ನಟ ಮಮ್ಮೂಟ್ಟಿಗೆ ಬಹಿರಂಗ ಕ್ಷಮೆಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್
ಮಲಯಾಳಂ ನಟ ಮಮ್ಮೂಟಿ ತಮ್ಮ ಅದ್ಭುತ ನಟನೆ ಮೂಲಕ ಚಿತ್ರರಂಗದಲ್ಲಿ ಚಿರಪರಿಚಿತರಾಗಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ದಿಗ್ಗಜ ನಟರ ಸಾಲಿಗೆ ಸೇರಿದ್ದಾರೆ. ತಮ್ಮ ಸಮಾಜಮುಖಿ ಕಾರ್ಯಗಳಿಂದ ಕೂಡ ಗುರ್ತಿಸಿಕೊಂಡಿದ್ದಾರೆ. ಸದ್ಯ ಮಮ್ಮೂಟಿ ಅವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕೇಳಿರುವುದು ಚರ್ಚೆ ಹುಟ್ಟಾಕ್ಕಿದೆ.
ರಾಜ್ಯದ ಸಿಎಂ ಒಬ್ಬರು ನಟನಿಗೆ ಕ್ಷಮೆ ಕೇಳಿರುವುದು ಅಚ್ಚರಿ ತಂದಿದೆ. ಅಷ್ಟಕ್ಕೂ ಕಾರಣ ಏನು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ವಯನಾಡ್ ಟೌನ್‌ಶಿಪ್‌ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ನಟ ಮಮ್ಮೂಟ್ಟಿಗೆ ಕಹಿ ಅನುಭವ ಎದುರಾಗಿತ್ತು. ಅವರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗಿತ್ತು. ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಈ ಬಗ್ಗೆ ಕೇರಳ ಸಿಎಂ ಪ್ರತಿಕ್ರಿಯಿಸಿದ್ದಾರೆ.

ನಟ ಮಮ್ಮುಟ್ಟಿ ಸಿಪಿಐ-ಎಂ ನಾಯಕರ ಜೊತೆ ನಡೆಸಿದ ಮಾತುಕತೆ ವಿವಾದಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ತಪ್ಪಾಗಿ ಬಿಂಬಿತವಾಗಿ ಟ್ರೋಲ್ ಆಗುವಂತಾಗಿತ್ತು. ಟೌನ್‌ಶಿಪ್ ಭೇಟಿ ವೇಳೆ ನಟ ಮಮ್ಮುಟ್ಟಿ, ಸಿಪಿಐ-ಎಂ ವಯನಾಡ್ ಜಿಲ್ಲಾ ಕಾರ್ಯದರ್ಶಿ ಕೆ. ರಫೀಕ್ ಅವರೊಂದಿಗೆ ಖಾಸಗಿಯಾಗಿ ಮಾತನಾಡಿದರು.. "ನೀನು ನನ್ನ ಪಕ್ಕದಲ್ಲಿದ್ದರೆ, ನಾನು ನಿನಗಾಗಿಯೇ ಇಲ್ಲಿಗೆ ಬಂದಿದ್ದೇನೆ ಎಂದು ಜನರು ಭಾವಿಸುತ್ತಿದ್ದರು. ದಯವಿಟ್ಟು ದೂರವಿರಿ" ಎಂದಿದ್ದರು. ಈ ಸಂಭಾಷಣೆ ಅಲ್ಲಿದ್ದ ಸೀಕ್ರೆಟ್ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿತ್ತು. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಿಪಿಎಂ ಪರ ಸೋಶಿಯಲ್ ಮೀಡಿಯಾದಲ್ಲಿ ಮಮ್ಮೂಟ್ಟಿ ಅವರನ್ನು ಬಹಳ ಟೀಕಿಸಲಾಗಿತ್ತು. ಕೆಟ್ಟದಾಗಿ ನಿಂದಿಸಿ ಟಾರ್ಗೆಟ್ ಮಾಡಿದ್ದರು.
