ಮಮ್ಮುಟ್ಟಿ ಜೊತೆ ಸಿನಿಮಾ, ಸುಳಿವು ಕೊಟ್ಟ ಮೋಹನ್ ಲಾಲ್?
ಸದ್ಯ ಮಲಯಾಳಂ ಇಂಡಸ್ಟ್ರಿಯ ಎರಡು ಕಣ್ಣು ಮೋಹನ್ ಲಾಲ್ ಮತ್ತು ಮಮ್ಮುಟ್ಟಿ. ಈ ಇಬ್ಬರು ಸೂಪರ್ ಸ್ಟಾರ್‌ಗಳು ತೆರೆಹಿಂದೆಯೂ ಉತ್ತಮ ಸ್ನೇಹಿತರು. ಒಬ್ಬರನ್ನು ಒಬ್ಬರು ಕಂಡರೆ ಬಹಳ ಗೌರವ ಹಾಗೂ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಇವರಿಬ್ಬರನ್ನು ಒಂದೇ ವೇದಿಕೆಯಲ್ಲಿ ನೋಡುವುದೇ ದೊಡ್ಡ ಸಂಭ್ರಮದಂತಿರುತ್ತದೆ. ಇದೀಗ, ಒಂದೇ ಚಿತ್ರದಲ್ಲಿ ನಟಿಸುವ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ.
ಬಹಳ ದಿನಗಳ ನಂತರ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಕ್ ಆಫ್ ದಿ ಟೌನ್ ಆಗಿದೆ. ಇದುವರೆಗೂ 55ಕ್ಕೂ ಅಧಿಕ ಸಿನಿಮಾಗಳಲ್ಲಿ ಇಬ್ಬರು ಸೂಪರ್ ಸ್ಟಾರ್‌ಗಳು ಒಟ್ಟಿಗೆ ನಟಿಸಿದ್ದಾರೆ ಎನ್ನುವ ಮಾಹಿತಿ ಇದೆ. ಆದ್ರೆ ಇತ್ತೀಚಿನ ದಿನದಲ್ಲಿ ಅದು ಸಾಧ್ಯವಾಗಿರಲಿಲ್ಲ. ಈಗ ಅಂತಹದೊಂದು ನಿರೀಕ್ಷೆ ಹುಟ್ಟಿಕೊಂಡಿದೆ.
ಮಮ್ಮುಟ್ಟಿ ಜೊತೆ ಮತ್ತೆ ಸ್ಕ್ರೀನ್ ಶೇರ್ ಮಾಡುವ ಬಗ್ಗೆ ಸ್ವತಃ ಮೋಹನ್ ಲಾಲ್ ಸುಳಿವು ಕೊಟ್ಟಿದ್ದಾರೆ ಎನ್ನುವುದು ವಿಶೇಷ.

ಮಮ್ಮುಟ್ಟಿ ಅವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಜನಪ್ರಿಯ ಮಲಯಾಳಂ ದಿನಪತ್ರಿಕೆ 'ಮಾತೃಭೂಮಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಶೀಘ್ರದಲ್ಲೇ ಒಟ್ಟಿಗೆ ಕೆಲಸ ಮಾಡಬಹುದೆಂದು ಮೋಹನ್ ಲಾಲ್ ಬಹಿರಂಗಪಡಿಸಿದರು. ಮೆಗಾಸ್ಟಾರ್ ಮಮ್ಮುಟ್ಟಿ ಜೊತೆ ನಟಿಸುವ ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಯುತ್ತಿದೆ, ಪ್ರಾಥಮಿಕ ಹಂತದ ಚರ್ಚೆಯಲ್ಲಿದೆ ಎಂದು ಮೋಹನ್ ಲಾಲ್ ಹೇಳುವ ಮೂಲಕ ಮಲಯಾಳಂ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದರು.
ಈ ಹಿಂದೆ 2019 ರಲ್ಲಿ ಮೋಹನ್ ಲಾಲ್ ನಟಿಸಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ 'ಲೂಸಿಫರ್' ಚಿತ್ರದ ಮುಂದುವರಿದ ಭಾಗದಲ್ಲಿ ಮಮ್ಮುಟ್ಟಿ ಪ್ರಮುಖ ಪಾತ್ರ ವಹಿಸಬಹುದು ಎಂಬ ವದಂತಿ ಹಬ್ಬಿತ್ತು. ವರ್ಷದ ಆರಂಭದಲ್ಲಿ ಮೋಹನ್ ಲಾಲ್ ಮತ್ತು ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಮಮ್ಮುಟ್ಟಿ ಅವರ ಕೊಚ್ಚಿ ನಿವಾಸಕ್ಕೆ ಭೇಟಿ ನೀಡಿದ ನಂತರ ಈ ವದಂತಿಗಳು ಹಬ್ಬಿದ್ದವು. ಬಹುಶಃ ಈ ಚಿತ್ರದಲ್ಲಿ ಮೋಹನ್ ಲಾಲ್ ಎದುರು ವಿಲನ್ ಆಗಿ ಮಮ್ಮುಟ್ಟಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಧಿಕೃತವಾಗಿ ಈ ಬಗ್ಗೆ ಎಲ್ಲಿಯೂ ವಿಷಯ ವರದಿಯಾಗಿಲ್ಲ.

