ಕನ್ನಡ ಸಿನಿರಸಿಕರಿಗೆ ಗುಡ್ ನ್ಯೂಸ್; 'ದೃಶ್ಯಂ- 3' ಜಾರ್ಜ್ ಕುಟ್ಟಿ ಹೊಸ ಆಟ ನೋಡೋಕೆ ನೀವು ರೆಡಿನಾ?
ಮೋಹನ್ ಲಾಲ್ ನಟನೆಯ 'ದೃಶ್ಯಂ- 3' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಟೀಸರ್, ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಈಗಾಗಲೇ 2 ಭಾಗಗಳಲ್ಲಿ ಜಾರ್ಜ್ ಕುಟ್ಟಿ ಹೋರಾಟವನ್ನು ನೋಡಿದವರಿಗೆ ಮುಂದೇನು? ಎನ್ನುವ ಪ್ರಶ್ನೆ ಕಾಡುತ್ತಿದೆ. ಅದಕ್ಕೆಲ್ಲಾ ಉತ್ತರ ಶೀಘ್ರದಲ್ಲೇ ಸಿಗಲಿದೆ.
ಜಿತು ಜೋಸೆಫ್ ನಿರ್ದೇಶನದ ಈ ಕ್ರೈಂ ಥ್ರಿಲ್ಲರ್ ಸರಣಿ ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಮೇ 21ರಂದು ಸಿನಿಮಾ ಬಿಡುಗಡೆ ಆಗಲಿದೆ. ಒಂದು ದಿನ ಮುನ್ನ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. 'ದೃಶ್ಯಂ' ಮೊದಲೆರಡು ಚಿತ್ರಗಳು ಕನ್ನಡ ಸೇರಿ ವಿವಿಧ ಭಾಷೆಗಳಿಗೆ ರೀಮೆಕ್ ಆಗಿತ್ತು. 3ನೇ ಭಾಗ ಯಾವಾಗ ಬರುತ್ತದೆ ಎನ್ನುವುದು ಗೊತ್ತಿಲ್ಲ. ಆದರೆ ಜಿತು ಜೋಸೆಫ್ ಒಂದು ಸಿಹಿಸುದ್ದಿ ಕೊಟ್ಟಿದ್ದಾರೆ.

ಮಲಯಾಳಂ ಜೊತೆಗೆ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಿಗೆ 'ದೃಶ್ಯಂ- 3' ಸಿನಿಮಾ ಡಬ್ ಮಾಡಿರುವುದಾಗಿ ಹೇಳಿದ್ದಾರೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಮೋಹನ್ ಲಾಲ್ ಸಿನಿಮಾ ತೆರೆಗೆ ಬರಲಿದೆ. ಹಾಗಾಗಿ ಕನ್ನಡ ಸಿನಿರಸಿಕರು ನಮ್ಮ ಭಾಷೆಯಲ್ಲೇ ಸಿನಿಮಾ ನೋಡಲು ಬಹಳ ದಿನ ಕಾಯಬೇಕಿಲ್ಲ. ಭಾಷೆಯ ಗಡಿಮೀರಿ ಎಲ್ಲಾ ಭಾಷಿಕರನ್ನು 'ದೃಶ್ಯಂ' ಸಿನಿಮಾ ಕಥೆ ತಲುಪಿದೆ. ಭಾಷೆ ಅರ್ಥವಾಗದಿದ್ದರೂ ಕೆಲವರು 3ನೇ ಭಾಗ ನೋಡಲು ಕಾಯುತ್ತಿದ್ದರು. ಅಂತಹವರಿಗೆ ಇದು ಸಮಾಧಾನ ತಂದಿದೆ.
4 ಭಾಷೆಗಳಲ್ಲಿ ಸಿನಿಮಾ ಡಬ್ ಆಗಿ ಬರುವುದರಿಂದ ಮುಂದೆ ರೀಮೆಕ್ ಆಗುವುದು ಅನುಮಾನ. ಕನ್ನಡದಲ್ಲಿ 'ದೃಶ್ಯಂ'-2 ಸಿನಿಮಾ ಗೆಲ್ಲಲಿಲ್ಲ. ಹಾಗಾಗಿ 3ನೇ ಭಾಗ ರೀಮೆಕ್ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿಂದೆ ಪಿ. ವಾಸು ಕೂಡ ಈ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. ಯಾರಾದರೂ ನಿರ್ಮಾಪಕರು ರೀಮೆಕ್ ಮಾಡುವಂತೆ ಮುಂದೆ ಬಂದರೆ ನೋಡೋಣ ಎಂದಿದ್ದರು. ತೆಲುಗು, ತಮಿಳಿನಲ್ಲಿ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಹಿಂದಿಯಲ್ಲಿ ರೀಮೆಕ್ ಮಾಡುವ ಪ್ರಯತ್ನಗಳು ನಡೀತಿದೆ.
