ದೃಶ್ಯಂ 3 ಕನ್ಫರ್ಮ್, ಈ ಬಾರಿ ಅಂತ್ಯವಾಗುತ್ತಾ ಜಾರ್ಜ್ ಕುಟ್ಟಿ ಕಥೆ ? ಮೋಹನ್ ಲಾಲ್ ಕೊಟ್ಟರು ಗುಡ್ ನ್ಯೂಸ್..!
ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಚಿತ್ರ ದೃಶ್ಯಂ. ಕ್ರೈಂ ಥ್ರಿಲ್ಲರ್ ಜಾನರಿನ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಭಾರೀ ಹಣವನ್ನು ಗಳಿಸುವುದಲ್ಲದೇ ಮೋಹನ್ ಲಾಲ್ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸಿತ್ತು.
ಮಲಯಾಳಂನಲ್ಲಿ ತೆರೆಗೆ ಬಂದು ಆ ನಂತರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಕೂಡ ರಿಮೇಕ್ ಆದ ಈ ಚಿತ್ರದ ಕನ್ನಡದ ಅವತರಣಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸುಗಾರ ಡಾ.ವಿ.ರವಿಚಂದ್ರನ್ ಅತ್ಯದ್ಭುತವಾಗಿ ಅಭಿನಯಿಸಿದ್ದರು. ತಮಿಳಿನಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ವೆಂಕಟೇಶ್ ಮತ್ತು ಹಿಂದಿಯಲ್ಲಿ ಅಜಯ್ ದೇವಗನ್, ಮೋಹನ್ ಲಾಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಜೀವ ತುಂಬಿದ್ದರು. ಅದಾದ ನಂತರ ದೃಶ್ಯಂ 2 ಕೂಡ ತೆರೆ ಕಂಡಿತ್ತು. ಮೊದಲ ಭಾಗದಂತೆಯೇ ಎಲ್ಲ ಭಾಷೆಯಲ್ಲಿ ಈ ಚಿತ್ರ ಕೂಡ ರಿಮೇಕ್ ಆಗಿತ್ತು. ಈಗ ಮೂರನೇ ಭಾಗದ ಸರದಿ.

ಹೌದು, ಅಸಲಿಗೆ ದೃಶ್ಯಂ 3 ಬರುತ್ತೆ ಎನ್ನುವ ಮಾತು ಕಳೆದ ಅನೇಕ ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಈ ಸುದ್ದಿ ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗಿತ್ತು. ಅಧಿಕೃತ ಮುದ್ರೆಯನ್ನು ಚಿತ್ರತಂಡದ ಯಾರೊಬ್ಬರು ಈ ಸುದ್ದಿಯ ಮೇಲೆ ಹಾಕಿರಲಿಲ್ಲ. ಆದರೆ ಈಗ ಖುದ್ದು ಮೋಹನ್ ಲಾಲ್ ದೃಶ್ಯಂ 3 ಚಿತ್ರದ ಕುರಿತು ಮಾಹಿತಿಯನ್ನು ನೀಡಿದ್ದಾರೆ. ದೃಶ್ಯಂ 3 ಬರುವುದು ಕನ್ಫರ್ಮ್ ಎಂದು ಹೇಳಿದ್ದಾರೆ. ಈ ಮೂಲಕ ದೃಶ್ಯಂ ಚಿತ್ರವನ್ನು ಅತೀವವಾಗಿ ಇಷ್ಟ ಪಟ್ಟವರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಮೋಹನ್ ಲಾಲ್ ನೀಡಿದ್ದಾರೆ.
ಸಹಜವಾಗಿ ಮೋಹನ್ ಲಾಲ್ ಈ ಬ್ರೇಕಿಂಗ್ ನ್ಯೂಸ್ ನೀಡಿದ ಬೆನ್ನಲ್ಲಿಯೇ ಚಿತ್ರ ರಸಿಕರ ಕೂತುಹಲ ಹೆಚ್ಚಾಗಿದೆ. ಹೀಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿರುವ ಅನೇಕರು ದೃಶ್ಯಂ ಚಿತ್ರದ ಮೂರನೇ ಭಾಗದ ಕಥೆ ಹೇಗೆ ಆರಂಭವಾಗುತ್ತೆ ಎಂದು ಬೆಳ್ಳಿತೆರೆಯ ಮೇಲೆ ನೋಡಲು ಕಾಯಲು ಸಾಧ್ಯ ಇಲ್ಲ ಎನ್ನುತ್ತಿದ್ದಾರೆ. ಸಸ್ಪೆನ್ಸ್ ಮುಂದುವರೆಯುತ್ತೆ ಅವರೆಲ್ಲ ಮತ್ತೆ ಬರುತ್ತಿದ್ದಾರೆ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ಧಾರೆ. ದೃಶ್ಯಂ 3 ಹ್ಯಾಶ್‌ಟ್ಯಾಗ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ಧಾರೆ.
ಇನ್ನು, ಮಲಯಾಳಂನ ರೆಡ್ ಎಫ್‌ಎಂಗೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ನಿರ್ದೇಶಕ ಜೀತು ಜೋಸೆಫ್ 2013ರಲ್ಲಿ ನಾನು ದೃಶ್ಯಂ ಮಾಡಿದಾಗ ಎರಡನೇ ಭಾಗ ಮಾಡುವ ಆಲೋಚನೆ ನನಗೆ ಇರಲಿಲ್ಲ, ಕಥೆಯ ಎಳೆ ಕೂಡ ಹೊಳೆದಿರಲಿಲ್ಲ ಹೀಗಾಗಿಯೇ ಎರಡನೇ ಭಾಗ ಮಾಡಲು ಐದು ವರ್ಷ ಬೇಕಾದವು ಎಂದು ಹೇಳಿದ್ದರು. ಚಿತ್ರದ ಕಥೆ ಬರೆಯುವಾಗ ಕೆಲ ಕಡೆ ನಾನು ಗೊಂದಲಕ್ಕೀಡಾಗಿದ್ದೇ ಎಂದು ಹೇಳಿದ್ದರು. ದೃಶ್ಯಂ 3 ವಿಚಾರದಲ್ಲಿ ಕೂಡ ಕ್ಲ್ಯೆಮ್ಯಾಕ್ಸ್ ಬಗ್ಗೆ ನನಗೆ ಸ್ಪಷ್ಟತೆ ಇದೆ ಆದರೆ ಕೆಲ ಸನ್ನಿವೇಶಗಳನ್ನು ಹೆಣೆಯುವಾಗ ಪ್ರಶ್ನೆಗಳು ಮೂಡಿದ್ದವು ಎಂದು ಹೇಳಿದ್ದರು. ಮೋಹನ್ ಲಾಲ್ ಸರ್ ಅವರ ಮಾರ್ಗದರ್ಶನದಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಕೂಡ ಸಿಕ್ಕವು ಎಂದು ಜೀತು ಜೋಸೆಫ್ ಹೇಳಿದ್ದರು. ಇನ್ನುಳಿದಂತೆ ದೃಶ್ಯಂ 3 ಚಿತ್ರವನ್ನು ಕೂಡ ಮೊದಲ ಎರಡು ಭಾಗ ನಿರ್ಮಾಣ ಮಾಡಿದ್ದ ಆಂಟೋನಿ ಅವರೇ ನಿರ್ಮಾಣ ಮಾಡಲಿದ್ದಾರೆ.
ಚಿತ್ರದ ಉಳಿದ ತಾರಾಬಳಗದ ಬಗ್ಗೆ ಜೀತು ಜೋಸೆಫ್ ಹೆಚ್ಚೇನು ಮಾಹಿತಿ ನೀಡಿಲ್ಲವಾದರೂ ಮೊದಲ ಎರಡು ಭಾಗದಲ್ಲಿ ಜಾರ್ಜ್ ಕುಟ್ಟಿಯ ಕುಟುಂಬದ ಸದಸ್ಯರೇ ಇಲ್ಲಿಯೂ ಮುಂದುವರೆಯುವ ಸಾಧ್ಯತೆ ಇದೆ. ಅಂದ್ಹಾಗೇ ದೃಶ್ಯಂ ಮೊದಲ ಭಾಗ 2013ರಲ್ಲಿ ತೆರೆಗೆ ಬಂದಿತ್ತು. ಎರಡನೇ ಭಾಗ 2021ರಲ್ಲಿ ಬಿಡುಗಡೆಯಾಗಿತ್ತು. ದೃಶ್ಯಂ 3 ಈ ವರ್ಷದ ಅಂತ್ಯಕ್ಕೆ ತೆರೆಗೆ ಬರುವ ನಿರೀಕ್ಷೆ ಇದೆ.


Click it and Unblock the Notifications