ಒಂದು ವೇಳೆ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಅವರು ಸಿನಿಮಾವೊಂದಕ್ಕಾಗಿ ಕೈ ಜೋಡಿಸಿದ್ದೇ ಆದರೆ ಮಲಯಾಳಂ ಇಂಡಸ್ಟ್ರಿಯಲ್ಲಿ ಅದೊಂದು ಇತಿಹಾಸ ಸೃಷ್ಟಿಸಲಿದೆ ಎಂಬ ಮಾತಿದೆ. ಸುಮಾರು 13 ವರ್ಷಗಳ ಬಳಿಕ ಈ ಜೋಡಿ ಮತ್ತೆ ತೆರೆಮೇಲೆ ಒಟ್ಟಿಗೆ ನಟಿಸುವ ಸುವರ್ಣ ಅವಕಾಶ ಕಲ್ಪಿಸುತ್ತದೆ ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಈ ಬಗ್ಗೆ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಸೇರಿ ಶೀಘ್ರದಲ್ಲೇ ದೊಡ್ಡ ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
2008ರಲ್ಲಿ ತೆರೆಕಂಡಿದ್ದ 'ಟ್ವೆಂಟಿ20' ಸಿನಿಮಾದಲ್ಲಿ ಕೊನೆಯದಾಗಿ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಜೋಡಿಯನ್ನು ಒಟ್ಟಿಗೆ ನೋಡಿದ್ದೆವು. ಅದಾದ ಬಳಿಕ 2013ರಲ್ಲಿ ಮಮ್ಮುಟ್ಟಿ ನಟನೆಯ 'ಕಡಲ್ ಕಡನ್ನು ಒರು ಮಾಟುಕುಟ್ಟಿ' ಚಿತ್ರದಲ್ಲಿ ಮೋಹನ್ ಲಾಲ್ ಅತಿಥಿ ಪಾತ್ರ ಮಾಡಿದ್ದರು. ಅದಾದ ನಂತರವೂ ಮಲಯಾಳಂ ಇಂಡಸ್ಟ್ರಿಯಿಂದ ಆಯೋಜನೆಯಾಗಿದ್ದ ಅನೇಕ ಕಾರ್ಯಕ್ರಮಗಳಲ್ಲಿ ಈ ಇಬ್ಬರು ಸೂಪರ್ ಸ್ಟಾರ್‌ಗಳು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಇತ್ತೀಚಿಗಷ್ಟೆ ಮಮ್ಮುಟ್ಟಿ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವಿಶೇಷವಾಗಿ ವಿಡಿಯೋ ಮೂಲಕ ಬರ್ತಡೇಗೆ ವಿಶ್ ಮಾಡಿದ್ದ ಮೋಹನ್ ಲಾಲ್, ''ಪ್ರಪಂಚ ಯಾವುದೇ ಉದ್ಯಮಗಳು ಮತ್ತು ಇತರೆ ಭಾಷೆಗಳ ಇಂಡಸ್ಟ್ರಿಯಲ್ಲಿ ಇಂತಹ ನಟನನ್ನು ತಾನು ನೋಡಿಲ್ಲ'' ಎಂದು ಹೇಳಿದರು.
ಮೋಹನ್ ಲಾಲ್ ನಟನೆಯ 'ಮರಕ್ಕರ್' ಸಿನಿಮಾ ಬಿಡುಗಡೆಯಾಗಬೇಕಿದೆ. 'ಆರಟ್ಟು' ಚಿತ್ರೀಕರಣ ಶುರು ಮಾಡಿದೆ. 'ರಾಮ್' ಸಿನಿಮಾ ಬಹುತೇಕ ಶೂಟಿಂಗ್ ಮುಗಿಸಿದೆ. '12ಥ್ ಮ್ಯಾನ್' ಚಿತ್ರವೂ ಆರಂಭಗೊಂಡಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ 'ಬ್ರೋ ಡ್ಯಾಡಿ' ಸಿನಿಮಾ ಶೂಟಿಂಗ್ ಮುಗಿಸಿದೆ. 'ಲೂಸಿಫರ್-2' ಚಿತ್ರವೂ ಸದ್ಯದಲ್ಲೇ ಪ್ರಾರಂಭವಾಗಲಿದೆ.


Click it and Unblock the Notifications











