ಕನ್ನಡ ಬ್ಯಾನರ್, ಡೈರೆಕ್ಟರ್‌ನ 'ಧೂಮಂ' ಕನ್ನಡದಲ್ಲೇ ಬರಲ್ವ? ಹೊಸ ಪೋಸ್ಟರ್ ಹುಟ್ಟುಹಾಕಿತು ಅನುಮಾನ!
ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಾಲು ಸಾಲು ಚಿತ್ರಗಳನ್ನು ನಿರ್ಮಿಸುತ್ತಿದೆ. ಪುನೀತ್ ರಾಜ್‌ಕುಮಾರ್ ನಟನೆಯ ನಿನ್ನಿಂದಲೇ ಚಿತ್ರಕ್ಕೆ ಬಂಡವಾಳ ಹೂಡುವುದರ ಮೂಲಕ ತನ್ನ ಜರ್ನಿಯನ್ನು ಆರಂಭಿಸಿದ ವಿಜಯ್ ಕಿರಗಂದೂರು ಒಡೆತನದ ಸಂಸ್ಥೆ ಬಳಿಕ ಯಶ್ ನಟನೆಯ ಮಾಸ್ಟರ್ ಪೀಸ್, ಕೆಜಿಎಫ್ ಚಿತ್ರ ಸರಣಿ ಹಾಗೂ ಪುನೀತ್ ರಾಜ್‌ಕುಮಾರ್ ನಟನೆಯ ರಾಜಕುಮಾರ ಹಾಗೂ ಯುವರತ್ನ ಮತ್ತು ಕಾಂತಾರ ಸಿನಿಮಾಗಳಿಗೆ ಬಂಡವಾಳ ಹೂಡಿತು.
ಹೀಗೆ ಅತಿಹೆಚ್ಚು ಯಶಸ್ವಿ ಚಿತ್ರಗಳನ್ನೇ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಸದ್ಯ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಿಗೂ ಬಂಡವಾಳ ಹೂಡುತ್ತಿದೆ. ಕನ್ನಡದಲ್ಲಿ ಬಘೀರ, ಯುವ, ರಾಘವೇಂದ್ರ ಸ್ಟೋರ್ಸ್ ಚಿತ್ರಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ತೆಲುಗಿನಲ್ಲಿ ಪ್ರಭಾಸ್ ನಟನೆಯ ಸಲಾರ್ ಚಿತ್ರಕ್ಕೆ ಬಂಡವಾಳ ಹೂಡಿದೆ, ತಮಿಳಿನಲ್ಲಿ ಕೀರ್ತಿ ಸುರೇಶ್ ನಟಿಸಲಿರುವ ರಘು ತಾತಾ ನಟನೆಯ ಚಿತ್ರಕ್ಕೆ ಹಣ ಹೂಡ್ತಿದೆ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಟನೆಯ ಟೈಸನ್ ಹಾಗೂ ಫಹಾದ್ ಫಾಸಿಲ್ ನಟನೆಯ ಧೂಮಂ ಚಿತ್ರಗಳಿಗೆ ಬಂಡವಾಳ ಹಾಕಿದೆ.

