ಬೆಂಗಳೂರಿನಲ್ಲಿ ನಡೆದ ನೈಜ ಕಥೆಗೆ 4 ಕೋಟಿ ಹಾಕಿ ಚಿತ್ರ ಮಾಡಿ 70 ಕೋಟಿ ಬಾಚಿದ ಮಲಯಾಳಂ ಮಂದಿ!
ಕಡಿಮೆ ಬಜೆಟ್ ಹಾಕಿ ಚಿತ್ರಗಳನ್ನು ನಿರ್ಮಿಸಿ ಕೋಟಿ ಕೋಟಿ ಬಾಚುವುದರಲ್ಲಿ ಮಲಯಾಳಂ ಚಿತ್ರಗಳು ಎತ್ತಿದ ಕೈ. ಕಥೆ ಚೆನ್ನಾಗಿದ್ದು, ರಿಚ್ ಮೇಕಿಂಗ್ ಅಗತ್ಯವಿಲ್ಲದೇ ಕೇವಳ ಒಂದೆರಡು ಮನೆ, ಒಂದು ಹಳ್ಳಿಯಲ್ಲಿಯೇ ಕಥೆಯನ್ನು ಹೇಳಿ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿದ ಸಿನಿಮಾಗಳಿವೆ.
ಕಳೆದ ವರ್ಷ ತೆರೆಕಂಡ ಕನ್ನಡದ ಚಿತ್ರಗಳೂ ಸಹ ಇದೇ ಮಾದರಿಯಲ್ಲಿ ಕಡಿಮೆ ಖರ್ಚು ಮಾಡಿ ಬೃಹತ್ ಕಲೆಕ್ಷನ್ ಮಾಡಿದ್ದವು. ಅದರಲ್ಲೂ ಕಾಂತಾರ ಚಿತ್ರ ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾಗಿ 400 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಕಲೆಕ್ಷನ್ ಮಾಡಿತ್ತು. ಎಲ್ಲಾ ಅಂದುಕೊಂಡಂತೆ ನಡೆದು ಮಳೆಯಿಂದ ಹಾನಿಯಾಗದೇ ಇದ್ದಿದ್ದರೆ ಕಾಂತಾರ ಏಳು ಕೋಟಿ ಬಜೆಟ್‌ನಲ್ಲೇ ಮುಗಿಯುತ್ತಿತ್ತು.

ಕೇವಲ ಕಾಂತಾರ ಮಾತ್ರವಲ್ಲದೆ ದೃಶ್ಯಂ, ಹೃದಯಂ, ಮಾಳಿಕಪುರಂ ರೀತಿಯ ಹಲವು ಮಲಯಾಳಂ ಚಿತ್ರಗಳು ಒಂದಂಕಿ ಕೋಟಿ ವೆಚ್ಚದಲ್ಲಿ ತಯಾರಾಗಿ ಕೋಟಿ ಕೋಟಿ ಬಾಚಿವೆ. ಈ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ಲೇಟೆಸ್ಟ್ ಬ್ಲಾಕ್‌ಬಸ್ಟರ್ ಮಲಯಾಳಂ ಚಿತ್ರ ರೋಮಾಂಚಂ. ಹೌದು, ಫೆಬ್ರವರಿ 3ರಂದು ಬಿಡುಗಡೆಗೊಂಡ ಈ ಚಿತ್ರ ಯಾವುದೇ ನಿರೀಕ್ಷೆಯಿಲ್ಲದೇ ಬೆಳ್ಳಿತೆರೆಗೆ ಲಗ್ಗೆ ಇಟ್ಟು ಮ್ಯಾಜಿಕ್ ಮಾಡಿದ ಸಿನಿಮಾ.
ಇನ್ನು ಈ ಚಿತ್ರ ಕೇವಲ ನಾಲ್ಕು ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ 70 ಕೋಟಿ ಕಲೆಕ್ಷನ್ ಮಾಡಿದೆ. ಪ್ರಮೋಷನ್ ಎಲ್ಲಾ ಸೇರಿ ಚಿತ್ರಕ್ಕೆ ಕೇವಲ ಆರು ಕೋಟಿ ವೆಚ್ಚ ತಗುಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಇನ್ನು ಈ ಚಿತ್ರದ ಕಥೆ ಬೆಂಗಳೂರಿನಲ್ಲಿ ನಡೆದ ನೈಜ ಕಥೆಯಾಗಿದೆ.
ಹೌದು, 2007ರಲ್ಲಿ ಕೇರಳ ಮೂಲದ ಏಳು ಸ್ನೇಹಿತರು ಬೆಂಗಳೂರಿನಲ್ಲಿ ತಾವು ವಾಸವಿದ್ದ ಮನೆಯಲ್ಲಿ ಊಜಾ ಬೋರ್ಡ್ ಬಳಸಿ ಆತ್ಮವನ್ನು ಕರೆಸುವ ಕೆಟ್ಟ ಪ್ರಯತ್ನಕ್ಕೆ ಮುಂದಾಗ್ತಾರೆ. ಮೊದಲಿಗೆ ವಿಫಲವಾದ ಬಳಿಕ ಗುಂಪಿನ ಸದಸ್ಯನೋರ್ವ ತಾನು ಕೊಟ್ಟ ಐಡಿಯಾ ಫ್ಲಾಪ್ ಆಗಬಾರದು ಎಂಬ ಕಾರಣಕ್ಕೆ ಯಾವುದೋ ಒಂದು ಹೆಸರು ಬರುವ ಹಾಗೆ ನಾಟಕ ಮಾಡುತ್ತಾನೆ. ವಿಪರ್ಯಾಸಕ್ಕೆ ಆತ ಮಾಡಿದ ನಾಟಕವೇ ನಂತರ ನಿಜವಾಗಿಬಿಡುತ್ತದೆ. ಹೀಗೆ ನಿಜವಾಗಿಯೂ ದೆವ್ವದ ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಬ್ಯಾಚುಲರ್ಸ್ ಪಾಡು ಏನಾಗುತ್ತದೆ ಎಂಬುದೇ ಚಿತ್ರದ ಕಥೆ.

