ವಯನಾಡ್ ದುರಂತ: ಸೇನಾ ಸಮವಸ್ತ್ರ ಧರಿಸಿ ಅಖಾಡಕ್ಕಿಳಿದ ಮೋಹನ್ ಲಾಲ್, ರಿಯಲ್ ಹೀರೊ
ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈಗಾಗಲೇ ಹಲವರು ಸಹಾಯಹಸ್ತ ಚಾಚಿದ್ದಾರೆ. ಸಿನಿಮಾ ತೆರೆಯರು ದೇಣಿಗೆ ನೀಡುತ್ತಿದ್ದಾರೆ. ಇನ್ನು ರಕ್ಷಣಾ ಕಾರ್ಯಚರಣೆ 5ನೇ ದಿನಕ್ಕೆ ಕಾಲಿಟ್ಟಿದೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣೆ ಕಾರ್ಯ ಮುಂದುವರೆದಿದೆ.
ದುರಂತದಲ್ಲಿ ಸತ್ತವರ ಸಂಖ್ಯೆ 344ಕ್ಕೆ ಏರಿದೆ. ಕುಸಿದ ಮನೆಗಳು ಹಾಗೂ ಅವಶೇಷಗಳ ಅಡಿ ಇನ್ನು ಯಾರಾದರೂ ಸಿಲುಕ್ಕಿದ್ದಾರಾ ಎಂದು ಹುಡುಕಾಟ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಮಳೆ ಕೂಡ ಅಡ್ಡಿಪಡಿಸುತ್ತಿದೆ. ಭಾರತೀಯ ಸೇನೆ, ಕೇರಳ ಪೊಲೀಸರು ಹಾಗೂ ತುರ್ತು ಸೇವಾ ಘಟಕ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿ ಆಗಿದೆ. ಇದೀಗ ಮಲಯಾಳಂ ನಟ ಮೋಹನ್ ಲಾಲ್ ಸೇನಾ ಧಿರಿಸಿನಲ್ಲಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಯನಾಡಿನ ಭೂಕುಸಿತ ಪೀಡಿತ ಮುಂಡಕ್ಕೈ ಪ್ರದೇಶದಲ್ಲಿ ಸ್ಥಾಪಿಸಲಾದ ಟೆರಿಟೋರಿಯಲ್ ಆರ್ಮಿ ಬೇಸ್ ಕ್ಯಾಂಪ್‌ಗೆ ನಟ ಮೋಹನ್ ಲಾಲ್ ಭೇಟಿ ನೀಡಿದ್ದರು. ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮೋಹನ್ ಲಾಲ್ ಅವರು ಸೇನಾ ಸಮವಸ್ತ್ರವನ್ನು ಧರಿಸಿ ತಮ್ಮ ಸಹ ಸೈನಿಕರೊಂದಿಗೆ ಭೂಕುಸಿತ ಪ್ರದೇಶಗಳನ್ನು ಪರಿಶೀಲಿಸಿದರು. ಶುಕ್ರವಾರ ಸಂಜೆ ಅವರು ಕೋಝಿಕ್ಕೋಡ್‌ನಿಂದ ರಸ್ತೆ ಮಾರ್ಗವಾಗಿ ವಯನಾಡ್‌ಗೆ ತಲುಪಿದರು. ದುರಂತ ಹಾಗೂ ರಕ್ಷಣಾ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.
ಮುಂಡಕ್ಕೈ ಗ್ರಾಮದಲ್ಲಿ ಭೂಕುಸಿತ ಪ್ರದೇಶಕ್ಕೆ ನಟ ಮೋಹನ್ ಲಾಲ್ ಅವರನ್ನು ಕರೆದೊಯ್ದು ಸಿಬ್ಬಂದಿ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು. ಭೂಕುಸಿತದಿಂದ ಹಾನಿಗೊಳಗಾದ ಮತ್ತೊಂದು ಗ್ರಾಮವಾದ ಚುರಲ್ಮಾಕ್ಕೂ ಮೋಹನ್ ಲಾಲ್ ಭೇಟಿ ನೀಡಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರು ಹಾಗೂ ಶಿಬಿರದಲ್ಲಿರುವವರನ್ನು ನಟ ಮೋಹನ್ ಲಾಲ್ ಭೇಟಿ ಮಾಡಲಿದ್ದಾರೆ. ಸಂಸ್ತ್ರಸ್ಥರಿಗೆ ಪುನವರ್ಸತಿ ಕಲ್ಪಿಸಲು ಮೋಹನ್ ಲಾಲ್ ತಮ್ಮ ವಿಶ್ವಶಾಂತಿ ಫೌಂಡೇಶನ್ ವತಿಯಿಂದ 3 ಕೋಟಿ ರೂ. ಪ್ರಾಜೆಕ್ಟ್ ಘೋಷಿಸಿದ್ದಾರೆ.

ವಯನಾಡ್ ಸಂತ್ರಸ್ತರಿಗೆ ಸಹಾಯ ಮಾಡಲು ಮೋಹನ್ ಲಾಲ್ ವೈಯಕ್ತಿಕವಾಗಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ್ದಾರೆ. ಇದಕ್ಕೂ ಮುನ್ನ ವಯನಾಡಿನಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಸ್ವಯಂಸೇವಕರು, ಪೊಲೀಸರು, ಪರಿಹಾರ ತಂಡಗಳು ಮತ್ತು ಸರ್ಕಾರಿ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದ್ದರು. ಇದೀಗ ಖುದ್ದಾಗಿ ವಯನಾಡಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಅಗತ್ಯ ಬಿದ್ದರೆ ತಮ್ಮ ಸಂಸ್ಥೆ ವತಿಯಿಂದ ಮತ್ತಷ್ಟು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗೆ ಗೌರವಪೂರ್ವಕವಾಗಿ ಮೋಹನ್ ಲಾಲ್ ಅವರಿಗೆ 2008ರಲ್ಲಿ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇರಿಕೊಳ್ಳಲಾಗಿತ್ತು. ಈಗಾಗಲೇ ತಮಿಳು ನಟರಾದ ಸೂರ್ಯ, ಕಾರ್ತಿ ಸೇರಿದಂತೆ ಹಲವರು ಕೇರಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ವಿಕ್ರಂ, ಮಮ್ಮುಟಿ, ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಸಹಾಯ ಘೋಷಿಸಿದ್ದಾರೆ.


Click it and Unblock the Notifications











