ಮೋಹನ್ ಲಾಲ್ ಐಷಾರಾಮಿ ಮನೆಯಲ್ಲಿ ನೀವು ಸ್ಟೇ ಮಾಡಬಹುದು; ಏನಿದು ಆಫರ್?
ಮಲಯಾಳಂ ನಟ ಮೋಹನ್ ಲಾಲ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಕನ್ನಡದ 'ಮೈತ್ರಿ' ಚಿತ್ರದಲ್ಲಿ ಅವರು ನಟಿಸಿದ್ದರು. ಸದ್ಯ ಈ ವರ್ಷ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ ಮೋಹನ್ ಲಾಲ್ ಅವರ ಊಟಿ ಮನೆಯಲ್ಲಿ ಯಾರು ಬೇಕಾದರೂ ಸ್ಟೇ ಮಾಡುವ ಅವಕಾಶ ಸಿಗುತ್ತಿದೆ.
ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ವಯಸ್ಸು 60 ದಾಟಿದ್ರು ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳಿಂದ ಬರುವ ಆದಾಯ ಮಾತ್ರವಲ್ಲ ಬೇರೆ ಬೇರೆ ರೀತಿಯಲ್ಲಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಕೂಡ ಹಣ ಹೂಡಿಕೆ ಮಾಡಿದ್ದಾರೆ. ಸದ್ಯ ಊಟಿಯಲ್ಲಿರುವ ತಮ್ಮ ಬಂಗಲೆಯನ್ನು ಸಾರ್ವಜನಿಕರು ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದಾರೆ.

ಊಟಿಗೆ ಪ್ರವಾಸ ಹೋಗುವವರು ಮೋಹನ್ ಲಾಲ್ ಅವರ ಬಂಗಲೆಯಲ್ಲಿ ಉಳಿದುಕೊಳ್ಳಬಹುದು. ಒಂದು ರಾತ್ರಿಗೆ 37 ಸಾವಿರ ರೂಪಾಯಿ ಪಾವತಿಸಿ ಯಾರು ಬೇಕಾದರೂ ಅಲ್ಲಿ ತಂಗಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಇದೇ ವಿಚಾರ ಮಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದೆ. ಮೊದಲಿನಿಂದಲೂ ಊಟಿ ಪ್ರವಾಸಿಗರ ನೆಚ್ಚಿನ ತಾಣ ಎನಿಸಿಕೊಂಡಿದೆ. ಪ್ರತಿ ದಿನ ಸಾವಿರಾರು ಜನ ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು, ತಣ್ಣನೆಯ ವಾತಾವರಣದಲ್ಲಿ ಕಾಲ ಕಳೆಯಲು ಪ್ರವಾಸ ಹೋಗುತ್ತಾರೆ. ಹೀಗೆ ಹೋಗುವವರು ಮೋಹನ್ ಲಾಲ್ ಅವರ ಬಂಗಲೆಯಲ್ಲಿ ಹಣ ಪಾವತಿಸಿ ಸ್ಟೇ ಮಾಡಬಹುದು.
ಊಟಿ ಟೌನ್‌ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ 'ಹೈಡ್‌ಅವೇ' ಎಂಬ ಹೆಸರಿನ ಈ ವಿಲ್ಲಾ ಇದೆ. ದಶಕದ ಹಿಂದೆ ಮೋಹನ್ ಲಾಲ್ ಆ ವಿಲ್ಲಾ ಖರೀದಿಸಿದ್ದರು. ಊಟಿ ಕಡೆ ಹೋದಾಗ ಅಲ್ಲೇ ಉಳಿದುಕೊಳ್ಳುತ್ತಿದ್ದರು. ಆದರೆ ಬಹುತೇಕ ಸಮಯ ಸಿನಿಮಾ ಶೂಟಿಂಗ್ ಎಂದು ಊರೂರು ಸುತ್ತುತ್ತಿರುತ್ತಾರೆ. ಹಾಗಾಗಿ ಊಟಿಗೆ ಹೋಗುವುದು ಕಮ್ಮಿ. ಹಾಗಾಗಿ ವಿಲ್ಲಾವನ್ನು ಖಾಲಿ ಬಿಡುವ ಬದಲು ಬಾಡಿಗೆಗೆ ಕೊಟ್ಟರೆ ಆದಾಯ ಗಳಿಸಬಹುದು ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಮನೆಯಲ್ಲಿ 25 ವರ್ಷಗಳಿಂದ ಅಡುಗೆ ಮಾಡುತ್ತಿದ್ದ ಬಾಣಸಿಗರು ವಿಲ್ಲಾ ಬಾಡಿಗೆಗೆ ಪಡೆಯುವವರಿಗೆ ಊಟೋಪಚಾರದ ವ್ಯವಸ್ಥೆ ನೋಡಿಕೊಳ್ಳುತ್ತಾರೆ.

