ಚಿತ್ರರಂಗದ ಬಗ್ಗೆ ಮೋಹನ್‌ಲಾಲ್ ಕಾಳಜಿ: ಢೋಂಗಿ ಎಂದ ನೆಟ್ಟಿಗರು, ಕಾರಣವೇನು?
ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮೋಹನ್‌ಲಾಲ್ ಇತ್ತೀಚೆಗೆ ಅಭಿಮಾನಿಗಳಿಗೆ ಪತ್ರ ಬರೆದಿದ್ದು, ಈ ಪತ್ರ ಪರ-ವಿರೋಧ ಚರ್ಚೆ ಎಬ್ಬಿಸಿದೆ.
Recommended Video
ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಾಗಿ ಬಹಿರಂಗ ಪತ್ರವೊಂದನ್ನು ಬರೆದಿರುವ ನಟ ಮೋಹನ್‌ಲಾಲ್ ಎಲ್ಲರೂ ಚಿತ್ರಮಂದಿರಗಳಲ್ಲಿಯೇ ಸಿನಿಮಾ ನೋಡಿ ಸಿನಿಮಾ ಉದ್ಯಮವನ್ನು ಬೆಂಬಲಿಸಿ ಎಂದಿದ್ದಾರೆ.
ಮೋಹನ್‌ಲಾಲ್ ಅವರು ಹಠಾತ್ತನೆ ಚಿತ್ರಮಂದಿರಗಳಲ್ಲಿಯೇ ಸಿನಿಮಾ ನೋಡಿ ಎಂದಿರುವುದರ ಬಗ್ಗೆ ಹಲವು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.
''ನನ್ನ ಪ್ರೀತಿ ಪಾತ್ರರಿಗೆ ನಮಸ್ಕಾರ. ಸಿನಿಮಾದ ಮ್ಯಾಜಿಕ್ ಅನ್ನು ಚಿತ್ರಮಂದಿರಗಳಲ್ಲಿಯೇ ಸವಿಯಬೇಕು, ಕೊರೊನಾ ಆತಂಕವನ್ನು ಮೀರಿಕೊಂಡು ನಮ್ಮ ನಗರಗಳು ನಿಧಾನಕ್ಕೆ ಸಹಜ ಸ್ಥಿತಿಯತ್ತ ಮರಳುತ್ತಿವೆ. ಕೇರಳ ರಾಜ್ಯವು ಸಿ ಕ್ಯಾಟಗೆರಿಯಿಂದ ಹೊರಗೆ ಬರುತ್ತಿದೆ. ಈ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಾದ ಜಿಮ್‌ಗಳು, ಚಿತ್ರಮಂದಿರಗಳು ತೆರೆದಿರಬೇಕಾಗುತ್ತದೆ. ಇಷ್ಟು ದಿನ ಇಕ್ಕಟ್ಟಿನಲ್ಲಿ ದಿನ ದೂಡಿರುವ ಜನ ಹೊರಗೆ ಬಂದು ಸಿನಿಮಾ ನೋಡಿ ಹೊರಗೆ ಊಟ ಮಾಡಿ ಸಂತಸ ಪಡಲು ಅವಕಾಶ ಮಾಡಿಕೊಡಬೇಕು'' ಎಂದಿದ್ದಾರೆ ಮೋಹನ್‌ಲಾಲ್. ಆ ಮೂಲಕ ಪರೋಕ್ಷವಾಗಿ ಸರ್ಕಾರವು ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯಬೇಕೆಂದು ಒತ್ತಾಯಿಸಿದ್ದಾರೆ.
''ನನ್ನನ್ನು ಸಿನಿಮಾ ಕಲಾವಿದನಾಗಿ ಪ್ರೀತಿಸುವ ಎಲ್ಲರಿಗೂ ನಾನು ಕೇಳಿಕೊಳ್ಳುವುದೆಂದರೆ. ನೀವೆಲ್ಲರೂ ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿ. ಆ ಮೂಲಕ ಸಿನಿಮಾ ರಂಗವನ್ನು, ಸಿನಿಮಾ ಕಲಾವಿದರನ್ನು, ತಂತ್ರಜ್ಞರನ್ನು ಬೆಂಬಲಿಸಿ. ಚಿತ್ರರಂಗ ಸಂಕಷ್ಟದಲ್ಲಿದ್ದು ಇಂಥಹಾ ಸಮಯದಲ್ಲಿ ಚಿತ್ರರಂಗದ ಪರವಾಗಿ ನಿಲ್ಲಿ'' ಎಂದಿದ್ದಾರೆ ಮೋಹನ್‌ಲಾಲ್.

