ನಟ ನಿವಿನ್ ಪೌಲಿ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್
ಮಲಯಾಳಂ ನಟ ನಿವಿನ್ ಪೌಲಿ ಮೇಲೆ ಇತ್ತೀಚೆಗೆ ಗಂಭೀರ ಆರೋಪ ಕೇಳಿಬಂದಿತ್ತು. ನಟ ನನಗೆ ಕಿರುಕುಳ ನೀಡಿದ್ದಾನೆ, ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ದೂರು ನೀಡಿದ್ದರು. ಆದರೆ ಈ ಆರೋಪವನ್ನು ನಿವಿನ್ ಪೌಲಿ ಅಲ್ಲಗಳೆದಿದ್ದರು. ತಮ್ಮ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು.
ಇತ್ತೀಚೆಗೆ ಎರ್ನಾಕುಲಂ ಗ್ರಾಮಾಂತರ ಎಸ್‌ಪಿಗೆ ಯುವತಿಯೊಬ್ಬರು ದೂರು ನೀಡಿದ್ದರು. ಅವಕಾಶ ಕೊಡಿಸುವುದಾಗಿ ಹೇಳಿ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ನಿರ್ಮಾಪಕ, ನಿರ್ದೇಶಕ ಸೇರಿ ಕೆಲವರು ಕಿರುಕುಳ ನೀಡಿದ್ದರು. ದುಬೈನಲ್ಲಿ ಈ ಕಹಿ ಘಟನೆ ಎದುರಾಗಿತ್ತು ಎಂದು ಆಕೆ ದೂರಿನಲ್ಲಿ ತಿಳಿಸಿದ್ದರು. ಪ್ರಕರಣದಲ್ಲಿ ನಟ ನಿವಿನ್ ಪೌಲಿ 6ನೇ ಆರೋಪಿ ಆಗಿದ್ದರು.

ಯುವತಿ ಆರೋಪದ ಬೆನ್ನಲ್ಲೇ ದೂರು ದಾಖಲಿಸಿಕೊಳ್ಳುವಂತೆ ಓನ್ನುಕಲ್ ಪೊಲೀಸರಿಗೆ ಎಸ್‌ಪಿ ಸೂಚಿಸಿದ್ದರು. ತಮ್ಮ ಮೇಲೆ ಗುರುತರ ಆರೋಪ ಕೇಳಿಬರುತ್ತಿದ್ದಂತೆ ನಟ ನಿವಿನ್ ಪೌಲಿ ಪ್ರತಿಕ್ರಿಯಿಸಿದ್ದರು. ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು. ಡಿಸೆಂಬರ್ 14 ಮತ್ತು 15 ರಂದು ದುಬೈನಲ್ಲಿ ನಿವಿನ್ ಪೌಲಿ ಮತ್ತು ಇತರ ಆರು ಮಂದಿ ತನ್ನ ತನಗೆ ಕಿರುಕುಳ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದರು.
ನಿವಿನ್ ಪೌಲಿ ಡಿಸೆಂಬರ್ 14 ಮತ್ತು 15 ರಂದು ನಾನು ದುಬೈನಲ್ಲಿ ಇರಲಿಲ್ಲ ಎಂದು ವಾದಿಸಿದ್ದಾರೆ. ಅದಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ. ಇದರಿಂದ ಸಹಜವಾಗಿಯೇ ಮಹಿಳೆ ಆರೋಪದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆ ಸಮಯದಲ್ಲಿ ನಿವಿನ್ ಕೇರಳದಲ್ಲಿದ್ದುದನ್ನು ಚಿತ್ರ ನಿರ್ಮಾಪಕ ವಿನೀತ್ ಶ್ರೀನಿವಾಸನ್ ಮತ್ತು ