ನಂದಕಿಶೋರ್- ಮೋಹನ್ ಲಾಲ್ ಜೋಡಿ 'ವೃಷಭ' ಟೀಸರ್ ಔಟ್; ಸರ್ಮಜಿತ್ ಝಲಕ್ ಹೇಗಿದೆ?
ಕನ್ನಡ ಚಿತ್ರ ನಿರ್ದೇಶಕ ನಂದ ಕಿಶೋರ್ ಮಾಲಿವುಡ್ ಪ್ರವೇಶಿಸಿದ್ದಾರೆ. ಕನ್ನಡದಲ್ಲಿ 'ಪೊಗರು' ಹಾಗೂ 'ರಾಣಾ' ಚಿತ್ರಗಳ ಬಳಿಕ ಮೋಹನ್ ಲಾಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿತ್ತು. ಇದೀಗ 'ವೃಷಭ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ರಿಲೀಸ್ ಮಾಡಿ ನಿರೀಕ್ಷೆ ಹುಟ್ಟಾಕ್ಕಿದೆ ಚಿತ್ರತಂಡ.
ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಸಿನಿಮಾ 'ವೃಷಭ' ಸಿನಿಮಾ ನಿರ್ಮಾಣವಾಗಿದ್ದು ಇನ್ನುಳಿದ ಭಾಷೆಗಳಿಗೆ ಡಬ್ ಆಗಲಿದೆ. ವಿಶೇಷ ಅಂದ್ರೆ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಕೂಡ ಬಣ್ಣ ಹಚ್ಚಿದ್ದಾರೆ. ಮೋಹನ್ ಲಾಲ್ ಹಾಗೂ ಸಮರ್ಜಿತ್ ತಂದೆ, ಮಗನಾಗಿ ನಟಿಸಿದ್ದಾರೆ. ಇದೊಂದು ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನುವುದು ಟೀಸರ್ ನೋಡಿದರೆ ಅರ್ಥವಾಗುತ್ತಿದೆ. 'ಮಗಧೀರ' ರೀತಿ ಎರಡು ಕಾಲಘಟ್ಟಗಳಲ್ಲಿ ಚಿತ್ರದ ಕತೆ ನಡೆಯಲಿದೆ.

ಇವತ್ತಿನ ಕಾಲಘಟ್ಟದ ಜೊತೆಗೆ 400- 500 ವರ್ಷಗಳ ಹಿಂದಿನ ಕಥೆ ಕೂಡ ಚಿತ್ರದಲ್ಲಿ ಇರಲಿದೆ. ಟೀಸರ್‌ನಲ್ಲಿ ವೀರ ಸೇನಾನಿಯಾಗಿ ಮೋಹನ್ ಲಾಲ್ ಆರ್ಭಟದ ಝಲಕ್ ನೋಡಬಹುದು. ಕೊನೆಯಲ್ಲಿ ಸಮರ್ಜಿತ್ ಮಡಿಲಲ್ಲಿ ಲಾಲ್ ಮಲಗಿರುವ ದೃಶ್ಯವೂ ಇದೆ. ಎರಡೂ ಕಾಲಘಟ್ಟದ ಕಥೆ ಯಾಕೆ? ಎನ್ನುವುದು ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಬಳಿಕ ಗೊತ್ತಾಗಲಿದೆ. ನಿರೀಕ್ಷೆಗಿಂತ ಉತ್ತಮವಾಗಿ ಟೀಸರ್ ಮೂಡಿ ಬಂದಿದೆ ಎಂದು ಸಿನಿರಸಿಕರು ಕಾಮೆಂಟ್ ಮಾಡುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ.
ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸುತ್ತಿದ್ದಾರೆ. ಆ ಸಾಲಿಗೆ 'ವೃಷಭ' ಸಿನಿಮಾ ಕೂಡ ಸೇರಿಕೊಳ್ಳುತ್ತದೆ ಎನ್ನಲಾಗ್ತಿದೆ. ಕಾಸ್ಟ್ಯೂಮ್ ಡ್ರಾಮಾದಲ್ಲಿ ಮೋಹಲ್ ಲಾಲ್ ಆರ್ಬಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಾರೀ ಸೆಟ್‌ಗಳನ್ನು ನಿರ್ಮಿಸಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಸಾಕಷ್ಟು ಕಡೆಗಳಲ್ಲಿ ಸಿಜಿ, ಗ್ರಾಫಿಕ್ಸ್ ಬಳಸಿಕೊಳ್ಳಲಾಗಿದೆ. ಟೀಸರ್ ಟೆಸ್ಟ್‌ನಲ್ಲಿ ತಂಡ ಪಾಸ್ ಆಗಿದೆ. ಟ್ರೈಲರ್ ಯಾವ ರೀತಿ ಇರುತ್ತದೆ ಎಂದು ನೋಡಲು, ದೀಪಾವಳಿಗೆ ತೆರೆಮೇಲೆ ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುವಂತಾಗಿದೆ.
ಸಂಗೀತ ನಿರ್ದೇಶಕ ಸ್ಯಾಮ್ ಸಿಎಸ್ ಬಿಜಿಎಂ ಸಖತ್ತಾಗಿದೆ. ಇನ್ನು ಸರ್ಮಜಿತ್ ಒಂದೇ ಒಂದು ದೃಶ್ಯದಲ್ಲಿ ಮಾತ್ರ ಮಿಂಚಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಸಿಗಲಿದೆ. 'ಗೌರಿ' ಚಿತ್ರದ ಮೂಲಕ ಇಂದ್ರಜಿತ್ ಪುತ್ರ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಇದು ಅವರ 2ನೇ ಸಿನಿಮಾ. ತೆಲುಗು ನಟ ರೋಷನ್ ಈ ಪಾತ್ರದಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ ಅವರು ಅರ್ಧದಲ್ಲೇ ಚಿತ್ರದಿಂದ ಹೊರನಡೆದಿದ್ದರು. ಹಾಗಾಗಿ ಆ ಅವಕಾಶ ಸರ್ಮಜಿತ್ ಪಾಲಾಗಿತ್ತು.
ಕೆಜಿಎಫ್ ಖ್ಯಾತಿಯ ಗರುಡ ರಾಮ್ ಹಾಗೂ ರಾಗಿಣಿ ದ್ವಿವೇದಿ ಕೂಡ 'ವೃಷಭ' ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಅವರ ದೃಶ್ಯಗಳು ಟೀಸರ್‌ನಲ್ಲಿ ಇಲ್ಲ. ಇನ್ನುಳಿದಂತೆ ನೇಹಾ ಸಕ್ಸೇನಾ, ಮಹೇಂದ್ರ ರಾಜ್‌ಪುತ್ ಚಿತ್ರದಲ್ಲಿದ್ದಾರೆ. ಶೋಭಾ ಕಪೂರ್ ಹಾಗೂ ಏಕ್ತಾ ಕಪೂರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ 16ಕ್ಕೆ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ.
ಈಗಾಗಲೇ ಕನ್ನಡ ಚಿತ್ರ ನಿರ್ದೇಶಕರು ಪರಭಾಷಾ ಚಿತ್ರರಂಗಗಳತ್ತ ಮುಖ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದಾರೆ. ಅದೇ ಸಾಲಿಗೆ ನಂದ ಕಿಶೋರ್ ಸೇರಿಕೊಂಡಿದ್ದಾರೆ. 'ಸಲಾರ್' ಸಿನಿಮಾ ಮಾಡಿ ಗೆದ್ದ ಪ್ರಶಾಂತ್ ನೀಲ್ ಈಗ 'ಡ್ರ್ಯಾಗನ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ಬಾಘಿ- 4' ಸಿನಿಮಾ ಮೂಲಕ ಎ. ಹರ್ಷ ಬಾಲಿವುಡ್ ಪ್ರವೇಶಿಸಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಖ್ಯಾತಿಯ ನಿರ್ದೇಶಕ ಸಚಿನ್ ರವಿ ಕೂಡ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ.


Click it and Unblock the Notifications