ಮೋಹನ್‌ಲಾಲ್ ಮಗ ನಟಿಸಿರುವ 'ಹೃದಯಂ' ಸಿನಿಮಾ
''ಹೃದಯಂ' ಸೇರಿದಂತೆ ಹಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ನೋಡಲೆಂದೆ ನಿರ್ಮಾಣ ಮಾಡಲಾಗಿದೆ. ಬಿಡುಗಡೆ ಮಾಡಲಾಗಿದೆ. 'ಹೃದಯಂ' ಸಿನಿಮಾವನ್ನು ಹಲವು ಯುವಕರ ಸೇರಿ ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ. ನನ್ನ ಮಗ, ನಿರ್ದೇಶಕ ಪ್ರಿಯದರ್ಶನ್ ಮಗಳು, ಶ್ರೀನಿವಾಸನ್ ಮಗ ಹಾಗೂ ಇನ್ನೂ ಅನೇಕ ಯುವಕರು ಸೇರಿ ಮಾಡಿರುವ ಸಿನಿಮಾ ಅದು. ಈ ಸಿನಿಮಾವನ್ನು ಚಿತ್ರಮಂದಿರಗಳಿಗಾಗಿಯೆಂದೇ ನಿರ್ಮಿಸಲಾಗಿದೆ. ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡಿ'' ಎಂದಿದ್ದಾರೆ ಮೋಹನ್‌ಲಾಲ್.

ಮೋಹನ್‌ಲಾಲ್ ಪತ್ರದ ಬಗ್ಗೆ ಆಕ್ಷೇಪಣೆ
ಆದರೆ ಮೋಹನ್‌ಲಾಲ್‌ರ ಈ ಬಹಿರಂಗ ಪತ್ರದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಕಾರಣ ಕೆಲವು ಜಿಲ್ಲೆಗಳಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಕೆಲವೆಡೆ 50% ಆಕ್ಯುಪೆನ್ಸಿ ಅಷ್ಟನ್ನೆ ನೀಡಲಾಗಿದೆ. ಇದೇ ಸಮಯದಲ್ಲಿ ಮೋಹನ್‌ಲಾಲ್ ಪುತ್ರ ನಾಯಕನಾಗಿ ನಟಿಸಿರುವ 'ಹೃದಯಂ' ಸಿನಿಮಾ ಬಿಡುಗಡೆ ಆಗಿದೆ. ತಮ್ಮ ಮಗನ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣಲೆಂದು ಮೋಹನ್‌ಲಾಲ್ ಹೀಗೆ ಹೇಳುತ್ತಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಒಟಿಟಿಗೆ ಮಾರಾಟ ಮಾಡಿದ್ದ ಮೋಹನ್‌ಲಾಲ್ ಆಪ್ತ
ಅದೂ ಅಲ್ಲದೆ, ಸ್ವತಃ ಮೋಹನ್‌ಲಾಲ್ ತಮ್ಮ ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದ್ದರು. ಆದರೆ ಈಗ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಎನ್ನುತ್ತಿದ್ದಾರೆ. ಮೋಹನ್‌ಲಾಲ್ ನಟನೆಯ ಸೂಪರ್ ಹಿಟ್ ಸಿನಿಮಾ 'ದೃಶ್ಯಂ' ಸಿನಿಮಾದ ಮುಂದುವರೆದ ಭಾಗ 'ದೃಶ್ಯಂ 2' ಅನ್ನು ನೇರವಾಗಿ ಒಟಿಟಿಗೆ ಬಿಡುಗಡೆ ಮಾಡಲಾಗಿತ್ತು. ಆ ಸಮಯದಲ್ಲಿಯೇ ಚಿತ್ರಮಂದಿರಗಳ ಮಾಲೀಕರು ಸಿನಿಮಾವನ್ನು ಚಿತ್ರಮಂದಿದಲ್ಲಿ ಬಿಡುಗಡೆ ಮಾಡಲು ಕೋರಿದರಾದರೂ ಮೋಹನ್‌ಲಾಲ್ ಬಿಡುಗಡೆ ಮಾಡಲಿಲ್ಲ. ಅದೂ 'ದೃಶ್ಯಂ 2' ಸಿನಿಮಾವನ್ನು ಮೋಹನ್‌ಲಾಲ್‌ರ ಪರಮಾಪ್ತ ಆಂಟೊನಿ ಪೆರುಂಬವೂರ್ ನಿರ್ಮಾಣ ಮಾಡಿದ್ದರು. ಅವರದ್ದೇ ನಟನೆಯ 'ಬ್ರೋ ಡ್ಯಾಡಿ' ಸಿನಿಮಾ ಸಹ ನೇರವಾಗಿ ಒಟಿಟಿಗೆ ಬಿಡುಗಡೆ ಆಯಿತು.

ಮೋಹನ್‌ಲಾಲ್ ಪತ್ರ ಬರೆದಿದ್ದು ಏಕೆ?
ಆ ಬಳಿಕ ಮೋಹನ್‌ಲಾಲ್ ನಟಿಸಿದ್ದ ಭಾರಿ ಬಜೆಟ್ ಸಿನಿಮಾ 'ಮರಕ್ಕರ್: ಅರಬ್ಬಿ ಕಡಲಿಂಟೆ ಸಿಂಹಂ' ಸಿನಿಮಾವನ್ನು ಸಹ ಒಟಿಟಿಗೆ ಮಾರಾಟ ಮಾಡಲು ಮೋಹನ್‌ಲಾಲ್ ಮುಂದಾಗಿದ್ದರು. ಆ ಸಿನಿಮಾವನ್ನೂ ಸಹ ಮೋಹನ್‌ಲಾಲ್‌ರ ಪರಮಾಪ್ತ ಆಂಟೊನಿ ಪೆರುಂಬವೂರ್ ನಿರ್ಮಾಣ ಮಾಡಿದ್ದರು. ಆದರೆ ಚಿತ್ರಮಂದಿರಗಳ ಮಾಲೀಕರು ಪ್ರತಿಭಟನೆ ಮಾಡಿದ ಬಳಿಕ ರಾಜ್ಯ ಸರ್ಕಾರದ ಮಂತ್ರಿಯೊಬ್ಬರು ಮಾತುಕತೆ ನಡೆಸಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯ್ತು. ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಹಲವು ಷರತ್ತುಗಳನ್ನು ಚಿತ್ರಮಂದಿರ ಮಾಲೀಕರಿಗೆ ವಿಧಿಸಿದ್ದರು ಮೋಹನ್‌ಲಾಲ್ ಆಪ್ತ ನಿರ್ಮಾಪಕ ಆಂಟೊನಿ ಪೆರುಂಬವೂರ್. ಆದರೆ ಈಗ ಮಾತ್ರ ಮೋಹನ್‌ಲಾಲ್ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿಯೇ ನೋಡಿ ಎನ್ನುತ್ತಿದ್ದಾರೆ. ತಮ್ಮ ಮಗನ ಸಿನಿಮಾ ಚೆನ್ನಾಗಿ ಓಡಲಿ ಎಂಬ ಕಾರಣಕ್ಕೆ ಹಾಗೂ ಫೆಬ್ರವರಿ 18 ರಂದು ಅವರದ್ದೇ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಆ ಕಾರಣಕ್ಕಾಗಿ ಮೋಹನ್‌ಲಾಲ್ ಈಗ ಈ ಬಹಿರಂಗ ಪತ್ರ ಬರೆದಿದ್ದಾರೆ.


Click it and Unblock the Notifications











