ನಟಿಯರು ತಂಗುವ ಹೋಟೆಲ್ ರೂಮ್‌ಗಳು ಹೇಗಿರುತ್ತೆ? ಮೇಘನಾ ರಾಜ್ ಮಾಡಿರೋ ಈ ವಿಡಿಯೋ ನೋಡಿ
ಕನ್ನಡ ಹಾಗೂ ಮಲಯಾಳಂ ಸಿನಿಮಾ ನಟಿ ಮೇಘನಾ ರಾಜ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ಮಲಯಾಳಂ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಅದರಲ್ಲೂ ಚಿರು ಅಗಲಿದ ಬಳಿಕ ಸಿನಿಮಾಗೆ ಬ್ರೇಕ್ ಕೊಟ್ಟಿದ್ದರು. ಇತ್ತೀಚೆಗೆ ಮತ್ತೆ ನಟಿಸುವುದಕ್ಕೆ ಶುರು ಮಾಡಿದ್ದು, ಕನ್ನಡ ಸಿನಿಮಾಗಳಲ್ಲಿ ಈಗಾಗಲೇ ನಟಿಸುತ್ತಿದ್ದಾರೆ.
ಮೇಘನಾ ರಾಜ್ ಕೇವಲ ಕನ್ನಡ ಅಷ್ಟೇ ಮಲಯಾಳಂ ಚಿತ್ರರಂಗದಲ್ಲೂ ಬಹುಬೇಡಿಕೆಯ ನಟಿಯಾಗಿದ್ದರು. ವಿವಾಹದ ಬಳಿಕ ಸಿನಿಮಾ ಕಡಿಮೆ ಮಾಡಿದ್ದರಿಂದ ಮಲಯಾಳಂ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಐದು ವರ್ಷಗಳ ಬಳಿಕ ಮತ್ತೆ ಮಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಈ ಖುಷಿಯಲ್ಲಿ ಮೇಘನಾ ರಾಜ್ ತಮ್ಮ ಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

ಇದರಲ್ಲಿ ಬೆಂಗಳೂರಿನಿಂದ ಹೊರಡುವ ಕ್ಷಣದಿಂದ ಹಿಡಿದು ಮೊದಲ ದಿನದ ಶೂಟಿಂಗ್‌ವರೆಗೂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ನಾಯಕಿಯರು ಶೂಟಿಂಗ್‌ಗೆ ಅಂತ ಬೇರೆ ಬೇರೆ ರಾಜ್ಯಗಳಿಗೆ ಹೋದಾಗ ಸಿನಿಮಾ ತಂಡದವರು ಅವರು ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಹೇಗೆ ಮಾಡಿರುತ್ತಾರೆ? ಅವರು ಉಳಿದು ಕೊಳ್ಳುವ ಹೋಟೆಲ್ ರೂಮ್‌ಗಳಲ್ಲಿ ಏನೆಲ್ಲ ಸೌಲಭ್ಯಗಳು ಇರುತ್ತವೆ? ಅನ್ನುವ ಕುತೂಹಲ ಇದ್ದೇ ಇರುತ್ತೆ. ನಟಿ ಮೇಘನಾ ರಾಜ್ ಮಲಯಾಳಂ ಚಿತ್ರಕ್ಕಾಗಿ ಅವರು ಉಳಿದುಕೊಂಡಿದ್ದ ಹೋಟೆಲ್ ರೂಮ್ ಹೇಗಿರುತ್ತೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ? ಹಾಗಿದ್ರೆ, ನಾಯಕಿಯರಿಗೆ ಏನೆಲ್ಲಾ ಸೌಲಭ್ಯ ಕೊಡುತ್ತಾರೆ? 5 ವರ್ಷಗಳ ಬಳಿಕ ನಟಿಸುತ್ತಿರುವ ಮಲಯಾಳಂ ಸಿನಿಮಾ ಯಾವುದು? ತಿಳಿಯುವುದಕ್ಕೆ ಮುಂದೆ ಓದಿ.
ಮೇಘನಾ ರಾಜ್ ಇತ್ತೀಚೆಗೆ ಕೊಚ್ಚಿ, ತಿರುವನಂತಪುರಂ ಅಂತ ಸುತ್ತಾಡುತ್ತಿದ್ದಾರೆ. ಯಾಕಂದ್ರೆ, ಹೊಸ ವರ್ಷದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಮತ್ತೆ ಮಲಯಾಳಂ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟು, ಆ ಸಿನಿಮಾದಲ್ಲಿ ಈಗಾಗಲೇ ನಟಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಮೇಘನಾ ರಾಜ್ ಯೂಟ್ಯೂಬ್ ಚಾನೆಲ್‌ಗೆ ಜರ್ನಿ ಹೇಗಿರುತ್ತೆ? ಅನ್ನೋದನ್ನು ತಿಳಿಸುವುದಕ್ಕೆ ಒಂದು ವಿಡಿಯೋ ಕೂಡ ಮಾಡಿದ್ದಾರೆ. ಅದರಲ್ಲಿ ಏನೇನು ಹೇಳಿದ್ದಾರೆ? ಅನ್ನೋದನ್ನು ನೋಡೋಣ.