ಟ್ರೋಲ್ ಬಗ್ಗೆ ಬೇಸರಗೊಂಡಿದ್ದ ನಟ ಮಮ್ಮೂಟ್ಟಿ ಏಕಾಏಕಿ ಕೆ. ರಫೀಕ್ ಗೆ ಕರೆ ಮಾಡಿ ತಮ್ಮ ಕಳವಳ ವ್ಯಕ್ತಪಡಿಸಿದರು. ಆ ಬಳಿಕ ರಫೀಕ್ ಸೋಶಿಯಲ್ ಮೀಡಿಯಾ ಮೂಲಕ ಈ ವಿವಾದ ಇಲ್ಲಿಗೆ ಬಿಡುವಂತೆ ಮನವಿ ಮಾಡಿದ್ದರು. ಇದೀಗ ಸ್ವತಃ ಕೇರಳ ಸಿಎಂ ಪಿಣರಾಯಿ ಈ ಬಗ್ಗೆ ಪ್ರತಿಕ್ರಿಯಿಸುವಂತಾಗಿದೆ. ಸೋಮವಾರ(ಮಾರ್ಚ್ 8) ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
ಒಳ್ಳೆಯ ಉದ್ದೇಶದಿಂದ ಟೌನ್‌ಶಿಪ್‌ಗೆ ಮಮ್ಮೂಟ್ಟಿ ಭೇಟಿ ನೀಡಿದ್ದರು. ದಿಗ್ಗಜ ನಟನನ್ನು ಅಪಹಾಸ್ಯ ಅಥವಾ ನಿಂದನೆಗೆ ಒಳಪಡಿಸಬಾರದಿತ್ತು ಸಿಎಂ ಪಿಣರಾಯಿ ಹೇಳಿದ್ದಾರೆ. "ಈ ಘಟನೆಯಿಂದ ಮಮ್ಮೂಟ್ಟಿ ಅವರಿಗೆ ಯಾವುದೇ ಮಾನಸಿಕ ಹಿಂಸೆ ಉಂಟಾಗಿದ್ದರೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ. ಖ್ಯಾತ ನಟನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಿತ್ತು" ಎಂದು ವಿಜಯನ್ ಹೇಳಿದರು.
ಕೇರಳ ಸಿಎಂ ಮಾತನಾಡಿ "ಇದು ಅನಿರೀಕ್ಷಿತ ಭೇಟಿಯಾಗಿತ್ತು. ನಟ ಮಮ್ಮೂಟ್ಟಿ ನಿಜವಾದ ಕಾಳಜಿಯಿಂದ ಅಲ್ಲಿಗೆ ಬಂದಿದ್ದರು. ಆ ಉತ್ಸಾಹದಲ್ಲಿ ಅವರು ಜಿಲ್ಲಾ ಕಾರ್ಯದರ್ಶಿಯೊಂದಿಗೆ ಖಾಸಗಿಯಾಗಿ ಮಾತನಾಡಿದರು ಅಷ್ಟೆ" ಎಂದು ವಿಜಯನ್ ತಿಳಿಸಿದ್ದಾರೆ. "ಒಳ್ಳೆಯ ಉದ್ದೇಶದಿಂದ ಮಾಡುವ ಕೆಲಸವನ್ನು ನಕಾರಾತ್ಮಕವಾಗಿ ಹೇಗೆ ತಿರುಚಬಹುದು ಎಂಬುದಕ್ಕೆ ಇದು ಒಂದು ಶ್ರೇಷ್ಠ ಉದಾಹರಣೆಯಾಗಿದೆ" ಎಂದು ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದ್ದಾರೆ.
ವಯಸ್ಸು 70 ದಾಟಿದ್ರು ಇವತ್ತಿಗೂ ಬಹುಬೇಡಿಕೆಯ ನಟನಾಗಿ ಮಲಯಾಳಂ ಚಿತ್ರರಂಗದಲ್ಲಿ ಮಮ್ಮೂಟ್ಟಿ ಮಿಂಚುತ್ತಿದ್ದಾರೆ. ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ. ಅದ್ಭುತ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿವೆ. ಈಗಾಗಲೇ 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. 'ಶಿಕಾರಿ' ಎಂಬ ಕನ್ನಡ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. ಸದ್ಯ 6 ಸಿನಿಮಾಗಳು ಮಮ್ಮೂಟ್ಟಿ ಕೈಯಲ್ಲಿವೆ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಕೆಲ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ.


Click it and Unblock the Notifications











