'ಕಾಂತಾರ' ಚಾಪ್ಟರ್-1 ಚಿತ್ರಕ್ಕೆ ಮಲಯಾಳಂನ ಖ್ಯಾತ ನಟ ಆಯ್ಕೆ!
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ 'ಕಾಂತಾರ' ಚಾಪ್ಟರ್-1 ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಶುರುವಾಗಿದೆ. ರಿಷಬ್ ತಮ್ಮ ಹುಟ್ಟೂರಲ್ಲಿ ದೊಡ್ಡ ಸೆಟ್ ಹಾಕಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಇದೀಗ ತಂಡಕ್ಕೆ ಮಲಯಾಳಂ ನಟ ಸೇರಿಕೊಂಡಿದ್ದಾರೆ ಎನ್ನಲಾಗ್ತಿದೆ.
ಒಂದೂವರೆ ವರ್ಷದ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾಮಟ್ಟದಲ್ಲಿ ಸದ್ದು ಮಾಡಿತ್ತು. 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ದಾಖಲೆ ಬರೆದಿತ್ತು. ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಸಿನಿಮಾ ಬಳಿಕ ಐದಾರು ಭಾಷೆಗಳಿಗೆ ಡಬ್ ಆಗಿ ಸದ್ದು ಮಾಡಿತ್ತು.

'ಕಾಂತಾರ' ಸಕ್ಸಸ್ ಬಳಿಕ ಬೇರೆ ಸಿನಿಮಾಗಳನ್ನು ಪಕ್ಕಕ್ಕಿಟ್ಟು ರಿಷಬ್ ಶೆಟ್ಟಿ ಪ್ರೀಕ್ವೆಲ್ ಆರಂಭಿಸಿದರು. ಇದು ಕಾಡುಬೆಟ್ಟು ಶಿವನ ಹಿಂದಿನ ತಲೆಮಾರಿನ ಕಥೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕಾಗಿ ಬಹಳ ದೊಡ್ಡ ಸೆಟ್ಟ ನಿರ್ಮಾಣವಾಗಿದೆ. 600ಕ್ಕೂ ಅಧಿಕ ಕಾರ್ಪೆಂಟರ್‌ಗಳು, ಸಹಾಯಕರು ದೊಡ್ಡ ಸೆಟ್ ನಿರ್ಮಾಣಕ್ಕೆ ಕೈ ಜೋಡಿಸಿದ್ದರು. ಮುಂಬೈ, ಹೈದರಾಬಾದ್‌ನಿಂದ ಬಂದ ಕಾರ್ಮಿಕರು ಸೆಟ್ ನಿರ್ಮಿಸಿದ್ದಾರೆ.
ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 'ಕಾಂತಾರ'-1 ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಅದೇ ದಿನ ಸಣ್ಣ ಟೀಸರ್ ಹರಿಬಿಟ್ಟು ರಿಷಬ್ ಗಮನ ಸೆಳೆದಿದ್ದರು. ಅವರ ಲುಕ್, ಮೇಕಿಂಗ್, ಅಜನೀಶ್ ಮ್ಯೂಸಿಕ್ ಸೇರಿ ಟೀಸರ್ ಸೂಪರ್ ಹಿಟ್ ಆಗಿತ್ತು. ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಜೊತೆ ರಿಷಬ್ ಪ್ರೀಕ್ವೆಲ್ ಕಥೆ ಸಿದ್ಧಪಡಿಸಿದ್ದಾರೆ. ಸದ್ಯ ತಂಡಕ್ಕೆ ಮಾಲಿವುಡ್ ನಟ ಜಯರಾಂ ಎಂಟ್ರಿ ಕೊಟ್ಟಿದ್ದಾರೆ ಎಂದು ಗುಲ್ಲಾಗಿದೆ.

ನಟ ಜಯರಾಂ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಚಿತ್ರದಲ್ಲಿ ಎಸಿಪಿ ಚೆಂಗಪ್ಪ ಪಾತ್ರದಲ್ಲಿ ಅಬ್ಬರಿಸಿದ್ದರು. ಇದೀಗ 'ಕಾಂತಾರ' ಚಿತ್ರದಲ್ಲಿ ಅವರು ನಟಿಸುತ್ತಾರೆ ಎನ್ನಲಾಗ್ತಿದ್ದು ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.
ಮುಂದಿನ ವರ್ಷ 'ಕಾಂತಾರ'-1 ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ರಿಲೀಸ್ ಡೇಟ್ ಇನ್ನು ಘೋಷಣೆ ಆಗಿಲ್ಲ. 20 ಕೋಟಿ ರೂ. ಬಜೆಟ್‌ನಲ್ಲಿ 'ಕಾಂತಾರ' ಸಿನಿಮಾ ಬಂದಿತ್ತು. ಪ್ರೀಕ್ವೆಲ್ ಬಜೆಟ್ 100 ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಚಿತ್ರದ ಓಟಿಟಿ ರೈಟ್ಸ್ ಈಗಾಗಲೇ ಮಾರಾಟವಾಗಿದೆ. ಅಮೇಜಾನ್ ಪ್ರೈಂ ಸಂಸ್ಥೆ ಬರೋಬ್ಬರಿ 120 ಕೋಟಿ ರೂ.ಗೆ ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಅಂದ್ರೆ ಚಿತ್ರದ ಬಜೆಟ್ ಬರೀ ಓಟಿಟಿ ರೈಟ್ಸ್‌ನಿಂದಲೇ ಬಂದಾಗಿದೆ.
ಒಮ್ಮೆಲೆ 5 ಭಾಷೆಗಳಲ್ಲಿ 'ಕಾಂತಾರ' ಚಾಪ್ಟರ್-1 ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಲಾಗುತ್ತಿದೆ. ಬೇರೆ ಭಾಷೆಗಳಲ್ಲಿ ಸಿನಿಮಾ ಬರುವುದರಿಂದ ಅಲ್ಲಿನ ಕಲಾವಿದರನ್ನು ಬಳಸಿಕೊಳ್ಳುವುದು ಚಿತ್ರಕ್ಕೆ ಪ್ಲಸ್ ಆಗುವುದರಲ್ಲಿ ಸಂದೇಹವಿಲ್ಲ. ಈ ಬಾರಿ ಚಿತ್ರವನ್ನು ಆಸ್ಕರ್ ವೇದಿಕೆಗೂ ಕೊಂಡೊಯ್ಯಲು ವಿಜಯ್ ಕಿರಗಂದೂರ್ ನಿರ್ಧರಿಸಿದ್ದಾರೆ. ಹಾಗಾಗಿ ಆಸ್ಕರ್‌ಗಾಗಿ ಮೊದಲಿನಿಂದಲೇ ಪ್ರಮೋಷನ್ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications










