ಈ ಚಿತ್ರ ಕನ್ನಡಿಗರ ಮನ ಗೆದ್ದಿದೆ; ಮಲಯಾಳಂ ಚಿತ್ರವನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್!
ಕಿಚ್ಚ ಸುದೀಪ್ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಸಹ ನಂಟನ್ನು ಹೊಂದಿರುವ ನಟ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬರುವ ಮುನ್ನವೇ ದೇಶದಾದ್ಯಂತ ಹೆಸರು ಮಾಡಿದ್ದ ಕಿಚ್ಚ ಸುದೀಪ್ ಒಳ್ಳೆಯ ಚಿತ್ರಗಳನ್ನು ಈ ಹಿಂದಿನಿಂದಲೂ ಗುರುತಿಸಿ ಹೊಗಳುವ ಹವ್ಯಾಸವನ್ನು ಹೊಂದಿರುವ ಕಿಚ್ಚ ಸುದೀಪ್ ಸದ್ಯ ಮಲಯಾಳಂನ ಚಿತ್ರವೊಂದನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.
ಹೌದು, ಇದೇ ಮೇ 5ರಂದು ಬಿಡುಗಡೆಗೊಂಡಿದ್ದ ಮಲಯಾಳಂನ 2018 ಚಿತ್ರವನ್ನು ಕಿಚ್ಚ ಸುದೀಪ್ ಹೊಗಳಿದ್ದಾರೆ. ಈ ಚಿತ್ರ 2018ರಲ್ಲಿ ಕೇರಳದಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ನಡೆದಿದ್ದ ಘಟನೆಗಳು ಹಾಗೂ ಅದರಿಂದ ಪಾರಾದ ತಂಡವೊಂದರ ಬಗ್ಗೆ ತೋರಿಸಲಾಗಿದೆ. ಯಾವುದೇ ಭೇದಭಾವವಿಲ್ಲದೇ ಒಗ್ಗಟ್ಟಾಗಿ ಹೋರಾಡಿದ ಮಾದರಿ ಕಥೆ ಇದಾಗಿದೆ.

ಈ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರೂ ಸಹ ಚಿತ್ರವನ್ನು ಹೊಗಳುತ್ತಿದ್ದು, ಚಿತ್ರ ಕೇರಳದ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿದೆ. ಸದ್ಯ ಈ ಚಿತ್ರವನ್ನು ವೀಕ್ಷಿಸಿ ಟ್ವೀಟ್ ಮಾಡಿರುವ ಸುದೀಪ್ "ಕೇರಳದಲ್ಲಿ 2018ರ ಪ್ರವಾಹದ ಸಂದರ್ಭದಲ್ಲಿ ಮಾನವೀಯತೆ ಗೆದ್ದಿದೆ. ಈ ಅದ್ಭುತ ನೈಜ ಕಥೆಯು ಕೇರಳ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿದೆ. ಬೆಳ್ಳಿ ಪರದೆಯ ಮೇಲೆ ಅದ್ಭುತವಾಗಿ ತೋರಿಸಲಾಗಿದೆ. #2018EveryoneIsAHero ಕನ್ನಡ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಿದೆ. ಚಿತ್ರತಂಡಕ್ಕೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.
ಹೀಗೆ ಕಿಚ್ಚ ಸುದೀಪ್ ಚಿತ್ರವನ್ನು ಹಾಡಿ ಹೊಗಳಿದ್ದು, ಇದಕ್ಕೆ ಸಿನಿ ರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ರಿಟ್ವೀಟ್ ಮಾಡಿರುವ ಟೊವಿನೊ ಥಾಮಸ್ ಕಿಚ್ಚ ಸುದೀಪ್ ಹೊಗಳಿಕೆಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನು ಈ ಚಿತ್ರ ರಾಜ್ಯದಲ್ಲಿ ಅಬ್ಬರದ ಕಲೆಕ್ಷನ್ ಅನ್ನೂ ಸಹ ಮಾಡಿದ್ದು, ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಹೌದು, ಕೇರಳದ ನೂತನ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿರುವ 2018 ಚಿತ್ರ ರಾಜ್ಯದಲ್ಲಿ 5 ಕೋಟಿಗಿಂತ ಅಧಿಕ ಗಳಿಕೆ ಮಾಡುವ ಮೂಲಕ ಕರ್ನಾಟಕದಲ್ಲಿ 5 ಕೋಟಿ ಕ್ಲಬ್ ಸೇರಿದ ಮಲಯಾಳಂ ಚಿತ್ರ ಎನಿಸಿಕೊಂಡಿದೆ. ಹಾಗಿದ್ದರೆ ರಾಜ್ಯದಲ್ಲಿ ಅತಿನೆಚ್ಚಿನ ಗಳಿಕೆ ಮಾಡಿರುವ ಹತ್ತು ಮಲಯಾಳಂ ಸಿನಿಮಾಗಳು ಯಾವುವು ಎಂಬ ಪಟ್ಟಿ ಈ ಕೆಳಕಂಡಂತಿದೆ..
1. 2018 - 5.3 ಕೋಟಿ ( ಇನ್ನೂ ಪ್ರದರ್ಶನ ಕಾಣುತ್ತಿದೆ )
2. ಲೂಸಿಫರ್ - 4.7 ಕೋಟಿ
3. ಕುರುಪ್ - 3.6 ಕೋಟಿ
4. ಭೀಷ್ಮ ಪರ್ವಮ್ - 3.45 ಕೋಟಿ
5. ಪುಲಿ ಮುರುಗನ್ - 2.6 ಕೋಟಿ
6. ರೋಮಾಂಚಂ - 2.45 ಕೋಟಿ
7. ಬೆಂಗಳೂರು ಡೇಸ್ - 2.4 ಕೋಟಿ
8. ಒಡಿಯನ್ - 2.3 ಕೋಟಿ
9. ಪ್ರೇಮಮ್ - 2.2 ಕೋಟಿ
10. ಕುಂಬಳಂಗಿ ಡೇಸ್ - 2.2 ಕೋಟಿ


Click it and Unblock the Notifications











