Mohanlal: ಅದೇನ್ ಕಥೆ ಹೇಳಿ ಮೋಹನ್ ಲಾಲ್‌ನ ಒಪ್ಪಿಸಿದ್ರು ಗುರೂ ನಂದಕಿಶೋರ್? 'ವೃಷಭ' ಶೂಟಿಂಗ್ ಶುರು
ಕಂಪ್ಲೀಟ್ ಆಕ್ಟರ್ ಮೋಹನ್ ಲಾಲ್ ನಟನೆಯ 'ವೃಷಭ' ಸಿನಿಮಾ ಚಿತ್ರೀಕರಣ ಸದ್ದಿಲ್ಲದೇ ಶುರುವಾಗಿದೆ. ಕನ್ನಡ ನಿರ್ದೇಶಕ ನಂದ ಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕೆಲ ದಿನಗಳಿಂದ ಇಂತಾದೊಂದು ಸಿನಿಮಾ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಸಿನಿಮಾ ಶೂಟಿಂಗ್ ಶುರುವಾಗಿದೆ.
'ವೃಷಭ' ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು ಬಹಳ ರೋಚಕವಾಗಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಭಾನುವಾರದಿಂದ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರದಲ್ಲಿ ಮೈ ಜುಂ ಎನಿಸುವಂತಹ ಆಕ್ಷನ್ ಮತ್ತು ರೋಚಕ ದೃಶ್ಯಗಳು ಇರಲಿದ್ದು, ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ. ಕನ್ನಡದ ರಾಗಿಣಿ ದ್ವಿವೇದಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಹಿಂದೆ 'ಕಾಂದಹಾರ್' ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ರಾಗಿಣಿ ಮಿಂಚಿದ್ದರು.

ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ನಂದಕಿಶೋರ್ 'ವೃಷಭ' ಚಿತ್ರವನ್ನು ಯಾವ ರೀತಿ ಕಟ್ಟಿಕೊಡುತ್ತಾರೆ ಎನ್ನುವ ನಿರೀಕ್ಷೆಯಿದೆ. ಚಿತ್ರೀಕರಣ ಆರಂಭಿಸಿರುವ ವಿಚಾರವನ್ನು ಮೋಹನ್ ಲಾಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ವೃಷಭ' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದ ನಿರೀಕ್ಷೆಯಲ್ಲಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಬಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ, ಎವಿಸ್ ಸ್ಟುಡಿಯೋದ ಸಹಯೋಗದೊಂದಿಗೆ ನಿರ್ಮಿಸುತ್ತಿದೆ.
ನಿರ್ಮಾಪಕರಾದ ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾಗೆ ಸಿನಿಮಾ ಬಗ್ಗೆ ಬಹಳ ಭರವಸೆ ಇದೆ. ಬಹುಕೋಟಿ ವೆಚ್ಚದ 'ವೃಷಭ' ಚಿತ್ರವನ್ನು ಮುಂದಿನ ವರ್ಷ ಜಗತ್ತಿನಾದ್ಯಂತ 4500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ತಂದೆ ಮಗನ ಬಾಂಧವ್ಯ ಕಥೆ ಆಗಿದ್ದು ಚಿತ್ರದಲ್ಲಿ ಮೋಹನ್ ಲಾಲ್ ಮಗನ ಪಾತ್ರದಲ್ಲಿ ತೆಲುಗು ನಟ ರೋಶನ್ ಮೇಕಾ ನಟಿಸುತ್ತಿದ್ದಾರೆ.

ಲಂಡನ್‌ನಲ್ಲಿ 'ವೃಷಭ' ಫಸ್ಟ್ ಶೆಡ್ಯೂಲ್ ಶೂಟಿಂಗ್ ಪ್ಲ್ಯಾನ್ ಮಾಡಲಾಗಿತ್ತು. ನಂತರ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಲು ಮುಂದಾಗಿತ್ತು. ಆದರೆ ಕಾರಣಾಂತರಗಳಿಂದ ಕೊನೆ ಗಳಿಗೆಯಲ್ಲಿ ಅದನ್ನು ಕ್ಯಾನ್ಸಲ್ ಮಾಡಿ ಮೈಸೂರಿನಲ್ಲಿ ಮುಹೂರ್ತ ಮಾಡಿ ಚಿತ್ರೀಕರಣ ಆರಂಭಿಸಲಾಗಿದೆ. ಮಾಲಿವುಡ್ ನಟ ಮೋಹನ್ ಲಾಲ್ ಸೂಪರ್ ಹಿಟ್ ಸಿನಿಮಾಗಳ ಮೂಲಕ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ನಿರ್ದೇಶಕರು ಇವರೊಟ್ಟಿಗೆ ಕೆಲಸ ಮಾಡಲು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಕನ್ನಡ ನಿರ್ದೇಶಕ ನಂದಕಿಶೋರ್ ಕಥೆಯನ್ನು ಮೋಹನ್ ಲಾಲ್ ಮೆಚ್ಚಿಕೊಂಡಿರುವುದು ಅಚ್ಚರಿ ಮೂಡಿಸುತ್ತಿದೆ.
ಸ್ಯಾಂಡಲ್‌ವುಡ್‌ನಲ್ಲಿ ಅದ್ಭುತ ಸಿನಿಮಾಗಳನ್ನು ಕೊಟ್ಟಿರುವ ನಂದಕಿಶೋರ್ ಇದೀಗ ಮೋಹನ್ ಲಾಲ್ ಜೊತೆಗೆ ಸಿನಿಮಾ ಮಾಡ್ತಿರೋದು ವಿಶೇಷ. ಇಷ್ಟು ದೊಡ್ಡ ಪ್ರಾಜೆಕ್ಟ್‌ನ ಇಷ್ಟು ಬೇಗ ಆರಂಭಿಸಿರುವುದು ಮೆಚ್ಚುವಂತಹದ್ದು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ತಂತ್ರಜ್ಞರು ಪರಭಾಷೆಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ಮಾಡ್ತಿದ್ರೆ ಗೋಪಿಚಂದ್ ನಟನೆಯ 'ಭೀಮ' ಚಿತ್ರಕ್ಕೆ ಎ. ಹರ್ಷ ಆಕ್ಷನ್ ಕಟ್ ಹೇಳ್ತಿದ್ದಾರೆ.
ಇತ್ತೀಚಿಗೆ ಮೋಹನ್ ಲಾಲ್ ಐತಿಕಾಸಿಕ ಆಕ್ಷನ್ ಸಿನಿಮಾ 'ಮಲೈಕೊಟೈ ವಾಲಿಬನ್' ಶೂಟಿಂಗ್ ಮುಗಿಸಿದ್ದಾರೆ. ಇನ್ನು 'ದೃಶ್ಯಂ' ಸರಣಿ ಖ್ಯಾತಿಯ ಜಿತು ಜೋಸೆಫ್ ಕೂಡ ಮೋಹನ್ ಲಾಲ್ ಜೊತೆ ಒಂದು ಸಿನಿಮಾ ಘೋಷಿಸಿದ್ದಾರೆ. ಇಷ್ಟು ಬ್ಯುಸಿಯಾಗಿರುವ ಮೋಹನ್ ಲಾಲ್ ಈಗ ನಂದಕಿಶೋರ್ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ. ಮಲಯಾಳಂ, ತೆಲುಗು, ತೆಲುಗು ಹಾಗೂ ಕನ್ನಡದಲ್ಲಿ 'ವೃಷಭ'ನ ಆರ್ಭಟ ಶುರುವಾಗಲಿದೆ.


Click it and Unblock the Notifications











