ಐಷಾರಾಮಿ ಕಾರುಗಳ ಅಕ್ರಮ ಸಾಗಣೆ ದುಲ್ಖರ್-ಪೃಥ್ವಿರಾಜ್ ಮನೆ ಮೇಲೆ ಕಸ್ಟಮ್ ಅಧಿಕಾರಿಗಳ ದಾಳಿ; ಸಿಕ್ಕಿದೇನು?
'ಆಪರೇಷನ್ ನುಮ್ಕೂರ್'ನ ಮುಂದುವರೆದ ಭಾಗವಾಗಿ ಮಲಯಾಳಂ ಸ್ಟಾರ್ ನಟರಾದ ಪೃಥ್ವಿರಾಜ್ ಸುಕುಮಾರನ್ ಹಾಗೂ ದುಲ್ಕರ್ ಸಲ್ಮಾನ್ ಮನೆಗಳ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಷಾರಾಮಿ ಕಾರುಗಳ ಸ್ಮಗ್ಲಿಂಗ್ ಹಿನ್ನೆಲೆಯಲ್ಲಿ 'ಆಪರೇಷನ್ ನುಮ್ಕೂರ್' ಅನ್ನು ಕಸ್ಟಮ್ ಅಧಿಕಾರಿಗಳು ನಡೆಸುತ್ತಿದ್ದಾರೆ.
ಐಷಾರಾಮಿ ಕಾರುಗಳಿಗೆ ದುಬಾರಿ ತೆರಿಗೆ ಪಾವತಿಸದೆ ಭೂತಾನ್ ದೇಶದ ಮೂಲಕ ಭಾರತಕ್ಕೆ ಸಾಗಾಟ ಮಾಡುತ್ತಿರುವುದು ಕಸ್ಟಮ್ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದೇಶಾದ್ಯಂತ 'ಆಪರೇಷನ್ ನುಮ್ಕೂರ್' ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯ ಭಾಗವಾಗಿ ಮಲಯಾಳಂ ಇಬ್ಬರು ಸ್ಟಾರ್ ನಟರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

ಮಲಯಾಳಂ ಸಿನಿಮಾರಂಗದಲ್ಲಿ ಈ ಇಬ್ಬರೂ ನಟರು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ 'ಲೋಕಾ' ಸಿನಿಮಾ 270 ಕೋಟಿ ರೂ. ಗಳಿಸಿ ಮಲಯಾಳಂ ಚಿತ್ರರಂಗದಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದಿತ್ತು. ಹಾಗೇ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟಿಸಿದ ಸೂಪರ್ ಹಿಟ್ ಸಿನಿಮಾ 'ಎಂಪೂರಾನ್ 2'ಗೆ ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಕಟ್ ಹೇಳಿದ್ದರು. ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ.
₹270 ಕೋಟಿ ಗಳಿಸಿದ 'ಲೋಕಾ' ಸಿನಿಮಾದ ನಿರ್ಮಾಪಕ ದುಲ್ಕರ್ ಸಲ್ಮಾನ್ ಅನ್ನೋದು ಗಮನಿಸಬೇಕಾದ ಅಂಶ. ಮಲಯಾಳಂ ಚಿತ್ರರಂಗದಲ್ಲಿ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣುತ್ತಿದ್ದಂತೆ ಭಾರಿ ಅಕ್ರಮಗಳು ನಡೆಯುತ್ತಿವೆ ಎಂಬ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ. ದೇವರಾದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆ ಹಾಗೂ ಪನಂಪಿಲ್ಲಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಅವರ ಮನೆಯಲ್ಲಿ ಈ ದಾಳಿ ಮಾಡಲಾಗಿದೆ.

ತಿರುವನಂತಪುರಂನಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆಗೆ ತೆರಳಿದ್ದ ತಂಡಕ್ಕೆ ಅಲ್ಲಿ ವಾಹನಗಳು ಸಿಗದ ಕಾರಣ ಹಿಂತಿರುಗಿದ್ದಾರೆ ಎನ್ನಲಾಗಿದೆ. ಹಾಗೇ ಕೇರಳದ ಸುಮಾರು 30 ಸ್ಥಳಗಳಲ್ಲಿ ತನಿಖೆಗಳು ನಡೆಯುತ್ತಿವೆ. ವಿದೇಶಗಳಿಂದ ಭೂತಾನ್‌ಗೆ ಐಷಾರಾಮಿ ವಾಹನಗಳನ್ನು ಆಮದು ಮಾಡಿಕೊಳ್ಳಲು ಕೆಲವು ವಿನಾಯಿತಿಗಳಿವೆ. ಆ ಬಳಿಕ ಈ ವಾಹನಗಳನ್ನು ನಕಲಿ ವಿಳಾಸಗಳಲ್ಲಿ ನೋಂದಾಯಿಸಿ ಭಾರತದ ವಿವಿಧ ಭಾಗಗಳಿಗೆ ಸಾಗಿಸಲಾಗುತ್ತದೆ. ಈ ಕಳ್ಳಸಾಗಣೆ ಒಪ್ಪಂದಗಳನ್ನು ರಹಸ್ಯವಾಗಿ ಮಾಡಿ ಕೊಡಲು ಭಾರತದಲ್ಲಿ ಏಜೆಂಟರಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಈ ಏಜೆಂಟರನ್ನು ಕೆಲ ಸಮಯದಿಂದ ಸೂಕ್ಷ್ಮವಾಗಿ ಗಮನಿಸುತ್ತಿತ್ತು ಎನ್ನಲಾಗಿದೆ.
ಇನ್ನೊಂದು ಮೂಲದ ಪ್ರಕಾರ, ದುಲ್ಖರ್ ಸಲ್ಮಾನ್ ಇತ್ತೀಚೆಗೆ ನಟಿಸಿದ 'ಲಕ್ಕಿ ಭಾಸ್ಕರ್' ಸಿನಿಮಾ ನಿಸಾನ್ ಕಾರುಗಳನ್ನು ಬಳಸಲಾಗಿತ್ತು. ಈ ಕಾರುಗಳನ್ನು ಕೂಡ ಸೀಸ್ ಮಾಡಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಕಸ್ಟರ್ ಅಧಿಕಾರಿಗಳ ಪಟ್ಟಿಯಲ್ಲಿ ಸಿಕ್ಕ ಹೆಸರುಗಳ ಪ್ರಕಾರ, ಸಿನಿಮಾ ತಾರೆಯರು ಮತ್ತು ಇತರ ಶ್ರೀಮಂತ ಉದ್ಯಮಿಗಳ ಹೆಸರುಗಳು ಈ ಪಟ್ಟಿಯಲ್ಲಿ ಇದ್ದವು ಎಂದು ಹೇಳಲಾಗಿದೆ. ಭೂತಾನ್‌ನಿಂದ ಆಮದು ಮಾಡಿಕೊಂಡ ವಾಹನಗಳನ್ನು ತೆರಿಗೆ ತಪ್ಪಿಸಲು ಭಾರತದಲ್ಲಿ ಹಳೆಯ ವಾಹನಗಳಾಗಿ ನೋಂದಾಯಿಸಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳ ಗಮನಕ್ಕೆ ಬಂದ ಮೇಲೆ ಈ ದಾಳಿ ಮಾಡಲಾಗಿದೆ.


Click it and Unblock the Notifications