ಆತ್ಮರಕ್ಷಣೆಗಾಗಿ ಪತ್ನಿ ಹಾಗೂ ಮಗಳು ಮಾಡಿದ ಕೊಲೆ ಪ್ರಕರಣವನ್ನು ಮುಚ್ಚಿಟ್ಟು ಜಾರ್ಜ್‌ಕುಟ್ಟಿ ಹೋರಾಟ ನಡೆಸುತ್ತಿದ್ದಾನೆ. ತಮ್ಮ ಕುಟುಂಬದ ರಕ್ಷಣೆಗಾಗಿ ಯಾವುದೇ ಹಂತಕ್ಕೆ ಹೋಗಲು ಅವನು ಸಿದ್ಧನಾಗಿದ್ದಾನೆ. ಇಲ್ಲಿಯವರೆಗೆ ಕಥೆಯಲ್ಲಿ ತಾನಾಗಲಿ, ತನ್ನ ಕುಟುಂಬದವರಾಗಿ ಸಿಕ್ಕಿ ಬೀಳಲು ಬಿಟ್ಟಿಲ್ಲ. ಪೊಲೀಸರು ತನಿಖೆಯ ದಿಕ್ಕನ್ನೇ ಬದಲಿಸಿ ತನ್ನ ಚಾಕಚಕ್ಯತೆಯಿಂದ ತಪ್ಪಿಸಿಕೊಂಡಿದ್ದಾನೆ.
ಜಾರ್ಜ್ ಕುಟ್ಟಿ (ಮೋಹನ್ ಲಾಲ್) ಈಗ ಅಪರಾಧಿ ಪ್ರಜ್ಞೆಯಲ್ಲಿ ಮುಳುಗಿರುವಂತೆ ಭಾಸವಾಗುತ್ತಿದೆ. ಮುಚ್ಚಿದ ಪ್ರಕರಣಕ್ಕೆ ಈಗ ಮತ್ತೆ ಜೀವ ಬಂದಿದೆ. ತನಿಖಾಧಿಕಾರಿಗಳ ಜೊತೆಗೆ ಮಾಧ್ಯಮದವರು ಈ ಬಾರಿ ಪ್ರಕರಣದ ಸತ್ಯ ಭೇದಿಸಲು ಮುಂದಾಗಿದ್ದಾರೆ. ಮತ್ತೆ ಕುಟುಂಬಸ್ಥರಿಗೆ ಆತಂಕ ಶುರುವಾಗಿದೆ. ಹೀಗೇನ್ ಮಾಡ್ತಾನೆ ನಿಮ್ ಹೀರೊ? ಎನ್ನುವಂತೆ ಜಾರ್ಜ್ ಕುಟ್ಟಿ ಮುಂದೆ ಏನು ಮಾಡ್ತಾನೆ ಎನ್ನುವುದು ಕುತೂಹಲ ಮೂಡಿಸುವಂತಿದೆ.
ಇಷ್ಟು ದಿನ ಪೊಲೀಸರು ಹಾಗೂ ಸತ್ತ ಯುವಕನ ಪೋಷಕರು ಮಾತ್ರ ತನ್ನ ಬೆನ್ನಿಗೆ ಬಿದ್ದಿದ್ದಾರೆ ಎಂದು ಜಾರ್ಜ್ ಕುಟ್ಟಿ ಭಾವಿಸಿದ್ದ. ಆದರೆ ಬೇರೆ ಯಾರೋ ಆತನ ಹಿಂದೆ ಇದ್ದಾರೆ. ಅದು ಯಾರು ಎನ್ನುವುದನ್ನು ತೆರೆಮೇಲೆ ನೋಡಿ ಎಂದು ನಿರ್ದೇಶಕ ಜಿತು ಜೋಸೆಫ್ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಜಾರ್ಜ್ ಕುಟ್ಟಿ ಪತ್ನಿಯಾಗಿ ಮೀನಾ ಹಾಗೂ ಮಕ್ಕಳ ಪಾತ್ರಗಳಲ್ಲಿ ಅನ್ಸಿಬಾ ಹಸನ್ ಹಾಗೂ ಎಸ್ತರ್ ಅನಿಲ್ ಮುಂದುವರೆದಿದ್ದಾರೆ. ವಿದೇಶಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.


Click it and Unblock the Notifications