ಹೀಗೆ ಏಳು ಇಕ್ಕಟ್ಟಿಗೆ ಸಿಲುಕಿಕೊಂಡ ಏಳು ಮಂದಿ ಬ್ಯಾಚುಲರ್‌ಗಳಲ್ಲಿ ಜಿತು ಮಾಧವನ್ ಸಹ ಒಬ್ಬರಾಗಿದ್ದು, ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಮೂಲಕ ತಾವು ಅನುಭವಿಸಿದ ಸ್ವಂತ ಘಟನೆಗಳನ್ನು ನಿರ್ದೇಶಕರು ತೆರೆ ಮೇಲೆ ತಂದಿದ್ದಾರೆ. ಸದ್ಯ ಅರ್ಧ ಕಥೆಯನ್ನು ಮಾತ್ರ ಚಿತ್ರದಲ್ಲಿ ತೋರಿಸಲಾಗಿದ್ದು, ರೋಮಾಂಚಂ 2 ಕೂಡ ಬರಲಿದೆ ಎಂದು ಕೊನೆಯಲ್ಲಿ ತೋರಿಸಲಾಗಿದೆ.
ಈ ಚಿತ್ರ ಮಾತ್ರವಲ್ಲದೇ ಕಡಿಮೆ ವೆಚ್ಚದಲ್ಲಿ ತಯಾರಾಗಿ ಕೋಟಿ ಕೋಟಿ ಬಾಚಿದ ಇತರೆ ಮಲಯಾಳಂ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದ ಮಾಳಿಕಪುರಂ ಎಂಬ ಮಲಯಾಳಂ ಸಿನಿಮಾ ಕೇವಲ 3.5 ಕೋಟಿ ವೆಚ್ಚದಲ್ಲಿ ತಯಾರಾಗಿ ಎಪ್ಪತ್ತು ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು.
* ಕಳೆದ ವರ್ಷ ಬಿಡುಗಡೆಗೊಂಡಿದ್ದ ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ನಟನೆಯ ಹೃದಯಂ ಎಂಬ ಚಿತ್ರ 5 ಕೋಟಿ ವೆಚ್ಚದಲ್ಲಿ ತಯಾರಾಗಿ 78 ಕೋಟಿ ಗಳಿಕೆ ಮಾಡಿತ್ತು.
* 2013ರಲ್ಲಿ ಬಿಡುಗಡೆಗೊಂಡಿದ್ದ ಬ್ಲಾಕ್‌ಬಸ್ಟರ್ ಕ್ರೈಮ್ ಥ್ರಿಲ್ಲರ್ ದೃಶ್ಯಂ 5 ಕೋಟಿ ವೆಚ್ಚದಲ್ಲಿ ತಯಾರಾಗಿ 75 ಕೋಟಿ ಗಳಿಕೆ ಮಾಡಿತ್ತು.
* ಮಾಲಿವುಡ್ ಚಿತ್ರರಂಗದ ಎವರ್‌ಗ್ರೀನ್ ಸೂಪರ್ ಹಿಟ್ ಚಿತ್ರ ಪ್ರೇಮಮ್ ಸಹ 4 ಕೋಟಿ ಬಜೆಟ್‌ನಲ್ಲಿ ತಯಾರಾಗಿ 65 ಕೋಟಿ ಗಳಿಕೆ ಮಾಡಿತ್ತು.


Click it and Unblock the Notifications