ಸಣ್ಣ ಮ್ಯೂಸಿಎಂ ರೀತಿ ಒಂದು ಕೋಣೆ ಕೂಡ ಅಲ್ಲಿದೆ. ಮೋಹನ್ ಲಾಲ್ ಸಿನಿಮಾಗಳಲ್ಲಿ ಬಳಸುತ್ತಿದ್ದ ಪರಿಕರಗಳನ್ನು ಅಲ್ಲಿ ಇಡಲಾಗಿದೆ. ಅವರ ಒಂದಷ್ಟು ಫೋಟೊಗಳನ್ನು ಅಲ್ಲಿ ಇಟ್ಟಿದ್ದಾರೆ. ಇನ್ನು ಮೋಹನ್ ಲಾಲ್ ಅವರ ಹೈಡ್‌ಅವೇ ವಿಲ್ಲಾದಲ್ಲಿ ಉಳಿದುಕೊಳ್ಳುವವರು ಮೋಹನ್ ಲಾಲ್ ಅವರ ಬೆಡ್ ರೂಂ ಅಥವಾ ಅವರ ಮಕ್ಕಳ ಬೆಡ್‌ರೂಂನಲ್ಲಿ ಉಳಿದುಕೊಳ್ಳಲು ಆಯ್ಕೆ ಮಾಡಿಕೊಳ್ಳಬಹುದು. ಈಗಾಗಲೇ ವೆಬ್‌ಸೈಟ್‌ನಲ್ಲಿ ವಿಲ್ಲಾ ಬುಕ್ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ.
ಈ ಹಿಂದೆ ಮಲಯಾಳಂನ ಮತ್ತೊಬ್ಬ ನಟ ಮಮ್ಮುಟಿ ಕೂಡ ತಮ್ಮ ಕೊಚ್ಚಿನ್ ಮನೆಯನ್ನು ಇದೇ ರೀತಿ ಬಾಡಿಗೆಗೆ ಬಿಟ್ಟಿದ್ದಾರೆ. 'ಮಮ್ಮುಟ್ಟಿ ಹೌಸ್' ಎಂದೇ ಜನಪ್ರಿಯವಾಗಿರುವ ಈ ಮನೆಯಲ್ಲಿ ಒಂದು ರಾತ್ರಿ ತಂಗಲು 75 ಸಾವಿರ ಚಾರ್ಚ್ ಮಾಡುತ್ತಾರೆ. ಇದರಿಂದ ಪ್ರೇರಣೆಗೊಂಡು ಮೋಹನ್ ಲಾಲ್ ಈ ನಿರ್ಣಯಕ್ಕೆ ಬಂದಿರಬಹುದು ಎನ್ನಲಾಗ್ತಿದೆ. ಸಿನಿಮಾಗಳ ವಿಚಾರಕ್ಕೆ ಬಂದರೆ ಈ ವರ್ಷ ಮೋಹನ್ ಲಾಲ್ ನಟಿಸಿದ 'ಎಂಪುರಾನ್' ಹಾಗೂ 'ಥುಡರುಂ' ಚಿತ್ರಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ಹೃದಯಪೂರ್ವಕಂ' ಹಾಗೂ 'ವೃಷಭ' ಎಂಬ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











