರಂಗದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇವಲ ನಾಲ್ಕೇ ತಿಂಗಳಿನಲ್ಲಿ 1000 ಕೋಟಿ ವ್ಯಾಪಾರ ವಹಿವಾಟನ್ನ ಮಾಡಿ ಮಲಯಾಳಂ ಚಿತ್ರರಂಗ ಬೇರೆ ಭಾಷೆಯ ಚಿತ್ರರಂಗದವರನ್ನ ಬೆಚ್ಚಿ ಬೀಳಿಸಿದೆ. ಇಂತಹ ಸಮಯದಲ್ಲಿ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ತಮ್ಮದೇ ಚಿತ್ರದ ಕಗ್ಗೊಲೆಯನ್ನ ಮಾಡುವುದರ ಮೂಲಕ ಕೆಟ್ಟ ಸಂಸ್ಕ್ರತಿಯನ್ನ ಆರಂಭ ಮಾಡಿದ್ದಾರೆ. ಇವತ್ತು ಇವರು ನಾಳೆ ಇನ್ಯಾರೋ ಗೊತ್ತಿಲ್ಲ.


Click it and Unblock the Notifications











