ಮೋಹನ್ ಲಾಲ್ ನಟನೆಯ ಹೊಸ ಚಿತ್ರಕ್ಕಿಂತ 1995ರ ಚಿತ್ರದ ರಿರಿಲೀಸ್ ಕಲೆಕ್ಷನ್ ಹೆಚ್ಚು!
ಮಾಲಿವುಡ್‌ನ ಮೇರುನಟರಲ್ಲಿ ಓರ್ವರು ಎನಿಸಿಕೊಂಡಿರುವ ನಟ ಮೋಹನ್ ಲಾಲ್ ಮಾಲಿವುಡ್ ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡವರು. ತಮ್ಮ ಸಿನಿ ಜೀವನದಲ್ಲಿ ಎರಡು ಬಾರಿ ನೂರು ಕೋಟಿ ಕ್ಲಬ್ ಚಿತ್ರಗಳನ್ನು ನೀಡಿರುವ ಮೋಹನ್ ಲಾಲ್ ಸದ್ಯ ಕೆಟ್ಟ ಫಾರ್ಮ್‌ನಲ್ಲಿ ಇದ್ದಾರೆ. ಭಿನ್ನ ವಿಭಿನ್ನ ಪ್ರಯತ್ನಗಳನ್ನು ಮಾಡಿದರೂ ಸಹ ಮೋಹನ್ ಲಾಲ್ ಗೆಲುವಿನ ಹಾದಿಗೆ ಮರಳಲು ಆಗುತ್ತಿಲ್ಲ.
ಬ್ರೋ ಡ್ಯಾಡಿ, ಆರಟ್ಟು, 12th ಮ್ಯಾನ್, ಮಾನ್‌ಸ್ಟರ್ ಹಾಗೂ ಅಲೋನ್ ಹೀಗೆ ಮೋಹನ್ ಲಾಲ್ ನಟಿಸಿದ ಕಳೆದ ಐದು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ್ದು, ಲಾಲೆಟ್ಟನ್ ಕೆಟ್ಟ ಫಾರ್ಮ್ ಎದುರಿಸುತ್ತದ್ದಾರೆ. ಅದರಲ್ಲಿಯೂ ಮೋಹನ್ ಲಾಲ್ ನಟನೆಯ ಇತ್ತೀಚೆಗಿನ ಸಿನಿಮಾ ಅಲೋನ್ ಸೋತ ರೀತಿಯಂತೂ ತೀರ ಕೆಟ್ಟಮಟ್ಟದಲ್ಲಿತ್ತು.

ಹೌದು, 2.5 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಅಲೋನ್ ಸಿನಿಮಾ ಕೇವಲ ನಾಲ್ಕೇ ದಿನಕ್ಕೆ ಬಹುತೇಕ ಕಡೆ ತನ್ನ ಓಟವನ್ನು ಮುಕ್ತಾಯಗೊಳಿಸಿ ಬಾಕ್ಸ್ ಆಫೀಸ್‌ನಲ್ಲಿ ಕೇವಲ 1 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಹೀನಾಯವಾಗಿ ಸಿನಿಮಾ ಸೋಲನ್ನು ಅನುಭವಿಸಿದೆ. ಹೀಗೆ ಮೋಹನ್ ಲಾಲ್ ಅವರ ಹೊಸ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿದರೆ, 1995ರಲ್ಲಿ ತೆರೆಕಂಡಿದ್ದ ಇದೇ ಮೋಹನ್ ಲಾಲ್ ನಟನೆಯ ಚಿತ್ರವೊಂದು ಮರುಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ.
ಹೌದು, 1995ರಲ್ಲಿ ತೆರೆಕಂಡು ಆಗಿನ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ 8 ಕೋಟಿ ಗಳಿಸಿದ್ದ ಸ್ಪಟಿಕಂ ಎಂಬ ಸೂಪರ್ ಹಿಟ್ ಬ್ಲಾಕ್‌ಬಸ್ಟರ್ ಚಿತ್ರವನ್ನು ಇದೀಗ 4K ವರ್ಷನ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಚಿತ್ರ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ 1.05 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಎಷ್ಟೇ ದೊಡ್ಡ ಸ್ಟಾರ್ ನಟನಾದರೂ ಕಂಟೆಂಟ್ ಇಲ್ಲದ ಚಿತ್ರ ಮಾಡಿದರೆ ಜನ ಸೊಪ್ಪು ಹಾಕುವುದಿಲ್ಲ, ಸಿನಿಮಾ ಚೆನ್ನಾಗಿದ್ದರಷ್ಟೇ ಬೆಲೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.


Click it and Unblock the Notifications











