8 ಕೋಟಿ ಬಜೆಟ್‌ನ ಹೊಸ ಮಲಯಾಳಂ ಚಿತ್ರ ಗಳಿಸಿದ್ದು ಕೇವಲ 1 ಕೋಟಿ; ಕನ್ನಡದಲ್ಲೂ ಬಂದಿತ್ತು ಈ ಕಥೆ!
ಕಡಿಮೆ ವೆಚ್ಚದಲ್ಲಿ ತಯಾರಾಗಿ ಹೆಚ್ಚು ಗಳಿಕೆ ಮಾಡುವ ಚಿತ್ರಗಳನ್ನು ಹೆಚ್ಚಾಗಿ ನಿರ್ಮಿಸಿರುವ ಚಿತ್ರರಂಗ ಯಾವುದು ಎಂಬ ಪ್ರಶ್ನೆ ಎದುರಾದಾಗ ಎಲ್ಲರ ಬಾಯಲ್ಲೂ ಬರುವ ಹೆಸರು ಮಲಯಾಳಂ ಚಿತ್ರರಂಗ ಎಂಬುದು. ಹೌದು, ಮಲಯಾಳಂನಲ್ಲಿ ಐದಾರು ಕೋಟಿ ವೆಚ್ಚದಲ್ಲಿ ತಯಾರಾಗಿ ಐವತ್ತು ಕೋಟಿ ಗಳಿಸಿದ ಚಿತ್ರಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿಯೇ ಇದೆ.
ಹೀಗೆ ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಹೆಚ್ಚು ಗಳಿಕೆ ಮಾಡಿರುವ ಚಿತ್ರಗಳನ್ನು ನಿರ್ಮಿಸುವುದಕ್ಕೆ ಖ್ಯಾತಿಯನ್ನು ಪಡೆದಿರುವ ಮಲಯಾಳಂ ಚಿತ್ರರಂಗದಿಂದಲ್ಲಿ ಹೆಚ್ಚು ವೆಚ್ಚದಲ್ಲಿ ತಯಾರಾಗಿ ತೀವ್ರ ಕಳಪೆ ಕಲೆಕ್ಷನ್ ಮಾಡಿರುವ ಚಿತ್ರಗಳನ್ನೂ ಸಹ ನೀಡಿದೆ. ಹೌದು, ಮಲಯಾಳಂನ ಹಲವಾರು ಚಿತ್ರಗಳು ಇಂತಹ ಕಳಪೆ ಗಳಿಕೆಯನ್ನು ಮಾಡಿವೆ.

ಸಾಧಾರಣ ನಟರ ಚಿತ್ರಗಳು ಮಾತ್ರವಲ್ಲದೇ ಸ್ಟಾರ್ ನಟರಾದ ಮೋಹನ್ ಲಾಲ್ ಹಾಗೂ ಮಮ್ಮೂಟ್ಟಿಯಂತಹ ಬಿಗ್ಗೆಸ್ಟ್ ಸ್ಟಾರ್ ನಟರ ಚಿತ್ರಗಳೇ ಮಲಯಾಳಂ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಇಂತಹ ಚಿತ್ರಗಳ ಸಾಲಿಗೆ ಇದೀಗ ಮತ್ತೊಂದು ಹೊಸ ಮಲಯಾಳಂ ಚಿತ್ರ ಸೇರ್ಪಡೆಗೊಂಡಿದೆ.
ಹೌದು, ಇದೇ ತಿಂಗಳ 6ರಂದು ಬಿಡುಗಡೆಗೊಂಡಿದ್ದ ಕೊರೊನಾ ಪೇಪರ್ ಎಂಬ ಚಿತ್ರ ಈ ರೀತಿಯ ಕಳಪೆ ಗಳಿಕೆಯನ್ನು ಮಾಡಿದೆ. 1984ರಿಂದ ನಿರ್ದೇಶನ ಮಾಡುತ್ತಿರುವ ಹಿರಿಯ ನಿರ್ದೇಶಕ ಪ್ರಿಯದರ್ಶನ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರದಲ್ಲಿ ಶೇನ್ ನಿಗಮ್, ಶೈನ್ ಟಾಮ್ ಚಾಕೋ, ಜೀನ್ ಲಾಲ್ ಹಾಗೂ ಗಾಯತ್ರಿ ನಟಿಸಿದ್ದಾರೆ.
ಇನ್ನು 8 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, 12 ದಿನಗಳಲ್ಲಿ ಕೇವಲ 1.7 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದೆ. ಹೀಗೆ ಎರಡು ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ಮಾಡುವಲ್ಲಿ ವಿಫಲ ಹೊಂದಿರುವ ಕೊರೊನಾ ಪೇಪರ್ಸ್ ಎಪಿಕ್ ಡಿಸಾಸ್ಟರ್ ಎನಿಸಿಕೊಂಡಿದೆ.

ಇನ್ನು ಈ ಚಿತ್ರ 2017ರಲ್ಲಿ ಬಿಡುಗಡೆಗೊಂಡಿದ್ದ 8 ತೊಟ್ಟಕ್ಕಲ್ ಎಂಬ ತಮಿಳು ಚಿತ್ರದ ಮೇಲೆ ಆಧಾರಿತವಾಗಿದೆ. ಈ ತಮಿಳು ಚಿತ್ರವನ್ನು 2018ರಲ್ಲಿ ಕನ್ನಡಕ್ಕೂ ಸಹ ರಿಮೇಕ್ ಮಾಡಲಾಗಿತ್ತು. 8 ಎಂಎಂ ಬುಲೆಟ್ ಎಂಬ ಶೀರ್ಷಿಕೆ ಅಡಿಯಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ನಟಿಸಿದ್ದರು.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಎಲ್ಲೆಡೆ ಸದ್ದು ಮಾಡುತ್ತಿದ್ದು, ಸಿನಿ ರಸಿಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದ ಬಳಿಕ ಬಿಡುಗಡೆಗೊಂಡ ವಿವಿಧ ಇಂಡಸ್ಟ್ರಿಗಳ ಅನೇಕ ಚಿತ್ರಗಳು ಇದೇ ರೀತಿ ಮಕಾಡೆ ಮಲಗಿವೆ.
ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ದಸರಾ ಹೊರತುಪಡಿಸಿ ಉಳಿದ ಯಾವ ಚಿತ್ರಗಳೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವೇಳೆ ದೊಡ್ಡ ಮಟ್ಟದಲ್ಲಿ ಅಬ್ಬರಿಸಿಲ್ಲ ಎನ್ನಬಹುದು. ಇನ್ನು ಈ ಕೊರೊನಾ ಪೇಪರ್ಸ್ ಮಾತ್ರವಲ್ಲದೇ ಸಮಂತಾ ನಟನೆಯ ಪೌರಾಣಿಕ ಚಿತ್ರ ಶಾಕುಂತಲಂ ಸಹ ಇದೇ ರೀತಿಯ ಸೋಲನ್ನು ಕಂಡಿದೆ.
65 ಕೋಟಿ ವೆಚ್ಚದಲ್ಲಿ ತಯಾರಾಗಿ ಬಿಡುಗಡೆಗೊಂಡಿದ್ದ ಶಾಕುಂತಲಂ ಚಿತ್ರ 4 ದಿನಗಳಲ್ಲಿ ಕೇವಲ 8.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಬೃಹತ್ ಬಜೆಟ್‌ನ ಈ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಎಪಿಕ್ ಡಿಸಾಸ್ಟರ್ ಆಗಿದೆ.


Click it and Unblock the Notifications











