ಮಮ್ಮುಟ್ಟಿ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮಂಜು ವಾರಿಯರ್
ಮಾಲಿವುಡ್ ಮೆಗಾಸ್ಟಾರ್ ಮತ್ತು ಮಲಯಾಳಂ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ ಅಭಿಮಾನಿಗಳಿಗೆ ಸೂಪರ್ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮೊದಲ ಸಲ ಮಮ್ಮುಟ್ಟಿ ಮತ್ತು ಮಂಜು ವಾರಿಯರ್ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ಎಂಬ ಸುದ್ದಿ ಫಿಲಂನಗರಿಯಲ್ಲಿ ಸದ್ದು ಮಾಡ್ತಿದೆ.
ಮಮ್ಮುಟ್ಟಿ ನಟಿಸುತ್ತಿರುವ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಮಂಜು ವಾರಿಯರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ನವನಿರ್ದೇಶಕ ಜೋಫಿನ್ ಟಿ ಚಾಕೋ ಆಕ್ಷನ್ ಕಟ್ ಹೇಳಲಿದ್ದಾರಂತೆ.
ಖ್ಯಾತ ನಿರ್ದೇಶಕ ಉನ್ನಿಕೃಷ್ಣನ್ ಮತ್ತು ಎ ಜೋಸೆಫ್ ಈ ಚಿತ್ರಕ್ಕೆ ಜಂಟಿಯಾಗಿ ಬಂಡವಾಳ ಹಾಕಲಿದ್ದಾರೆ ಎನ್ನಲಾಗಿದೆ. ಮಮ್ಮುಟ್ಟಿ ಅವರಿಗೆ ನಾಯಕಿಯಾಗಿ ಮಂಜು ವಾರಿಯರ್ ನಟಿಸುತ್ತಿಲ್ಲ. ಆದರೆ, ಪ್ರಮುಖ ಪಾತ್ರ ಎಂದಷ್ಟೇ ಹೇಳಲಾಗಿದೆ.

ಚಿತ್ರದ ಸ್ಕ್ರಿಪ್ಟ್ ಕೇಳಿದ ಮೇಲೆ ಮಮ್ಮುಟ್ಟಿ ಅವರು ಫಟ್ ಅಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮತ್ತೊಂದೆಡೆ ಮಮ್ಮುಟ್ಟಿ ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದ ಮಂಜು ವಾರಿಯರ್ ಕೂಡ ಓಕೆ ಎಂದಿದ್ದು, ಸದ್ಯದಲ್ಲೇ ಈ ಪ್ರಾಜೆಕ್ಟ್ ಕುರಿತು ಅಧಿಕೃತವಾಗಿ ಘೋಷಿಸಲಿದ್ದಾರಂತೆ. ಎಲ್ಲ ಅಂದುಕೊಂಡಂತೆ ಆದರೆ ಈ ಸಿನಿಮಾ 2020ರಲ್ಲಿ ಆರಂಭವಾಗಲಿದೆ.
ಸದ್ಯಕ್ಕೆ ಮಂಜು ವಾರಿಯರ್ ತಮಿಳಿನ ಅಸುರನ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸಕ್ಸಸ್ ಆಗಿದ್ದು, ಮತ್ತೊಂದು ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಸಿರುತೈ ಶಿವ ನಿರ್ದೇಶನ ಮಾಡಲಿರುವ ರಜನಿಕಾಂತ್ ಚಿತ್ರಕ್ಕೆ ಮಂಜು ವಾರಿಯರ್ ಅವರನ್ನ ಸಂಪರ್ಕ ಮಾಡಲಾಗಿದೆಯಂತೆ.
ಇನ್ನೊಂದೆಡೆ ಮಮ್ಮುಟ್ಟಿ ನಟನೆಯ ಚಿತ್ರಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಗೆ ರೆಡಿಯಾಗುತ್ತಿದೆ. ಮಾಮಂಗಂ ಸಿನಿಮಾ ಡಿಸೆಂಬರ್ 12 ರಂದು ತೆರೆಕಾಣುತ್ತಿದೆ. ಶೈಲಾಕ್ ಎಂಬ ಚಿತ್ರವೂ ಚಿತ್ರೀಕರಣ ಮಾಡುತ್ತಿದೆ. ಈ ಮಧ್ಯೆ ಒನ್ ಎಂಬ ಸಿನಿಮಾವನ್ನ ಕೂಡ ಮಮ್ಮುಟ್ಟಿ ಕೈಗೆತ್ತಿಕೊಂಡಿದ್ದಾರೆ.


Click it and Unblock the Notifications











