5ನೇ ಮದುವೆ, ಅಶ್ಲೀಲ ಮಾತು, ಮಾನಸಿಕ ಕಿರುಕುಳ ; ಕಣ್ಣೀರು ಹಾಕುತ್ತಾ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡ ನಟಿ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸಾಮಾಜಿಕ ಜಾಲತಾಣ ಎಲ್ಲರನ್ನು ಆವರಿಸಿಕೊಂಡಿದೆ. ಇನ್ನೂ.. ಕಳೆದ ಎರಡು ವರ್ಷಗಳಿಂದ ಎಲ್ಲೆಡೆ ಯೂಟ್ಯೂಬ್ ಹಾವಳಿ ಇಡುತ್ತಿದೆ. ಅಬ್ಬರಿಸುತ್ತಿದೆ. ಹಲವರು ಈ ಯೂಟ್ಯೂಬ್ ಮೂಲಕ ಗೆದ್ದಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ. ಶ್ರಮ ಹಾಕಿದರೆ ಮಾತ್ರ ಯಶಸ್ಸು ಸಾಧ್ಯ ಎನ್ನುವುದನ್ನು ಕೂಡ ಸಾಬೀತು ಮಾಡಿದ್ದಾರೆ.
ಆದರೆ ಇನ್ನೂ ಕೆಲವರು ಈ ಯೂಟ್ಯೂಬ್‌ನ್ನೇ ಬ್ಲಾಕ್‌ಮೇಲ್ ಮಾಡಲು ಬಂಡವಾಳವನ್ನಾಗಿ ಮಾಡಿಕೊಂಡಿದ್ಧಾರೆ. ಲೈಕ್.. ಸಬ್‌ಸ್ಕ್ರೈಬ್ ಮತ್ತು ಶೇರ್ ನ ಹುಚ್ಚಿನಲ್ಲಿ ಮಾಡಬಾರದ ಅನಾಚಾರವನ್ನು ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿನ ತಾರೆಯರ ವ್ಯೆಯಕ್ತಿಕ ಬದುಕು ಗುರಿಯಾಗಿಸಿಕೊಂಡು ಸುದ್ದಿಯ ಹೆಸರಿನಲ್ಲಿ ಇಲ್ಲ ಸಲ್ಲದ ಸುಳ್ಳು ಸುದ್ದಿಯನ್ನು ಹಂಚುತ್ತಿದ್ದಾರೆ.

ಇಷ್ಟೇ ಅಲ್ಲ ಅಸಹ್ಯ.. ಅಸಭ್ಯ ಮತ್ತು ಅಶ್ಲೀಲವಾದ ಪದಗಳನ್ನು ತಮ್ಮ ವಿಡಿಯೋದ ಥಂಬ್‌ನೇಲ್‌ನಲ್ಲಿ ಉಪಯೋಗ ಮಾಡುತ್ತಿದ್ದಾರೆ. ಈ ಮೂಲಕ ಸೈಬರ್ ದಾಳಿಯನ್ನು ಮಾಡುತ್ತಿದ್ದಾರೆ. ಮಾನಸಿಕ ಕಿರುಕುಳವನ್ನು ಕೂಡ ನೀಡುತ್ತಿದ್ದಾರೆ. ಸದ್ಯ ಇಂತಹದ್ದೇ ಕಿರುಕುಳವನ್ನು ತಾಳಲಾರದೇ ರೇಖಾ ರತೀಶ್ ಕಣ್ಣೀರು ಹಾಕಿದ್ದಾರೆ. ನನ್ನ ಪ್ರಾಣಕ್ಕ ಏನಾದರೂ ಆದರೆ ಅದಕ್ಕೆ ಯೂಟ್ಯೂಬರ್ ಗಳೇ ಕಾರಣ ಎಂದು ಬಿಕ್ಕಿದ್ದಾರೆ.
