ಬಾಯ್ತಪ್ಪಿ, 'ದೃಶ್ಯಂ 2 'ಸಿನಿಮಾ ಕ್ಲೈಮ್ಯಾಕ್ಸ್ ಟ್ವಿಸ್ಟ್ ಹೇಳಿಬಿಟ್ಟ ಮೋಹನ್‌ಲಾಲ್
'ದೃಶ್ಯಂ' ಸಿನಿಮಾದ ಅಭೂತಪೂರ್ವ ಗೆಲುವಿನ ಬಳಿಕ ಇದೀಗ 'ದೃಶ್ಯಂ 2' ತೆರೆಗೆ ಬರಲು ತಯಾರಾಗಿದೆ. 'ದೃಶ್ಯಂ' ಸಿನಿಮಾ ಅದ್ಭುತ ಹಿಟ್ ಆಗಲು ಮುಖ್ಯ ಕಾರಣಗಳಲ್ಲೊಂದು, ಸಿನಿಮಾದ ಕೊನೆಯಲ್ಲಿನ ಆ ಅದ್ಭುತ ಟ್ವಿಸ್ಟ್.
ಮೃತದೇಹವನ್ನು ನಾಯಕ ಜಾರ್ಜ್ ಕುಟ್ಟಿ ಎಲ್ಲಿ ಬಚ್ಚಿಟ್ಟಿದ್ದಾನೆ ಎಂಬುದು ಸಿನಿಮಾದ ಬಹುಮುಖ್ಯ ಅಂಶವಾಗಿ ಮಾರ್ಪಟ್ಟು, ಸಿನಿಮಾಕ್ಕೆ ಬಹು ಅದ್ಭುತವಾದ ಕುತೂಹಲವನ್ನು ಒದಗಿಸಿತ್ತು. ಈ ಟ್ವಿಸ್ಟ್‌ಗಳೇ 'ಮರ್ಡರ್ ಮಿಸ್ಟರಿ' ಅಥವಾ ಥ್ರಿಲ್ಲರ್ ಸಿನಿಮಾವನ್ನು ಇನ್ನಷ್ಟು ಥ್ರಿಲ್ಲಿಂಗ್ ಆಗಿಸುವುದು.
ಎಂಟು ವರ್ಷದ ಹಿಂದೆ 'ದೃಶ್ಯಂ' ಸಿನಿಮಾ ಮಾಡಿದ್ದ ಅದೇ ತಂಡ ಈಗ 'ದೃಶ್ಯಂ2' ಸಿನಿಮಾ ಮಾಡಿದೆ. ಇನ್ನು ನಾಲ್ಕು ದಿನಗಳಲ್ಲಿ ಅಂದರೆ ಫೆಬ್ರವರಿ 19 ಕ್ಕೆ ಸಿನಿಮಾವು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ. ಆದರೆ ಈ ನಡುವೆ 'ದೃಶ್ಯಂ 2' ನ ನಾಯಕ ಮೋಹನ್‌ಲಾಲ್ ಕತೆಯ ಮುಖ್ಯ ಎಳೆಯನ್ನು ಬಿಟ್ಟುಕೊಟ್ಟಿದ್ದಾರೆ ಅದೂ ಬಾಯ್ತಪ್ಪಿ!

ಬಾಯ್ತಪ್ಪಿ ಸಿನಿಮಾದ ಕ್ಲೈಮ್ಯಾಕ್ಸ್ ಟ್ವಿಸ್ಟ್ ಹೇಳಿದ ಮೋಹನ್‌ಲಾಲ್
ಹೌದು, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಮೋಹನ್‌ಲಾಲ್ ಗೆ, 'ದೃಶ್ಯಂ 3' ಸಿನಿಮಾ ಬರುವ ಸಾಧ್ಯತೆ ಇದೆಯಾ? ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಮೋಹನ್‌ಲಾಲ್, 'ಜಾರ್ಜ್ ಕುಟ್ಟಿ (ದೃಶ್ಯಂ ನಾಯಕನ ಪಾತ್ರದ ಹೆಸರು) ಸದ್ಯ ಜೈಲಿನಲ್ಲಿದ್ದಾನೆ. ಅವನು ಜೈಲು ಒಡೆದುಕೊಂಡು ಹೊರಬರಬೇಕು ಅಷ್ಟೆ' ಎಂದಿದ್ದಾರೆ. ಆದರೆ ತಮ್ಮ ಮಾತನ್ನು 'ಕವರ್' ಮಾಡಿಕೊಳ್ಳುವ ಯತ್ನ ಮಾಡಿದ್ದಾರೆ ಆದರೆ ಸಾಧ್ಯವಾಗಿಲ್ಲ.

ಕೊಲೆ ತನಿಖೆಯಲ್ಲಿ ಸಿಕ್ಕಿಬಿದ್ದನೇ ಜಾರ್ಜ್ ಕುಟ್ಟಿ
ಮೋಹನ್‌ಲಾಲ್ ಮಾತಿನ ವಿಡಿಯೋ ಸಖತ್ ವೈರಲ್ ಆಗಿದ್ದು, ಅಲ್ಲಿಗೆ ಜಾರ್ಜ್ ಕುಟ್ಟಿ ತಾನು ಈ ಹಿಂದೆ ಮಾಡಿದ ಕೊಲೆಗೆ ಶಿಕ್ಷೆ ಅನುಭವಿಸಲಿದ್ದಾನೆಯೇ ಎಂಬ ಕುತೂಹಲ ಮನೆ ಮಾಡಿದೆ. ದೃಶ್ಯಂ 2 ನ ಟ್ರೇಲರ್‌ನಲ್ಲಿ ತೋರಿಸುವಂತೆ ದೃಶ್ಯಂ ನಲ್ಲಿ ಕೊಲೆಯಾದ ಆ ಯುವಕನ ಪೋಷಕರು ಈ ಸಿನಿಮಾದಲ್ಲಿಯೂ ಮುಂದುವರೆದಿದ್ದಾರೆ. ಅಲ್ಲದೆ, 'ಅವರು ಮತ್ತೆ ಬರಬಹುದು' ಎಂದು ಜಾರ್ಜ್ ಕುಟ್ಟಿ ತನ್ನ ಪತ್ನಿಗೆ ಹೇಳುವ ದೃಶ್ಯವೂ ಟ್ರೇಲರ್‌ನಲ್ಲಿದೆ.

ಕಾನೂನಿಗೆ ಶರಣಾದನೇ ಜಾರ್ಜ್ ಕುಟ್ಟಿ?
ಇದೀಗ ಮೋಹನ್‌ಲಾಲ್ ಸಂದರ್ಶನದಲ್ಲಿ ಹೇಳಿರುವಂತೆ ಜಾರ್ಜ್ ಕುಟ್ಟಿ ಜೈಲಿನಲ್ಲಿರುವುದಾದರೆ ಆ ಕೊಲೆ ಮಾಡಿದ್ದಕ್ಕೆ ಹಾಗೂ ಕೊಲೆ ವಿಷಯ ಮುಚ್ಚಿಟ್ಟದ್ದಕ್ಕೆ ಜಾರ್ಜ್ ಕುಟ್ಟಿಗೆ ಶಿಕ್ಷೆ ಆಗಿದೆ ಎಂದು ಊಹಿಸಬಹುದಾಗಿದೆ. ಅಥವಾ ತನ್ನ ಪತ್ನಿ ಹಾಗೂ ಮಗಳನ್ನು ಉಳಿಸಲು ಜಾರ್ಜ್ ಕುಟ್ಟಿಯೇ ಪೊಲೀಸರಿಗೆ ಶರಣಾಗಿರಬಹುದು ಎಂದು ಸಹ ವಾದಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೆಯುತ್ತಿವೆ.
Recommended Video

ಫೆಬ್ರವರಿ 19 ಕ್ಕೆ ಸಿನಿಮಾ ಬಿಡುಗಡೆ
ಮತ್ತೊಂದು ಗುಂಪು, ಮೋಹನ್‌ಲಾಲ್ ಉದ್ದೇಶಪೂರ್ವಕವಾಗಿಯೇ ಹೀಗೆ ಹೇಳಿರುವ ಸಾಧ್ಯತೆ ಇದೆ. ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿಸಲು ಹೀಗೆ ಹೇಳಿದ್ದಾರೆ ಎಂದೂ ಸಹ ವಾದಿಸಲಾಗುತ್ತಿದೆ. ಏನೇ ಆಗಲಿ ಸತ್ಯವೇನು ಎಂಬುದು ಫೆಬ್ರವರಿ 19 ರಂದು ಗೊತ್ತಾಗಲಿದೆ. ಅದೇ ದಿನ ಅಮೆಜಾನ್ ಪ್ರೈಂ ನಲ್ಲಿ ವಿಶ್ವದಾದ್ಯಂತ ದೃಶ್ಯಂ 2 ಬಿಡುಗಡೆ ಆಗುತ್ತಿದೆ.


Click it and Unblock the Notifications