ಈ ಪೈಕಿ ಧೂಮಂ ತೆರೆಗೆ ಬರಲಿರುವ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮೊದಲ ಪರಭಾಷಾ ಚಿತ್ರ ಎನಿಸಿಕೊಳ್ಳಲಿದ್ದು, ಇಂದು ( ಏಪ್ರಿಲ್ 17) ಹೊಂಬಾಳೆ ಫಿಲ್ಮ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ ನಾಯಕ ಫಹಾದ್ ಫಾಸಿಲ್ ಹಾಗೂ ನಾಯಕಿ ಅಪರ್ಣ ಬಾಲಮುರಳಿ ಸೇರಿದಂತೆ ಇತರೆ ಕಲಾವಿದರ ಫಸ್ಟ್ ಲುಕ್ ರಿವೀಲ್ ಆಗಿದೆ.
ಇನ್ನು ಈ ಚಿತ್ರಕ್ಕೆ ಕನ್ನಡದ ನಿರ್ದೇಶಕ ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಮೊದಲಿಗೆ ಈ ಚಿತ್ರ ಸೆಟ್ಟೇರಿದ್ದಾಗ ಚಿತ್ರ ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ನಲ್ಲಿ ತಿಳಿಸಲಾಗಿತ್ತು. ಆದರೆ ಇಂದು ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ಕನ್ನಡ ಅವತರಣಿಕೆಯಲ್ಲಿ ಇಲ್ಲ. ಕೇವಲ ಮಲಯಾಳಂ ಪೋಸ್ಟರ್ ಮಾತ್ರ ಬಿಡುಗಡೆಗೊಂಡಿದ್ದು, ಉಳಿದ ಯಾವ ಭಾಷೆಯ ಪೋಸ್ಟರ್ ಕೂಡ ಬಿಡುಗಡೆಯಾಗಿಲ್ಲ.

ಅಲ್ಲದೇ ಬಿಡುಗಡೆಗೊಂಡಿರುವ ಮಲಯಾಳಂ ಪೋಸ್ಟರ್‌ನಲ್ಲಿಯೂ ಸಹ ಈ ಹಿಂದಿನ ಪೋಸ್ಟರ್‌ನಲ್ಲಿ ಇದ್ದಂತೆ ಚಿತ್ರ ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ ಎಂಬ ಬರಹ ಸಹ ಇಲ್ಲ. ಹೀಗಾಗಿ ಸಿನಿ ರಸಿಕರು ಚಿತ್ರ ಕೇವಲ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಾ ಅಥವಾ ಮೊದಲು ಹೇಳಿದಂತೆ ಬೇರೆ ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಕನ್ನಡಿಗರು ಕನ್ನಡದಲ್ಲಿ ಪೋಸ್ಟರ್ ಬಿಡುಗಡೆ ಮಾಡದೇ ಇರದ ಕಾರಣದಿಂದಾಗಿ ತುಸು ಹೆಚ್ಚಿನ ಬೇಸರದಿಂದಲೇ ಕಿಡಿಕಾರಿದ್ದಾರೆ. ಕನ್ನಡದ ನಿರ್ದೇಶಕ, ಕನ್ನಡದ ನಿರ್ಮಾಪಕರು, ಆದರೆ ಚಿತ್ರ ಮಾತ್ರ ಮಲಯಾಳಂನದ್ದಾ ಎಂದು ಬೇಸರ ಹೊರಹಾಕಿದ್ದಾರೆ. ಮೊದಲಿಗೆ ಇದೊಂದು ಮಲಯಾಳಂ ಹಾಗೂ ಕನ್ನಡ ಚಿತ್ರ ಎಂದಿದ್ರಿ, ಈಗ ನೋಡಿದ್ರೆ ಕೇವಲ ಮಲಯಾಳಂ ಪೋಸ್ಟರ್ ಬಿಡುಗಡೆ ಮಾಡಿದ್ದೀರ ಎಂದು ಕಾಮೆಂಟ್ ಮೂಲಕ ನಿರಾಸೆ ಹೊರಹಾಕಿದ್ದಾರೆ.
ಹೀಗೆ ಗೊಂದಲ ಹುಟ್ಟುಹಾಕಿರುವ ಧೂಮಂ ಚಿತ್ರತಂಡ ಮುಂದೆ ಟೀಸರ್ ಹಾಗೂ ಟ್ರೈಲರ್‌ಗಳನ್ನು ಇತರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಿ ಗೊಂದಲವನ್ನು ನಿವಾರಿಸಲಿದೆಯಾ ಕಾದು ನೋಡಬೇಕಿದೆ.


Click it and Unblock the Notifications











