ಅಂದು ನಡೆದಿದ್ದೇನು ? ಯುವತಿ ಹೇಳಿದ್ದೇನು ? ಮಂಜುಮ್ಮೆಲ್ ಬಾಯ್ಸ್ ನಿರ್ದೇಶಕನ ವಿರುದ್ಧ ಗಂಭೀರ ಆರೋಪ-ದೂರು ದಾಖಲು
ಭಾರತೀಯ ಚಿತ್ರರಂಗವನ್ನು ಆಗಾಗ ಕಾಮದ ಪುರಾಣಗಳು ಆವರಿಸಿಕೊಳ್ಳುತ್ತಾವೆ. ಕಾಮ ಸಂಬಂಧಿ ಹಗರಣಗಳು ಇಡೀ ಚಿತ್ರ ಉದ್ಯಮವನ್ನು ಬೆಚ್ಚಿ ಬೀಳಿಸುತ್ತವೆ. ಅದರಲ್ಲಿಯೂ ಮಲಯಾಳಂ ಚಿತ್ರರಂಗ ಕಾಮಾಂಧರಿಂದ ತುಂಬಿ ತುಳುಕುತ್ತಿದೆ. ಇದಕ್ಕೆ 2024ರಲ್ಲಿ ಬಿಡುಗಡೆಯಾದ ಹೇಮಾ ಆಯೋಗದ ವರದಿಯೇ ಕೈಗನ್ನಡಿ.
ಮಲಯಾಳಂ ಚಿತ್ರರಂಗದ ಹಿರಿಯ ನಟರಾದ ಮಣಿಯನ್‌ಪಿಳ್ಳೈ ರಾಜು.. ಸಿದ್ದಿಕ್.. ಖ್ಯಾತ ನಿರ್ದೇಶಕರಾದ ರಂಜಿತ್.. ವಿ.ಕೆ. ಪ್ರಕಾಶ್.. ಖ್ಯಾತ ನಟರಾದ ಜಯಸೂರ್ಯ ಮತ್ತು ಮುಖೇಶ್.. ಹೀಗೆ ಒಬ್ಬರಾ.. ಇಬ್ಬರಾ.. ಹಲವರ ಮೇಲೆ ಸಾಲು ಸಾಲು ನಟಿಯರು ಧೈರ್ಯವಾಗಿ ಮುಂದೆ ಬಂದು ದೂರನ್ನು ನೀಡಿದ್ದಾರೆ.

ಇನ್ನೂ 2017ರಲ್ಲಿ ನಡೆದ ಖ್ಯಾತ ನಟಿಯ ಅಪಹರಣ ಮತ್ತು ಮಾಡಲಾದ ದೌರ್ಜನ್ಯ ಮಲಯಾಳಂ ಚಿತ್ರರಂಗಕ್ಕೆ ಅಂಟಿಕೊಂಡ ಕಪ್ಪುಚುಕ್ಕೆ. ಈ ಪ್ರಕರಣದಲ್ಲಿ ನಟ ದಿಲೀಪ್ ನಿರ್ದೋಷಿಯೆಂದು ನ್ಯಾಯಾಲಯ ಹೇಳಿರಬಹುದು. ಆದರೆ.. ಈ ಪ್ರಕರಣವನ್ನು ಮಾತ್ರ ಯಾರು ಮರೆಯಲು ಸಾಧ್ಯ ಇಲ್ಲ.
ಇಂತಹ ಮಲಯಾಳಂ ಚಿತ್ರರಂಗ ಈಗ ಇನ್ನೊಮ್ಮೆ ಕಾ*ಮಕಾಂಡದಿಂದ ಸುದ್ದಿಯಾಗಿದೆ. ಈ ಬಾರಿ ಈ ಸುದ್ದಿಯ ಕೇಂದ್ರ ಬಿಂದು ಬೇರೆ ಯಾರು ಅಲ್ಲ ಬದಲಿಗೆ 'ಮಂಜುಮ್ಮೆಲ್ ಬಾಯ್ಸ್' ಅಂತಹ ಬ್ಲಾಕ್ ಬಸ್ಟರ್ ಚಿತ್ರವನ್ನು ನೀಡಿದ ನಿರ್ದೇಶಕ ಚಿದಂಬರಂ ಎನ್ನುವುದೇ ದುರಂತ.
ಹೌದು, ''ಮಂಜುಮ್ಮೆಲ್ ಬಾಯ್ಸ್'' ಚಿತ್ರದ ಮೂಲಕ ಇಡೀ ಜಗತ್ತು, ಮಲಯಾಳಂ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿದೆ. ಪ್ರಕರಣ ಕೂಡ ದಾಖಲಾಗಿದೆ. ಅದರನ್ವಯ ಈ ಪ್ರಕರಣ 2022ರಲ್ಲಿ ನಡೆದಿದ್ದು, ಕೊಚ್ಚಿಯ
ಎಲಂಕುಲಂನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಯುವತಿಯ ಫ್ಲಾಟ್‌ಗೆ ಚಿದಂಬರಂ ಒತ್ತಾಯಪೂರ್ವಕವಾಗಿ ಪ್ರವೇಶಿಸಿದ್ದಾರೆ. ಅನುಚಿತವಾಗಿ ವರ್ತಿಸಿ ಯುವತಿಗೆ ಲೈಂ*ಗಿಕ ಕಿರುಕುಳವನ್ನು ನೀಡಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಎರ್ನಾಕುಲಂ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 74 ಮತ್ತು 75ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ಆರಂಭಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಪ್ರಶ್ನಿಸುವ ಸಾಧ್ಯತೆಯಿದ್ದು ತನಿಖಾ ವರದಿ ಆಧರಿಸಿ ಬಂಧನ ಸೇರಿದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದ್ಹಾಗೇ ಚಿದಂಬರಂ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದು 2021ರಲ್ಲಿ. ''ಜಾನ್.ಇ.ಮ್ಯಾನ್'' ಇವರ ಮೊದಲ ಸಿನಿಮಾ. ಆ ನಂತರ ಇವರು ನಿರ್ದೇಶಿಸಿದ್ದೇ ''ಮಂಜುಮ್ಮೆಲ್ ಬಾಯ್ಸ್'' ಸಿನಿಮಾ. ಈ ಚಿತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ ಹೊರ ದೇಶಗಳಲ್ಲಿ ಕೂಡ ಖ್ಯಾತಿಯನ್ನು ಪಡೆದ ಚಿದಂಬರಂ ವಿರುದ್ದ 2024ರಲ್ಲಿ ಕೂಡ ಇಂತಹದ್ದೇ ಒಂದು ಆರೋಪ ಕೇಳಿ ಬಂದಿತ್ತು. ಆಗ ಇವರ ಮೊದಲ ಚಿತ್ರ ''ಜಾನ್.ಇ.ಮ್ಯಾನ್''ನಲ್ಲಿ ಅಭಿನಯಿಸಿದ್ದ ನಟಿಯೇ ಸಾಮಾಜಿಕ ಜಾಲತಾಣದ ಮೂಲಕ ಮಾನಸಿಕ ಮತ್ತು ದೈಹಿಕ ಹಿಂಸೆಯ ಆರೋಪವನ್ನು ಮಾಡಿದ್ದರು. ಆದರೆ ಆ ಸಮಯದಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ. ಆರೋಪ ಸೋಶಿಯಲ್ ಮೀಡಿಯಾಗೆ ಸೀಮಿತವಾಗಿತ್ತು ಅಷ್ಟೇ.
ಇನ್ನುಳಿದಂತೆ ಚಿದಂಬರಂ ನಿರ್ದೇಶಕರಾಗುವುದಕ್ಕೂ ಮುನ್ನ ಜಯರಾಜ್, ರಾಜೀವ್ ರವಿ, ಹಾಗೂ ಕೆ. ಯು. ಮೋಹನನ್ ಅವರೊಂದಿಗೆ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ''ಬಾಲನ್'' ಎಂಬ ಚಿತ್ರವನ್ನು ಇವರು ನಿರ್ದೇಶಿಸುತ್ತಿದ್ದಾರೆ. ಪ್ರಸ್ತುತ ಯುವತಿ ಆರೋಪ ಮಾಡಿರುವ ಹಿನ್ನೆಲೆ ಪ್ರಕರಣದ ದೂರು ದಾಖಲಾಗಿದ್ದು ತನಿಖೆ ಮುಂದುವರಿಯುತ್ತಿದೆ, ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ. ಈ ಪ್ರಕರಣಕ್ಕೆ ಚಿದಂಬರಂ ಪ್ರತಿಕ್ರಿಯೆಯನ್ನೂ ನೀಡಬೇಕಿದೆ.


Click it and Unblock the Notifications