ನಟಿ ಮೇಘನಾ ರಾಜ್ ಕೇರಳದ ತಿರುವನಂತಪುರಂಗೆ ಬಂದರೆ ಜಗತ್ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. "ನಾನು ತಿರುವನಂತಪುರಂಗೆ ಬಂದು ತುಂಬಾನೇ ವರ್ಷ ಆಗಿತ್ತು. ತಿರುವನಂತಪುರಂನಲ್ಲಿ ನಾನು ತುಂಬಾ ಇಷ್ಟ ಪಡುವ ಜಾಗ ಅನಂತಸ್ವಾಮಿ ದೇವಸ್ಥಾನ. ಈ ಬಾರಿ ಹೋಗುವುದಕ್ಕೆ ಆಗುತ್ತಾ ಅಂತ ಗೊತ್ತಿಲ್ಲ. ನನ್ನ ಶೆಡ್ಯೂಲ್‌ನಲ್ಲಿ ಅದಕ್ಕೆ ಅವಕಾಶ ನೀಡುತ್ತಾ? ಗೊತ್ತಿಲ್ಲ. ನಾನು ಕೊಚ್ಚಿಗೆ ಬೇರೆ ಹೋಗಬೇಕು. ಟೈಮ್ ಸಿಗ್ತು ಅಂದರೆ ಖಂಡಿತಾ ನಾನು ದೇವಸ್ಥಾನಕ್ಕೆ ಭೇಟಿ ಕೊಡುತ್ತೇನೆ. ನನಗೆ ಬಹಳ ಇಷ್ಟ ಆದಂತಹ ಜಾಗ ಅದು." ಎಂದಿದ್ದಾರೆ.
ಟ್ರಾವೆಲ್ ಮಾಡುವಾಗಲೇ ಕೇರಳದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಅವರು ಉಳಿದಕೊಂಡಿದ್ದ ಹೋಟೆಲ್‌ಗಳ ಬಗ್ಗೆನೂ ಮಾಹಿತಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಹೀರೋಯಿನ್‌ಗಳು ಉಳಿದುಕೊಳ್ಳುವ ಹೋಟೇಲ್ ರೂಮ್‌ಗಳಲ್ಲಿ ನಿರ್ಮಾಣ ಸಂಸ್ಥೆ ಏನೆಲ್ಲ ವ್ಯವಸ್ಥೆಯನ್ನು ಕಲ್ಪಿಸುತ್ತೆ ಅನ್ನೋದನ್ನು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಅವರೇ ಹೇಳುವಂತೆ. "ಗೋಕುಲಂ ಗ್ರ್ಯಾಂಡ್‌ನಲ್ಲಿರುವ ನನ್ನ ರೂಮ್‌ಗೆ ಸ್ವಾಗತ. ಸಣ್ಣದ ಸ್ಡಡಿ ಏರಿಯಾ ಇದೆ. ಲಿವಿಂಗ್ ರೂಮ್ ಇದೆ. ಟಿವಿ ಇದೆ. ಬೆಡ್ ರೂಮ್ ಇದೆ. ಅಲ್ಲೇ ಸೋಫಾನೂ ಇದೆ. ಬ್ಯೂಟಿಫುಲ್ ಬಾತ್‌ರೂಮ್ ಇದೆ. ವಾರ್ಡ್ ರೋಬ್ ಇದೆ. ತುಂಬಾನೇ ಚೆನ್ನಾಗಿದೆ" ಎಂದು ಖುಷಿ ಪಟ್ಟಿದ್ದಾರೆ.
ಹಾಗೇ ಮೇಘನಾ ರಾಜ್ ಐದು ವರ್ಷಗಳ ಬಳಿಕ ನಟಿಸುತ್ತಿರುವ ಆ ಮಲಯಾಳಂ ಸಿನಿಮಾ ಯಾವುದು ಅನ್ನೋದನ್ನು ತಿಳಿಸಿದ್ದಾರೆ. ಅಂದ್ಹಾಗೆ ಆ ಸಿನಿಮಾದ ಹೆಸರು 'ಒಟ್ಟಕ್ಕೊಂಬನ್'. ಈ ಸಿನಿಮಾದಲ್ಲಿ ಕೇರಳದ ತ್ರಿಸುರ್ ಎಂಪಿ ಸುರೇಶ್ ಗೋಪಿ, ಇಂದ್ರಜಿತ್ ಅಂತ ನಟರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. "ಇದು ನನ್ನ ಮಲಯಾಳಂ ಸಿನಿಮಾ. ಸುಮಾರು 5 ವರ್ಷ ಆದ್ಮೇಲೆ ನಾನು ಮಲಯಾಳಂ ಸಿನಿಮಾವನ್ನು ಮಾಡುತ್ತಿದ್ದೇನೆ. ಸಿನಿಮಾ ಹೆಸರು ಬಂದು ಒಟ್ಟಕ್ಕೊಂಬನ್ ಅಂತ. ಇದರಲ್ಲಿ ನನ್ನ ಜೊತೆ ಸುರೇಶ್ ಗೋಪಿ ಸರ್ ಆಕ್ಟ್ ಮಾಡುತ್ತಿದ್ದಾರೆ. ಇಂದ್ರಜಿತ್ ಇನ್ನಷ್ಟು ಕಲಾವಿದರು ಇದ್ದಾರೆ. ಎಲ್ಲರೂ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ." ಎಂದು ಮೇಘನಾ ಖುಷಿ ಪಟ್ಟಿದ್ದಾರೆ.


Click it and Unblock the Notifications