ಹೌದು, ರೇಖಾ ರತೀಶ್.. ಮಲಯಾಳಂ ಕಿರುತೆರೆಯಲ್ಲಿ ಖ್ಯಾತ ಹೆಸರು. 16ರ ಹರೆಯದಲ್ಲಿಯೇ ''ನಿರಕ್ಕೂಟ್ಟುಕಳ್'' ಎಂಬ ಧಾರಾವಾಹಿಯ ಮೂಲಕ ವೃತ್ತಿ ಬದುಕನ್ನು ಶುರು ಮಾಡಿದ ರೇಖಾ ''ಪರಸ್ಪರಂ'' ಧಾರಾವಾಹಿ ಮೂಲಕ ಇಡೀ ಕೇರಳದೆಲ್ಲೆಡೆ ಮನೆ ಮಾತಾದರು. ಇಂದು ಕೂಡ ಹಲವರು ಇವರನ್ನು ''ಪರಸ್ಪರಂ''ನ ಪದ್ಮಾವತಿ ಎಂದೇ ಕರೆಯುತ್ತಾರೆ.
''ಮಂಜುಳಾ ವಿರಿಂಜ ಪೂವು'' .. ''ಸಸ್ನೇಹಂ'' .. ''ಪೂಕ್ಕಲಂ ವರವಾಯಿ'' .. ಇವರ ಕೆಲ ಜನಪ್ರಿಯ ಧಾರಾವಾಹಿಗಳು. ಕೇವಲ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿ ಕೂಡ ಮಿಂಚಿರುವ ರೇಖಾ ರತೀಶ್, ''ಪಲ್ಲವೂರು ದೇವನಾರಾಯಣನ್'' .. ''ಮಾಂಪಜಕ್ಕಲಂ'' ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ಇಂಥಾ ರೇಖಾ ರತೀಶ್ ವ್ಯೆಯಕ್ತಿಕ ಜೀವನದಲ್ಲಿ ತುಂಬಾನೇ ನೊಂದು ಬೆಂದಿದ್ದಾರೆ. ಆದರೆ, ಇವರ ಕಣ್ಣೀರು ಕೇರಳದ ಕೆಲ ಯುಟ್ಯೂಬರ್ ಗಳಿಗೆ ಮಾರಾಟದ ಸರಕವಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಕೆಲ ಯೂಟ್ಯೂಬರ್ ಗಳು ರೇಖಾ ರತೀಶ್ 5ನೇ ಮದುವೆಯಾಗುತ್ತಿದ್ದಾರೆ ಎಂದು ಬೇಕಾಬಿಟ್ಟಿ ಸುದ್ದಿಯನ್ನು ಮಾಡಿದ್ದಾರೆ. ಮನಬಂದಂತೆ ಥಂಬ್ ನೇಲ್ ಗಳನ್ನು ಹಾಕಿದ್ದಾರೆ. ಅಶ್ಲೀಲ ಶೀರ್ಷಿಕೆಯನ್ನು ಹಾಕಿ ತಮ್ಮ ವಿಕೃತಿಯ ಪ್ರದರ್ಶನ ಮಾಡಿದ್ದಾರೆ.

ಯೂಟ್ಯೂಬರ್ ಗಳು ನೀಡುತ್ತಿರುವ ಈ ಮಾನಸಿಕ ಕಿರುಕುಳ ಸಹಿಸಲು ಸಾಧ್ಯವಾಗದೇ ರೇಖಾ ರತೀಶ್ ಕಣ್ಣೀರು ಹಾಕಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನನ್ನ ಪ್ರಾಣಕ್ಕೇನಾದರೂ ಆದರೆ ಅದಕ್ಕೆ ಯುಟ್ಯೂಬರ್ ಗಳೇ ಕಾರಣ ಎಂದು ಗಳಗಳನೆ ಅತ್ತಿದ್ದಾರೆ.
ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ರೇಖಾ ರತೀಶ್, ಪಿಣರಾಯಿ ವಿಜಯನ್ ಸರ್ ಕಳೆದ 8-9ತಿಂಗಳಿಂದ ನನಗೆ ಕೆಲಸ ಇಲ್ಲದೇ ನಾನು ನನ್ನ ಮನೆಯಲ್ಲಿಯೇ ಇದ್ದೇನೆ, ಆದರೆ ಕೆಲ ಯೂಟ್ಯೂಬರ್ ಗಳು ನೆಮ್ಮದಿಯಿಂದ ಇರಲು ನನ್ನನ್ನೂ ಬಿಡುತ್ತಿಲ್ಲ ಎಂದಿದ್ದಾರೆ.
ನನ್ನ ಬಗ್ಗೆ ತೀರಾ ಅಶ್ಲೀಲ ಶೀರ್ಷಿಕೆಗಳನ್ನು ನೀಡಿ, ಸತ್ಯಕ್ಕೆ ದೂರವಾದ ವಿಚಾರವನ್ನು ಇವರೆಲ್ಲ ಪ್ರಸಾರ ಮಾಡ್ತಿದ್ದಾರೆ ಎಂದು ಹೇಳಿರುವ ರೇಖಾ ಈ ಮೂಲಕ ನನ್ನ ಮೇಲೆ ಇವರೆಲ್ಲ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಇನ್ನೂ ನನ್ನಿಂದ ಇದೆಲ್ಲ ಸಹಿಸಲು ಸಾಧ್ಯ ಇಲ್ಲ ಸರ್ ಎಂದಿದ್ದಾರೆ.
ಮುಂದುವರೆದು ಈ ಕುರಿತು ಮಾತನಾಡಿರುವ ರೇಖಾ ರತೀಶ್, ಇತ್ತೀಚೆನ ದಿನಗಳಲ್ಲಿ ನಮ್ಮ ಕೇರಳದಲ್ಲಿ ಸಾಕಷ್ಟು ಅಮೂಲ್ಯ ಜೀವಗಳು ಕಣ್ಮರೆಯಾಗುತ್ತಿವೆ. ನಾನು ನನ್ನ ಮಗನಿಗಾಗಿ ಬದುಕಲು ತುಂಬ ಕಷ್ಟ ಪಡುತ್ತಿದ್ದೇನೆ, ಆದರೆ ಈ ಯೂಟ್ಯೂಬರ್‌ಗಳಿಂದ ನನಗೆ ಬದುಕುವ ಶಕ್ತಿಯೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ. ಮಾನಸಿಕ ಒತ್ತಡದಿಂದಾಗಿ ನನಗೆ ಜೀವಿಸಲು ಸಾಧ್ಯವಾಗುತ್ತಿಲ್ಲ ಸರ್,ನನಗೆ ಏನಾದರೂ ಆದರೆ,ಈ ಯೂಟ್ಯೂಬರ್‌ಗಳೇ ಕಾರಣ ಹೀಗಾಗಿಯೇ ನಾನು ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಕಿರುಕುಳ ಇಲ್ಲಿಗೆ ಕೊನೆಯಾಗಬೇಕು ಎಂದು ಮನವಿ ಮಾಡಿದ್ದಾರೆ.

ಇದು ಕೇವಲ ನನ್ನ ಕಥೆ ಮಾತ್ರ ಅಲ್ಲ ನನ್ನಂತೆಯೇ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿರುವ ಹಲವರಿಗೆ ಈ ರೀತಿಯ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿರುವ ರೇಖಾ ರತೀಶ್, ದಯವಿಟ್ಟು ಈ ಯೂಟ್ಯೂಬರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿಯನ್ನು ಮಾಡಿದ್ದಾರೆ. ನನ್ನಂತೆಯೇ ನನ್ನ ಸಹೋದರ ಮತ್ತು ಸಹೋದರಿಯರು ಈ ರೀತಿಯ ಸೈಬರ್ ದಾಳಿಗೆ ಬಲಿಯಾಗಬಾರದು, ಇದೆಲ್ಲವನ್ನೂ ತಡೆಯಲು ಕ್ರಮ ಕೈಗೊಂಡು ನಮ್ಮೆಲ್ಲರನ್ನು ಕಾಪಾಡಿ ಎಂದು ಕೂಡ ಹೇಳಿದ್ದಾರೆ.
ಅಂದ್ಹಾಗೇ ರೇಖಾ ರತೀಶ್ ಕೆಲ ದಿನಗಳ ಹಿಂದೆ ತಮಿಳು ಕಿರುತೆರೆ ನಟ ಮತ್ತು ಆಪ್ತ ಸ್ನೇಹಿತ ಈಶ್ವರ್ ರಘುನಾಥ್ ಅವರ ಜೊತೆ ಕೆಲ ಫೋಟೊ ಮತ್ತು ವಿಡಿಯೋ ಹಂಚಿಕೊಂಡಿದ್ದರು. ಇಲ್ಲಿಂದ ಇವರ 5ನೇ ಮದುವೆಯ ಕುರಿತು ಚರ್ಚೆ ಶುರುವಾಗಿತ್ತು.ಕೆಲವು ಯೂಟ್ಯೂಬರ್‌ಗಳು ರೇಖಾ ಅವರ ವೈಯಕ್ತಿಕ ಜೀವನದ ತೀರಾ ಖಾಸಗಿ ವಿಷಯಗಳನ್ನು ಕೆದಕಿ ವಿಡಂಬನೆಯ ಸ್ಪರ್ಶ ನೀಡಿ ವಿಇಡಯೋಗಳನ್ನು ಹಂಚಿಕೊಂಡಿದ್ದರು.
ಈ ಹಿನ್ನೆಲೆ ಸದ್ಯ ನೊಂದು ಹೋಗಿರುವ ರೇಖಾ ಈ ಭಾವನಾತ್ಮಕವಾದ ವಿಡಿಯೋ ಹಂಚಿಕೊಂಡಿದ್ದಾರೆ. ರೇಖಾ ಅವರ ಈ ವಿಡಿಯೋಗೆ ಖುದ್ದು ಈಶ್ವರ್ ರಘುನಾಥ್ ಸೇರಿ ಮಲಯಾಳಂನ ಹಲವು ತಾರೆಯರು ಪ್ರತಿಕ್ರಿಯೆ ನೀಡಿದ್ದು ನೀವು ಈ ಬಡ ಯೂಟ್ಯೂಬರ್‌ಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದೀರಾ, ನಿಮಗೂ ಮತ್ತು ನಿಮ್ಮ ಮಗ ಆಯಾನ್‌ಗೂ ಉಜ್ವಲ ಭವಿಷ್ಯವಿದೆ ಎಂದು ಹೇಳಿದ್ದಾರೆ. ದೇವರು ಸದಾ ನಿಮ್ಮೊಂದಿಗಿದ್ದಾನೆ ಮತ್ತು ಸದಾ ಇರುತ್ತಾನೆ ಎಂದು ರೇಖಾ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸೆಲೆಬ್ರೆಟಿಗಳ ಖಾಸಗಿತನದ ಕುರಿತು ಚರ್ಚೆಗೆ ನಾಂದಿಯನ್ನು ಹಾಡಿದೆ.
ಇನ್ನುಳಿದಂತೆ 18ರ ಹರೆಯದಲ್ಲಿಯೇ ರೇಖಾ ರತೀಶ್, ಯೂಸುಫ್ ಅವರನ್ನು ಮದುವೆಯಾಗಿದ್ದರು. ಈ ಸಂಬಂಧ ಕೇವಲ ಕೆಲವೇ ದಿನಗಳಲ್ಲಿ ಅಂತ್ಯವಾಗಿತ್ತು. ಆ ನಂತರ ನಿರ್ಮಲ್ ಕುಮಾರ್ ಅವರ ಜೊತೆ ರೇಖಾ ಸಪ್ತಪದಿ ತುಳಿದಿದ್ದರು. ದುರಂತ ಅಂದರೆ ಈ ಸಂಬಂಧ ಕೂಡ ಹೆಚ್ಚು ದಿನ ಉಳಿಯಲಿಲ್ಲ. ನಿರ್ಮಲ್ ಕುಮಾರ್ ಗೆ ವಿಚ್ಚೇದನ ನೀಡಿದ ನಂತರ ನಟ ಕಮಲಾನಂದನ್ ಅವರ ಕೈಯನ್ನು ರೇಖಾ ಹಿಡಿದಿದ್ದರು. ಕೆಲವು ವರ್ಷಗಳ ನಂತರ ಇವರ ಈ ದಾಂಪತ್ಯದಲ್ಲೂ ಕೂಡ ಬಿರುಕು ಮೂಡಿತು. ಆ ನಂತರ ಬಂದವರು ಅಭಿಲಾಶ್. ಇವರ ಪ್ರೀತಿಯ ಸಂಕೇತವಾಗಿ ಇವರಿಗೆ ಅಯಾನ್ ಎಂಬ ಮಗ ಇದ್ದು, ಕೆಲ ವರ್ಷ ಜೊತೆಯಲ್ಲಿದ್ದ ಈ ಜೋಡಿ ಆ ನಂತರ ದೂರವಾಯ್ತು. ಸದ್ಯ ರೇಖಾ ಅವರ ಹೆಸರು ಆಗಲೇ ಹೇಳಿದಂತೆ ಈಶ್ವರ್ ರಘುನಾಥ್ ಅವರ ಜೊತೆ ತಳುಕು ಹಾಕಿಕೊಂಡಿದೆ.


Click it and Unblock the Notifications











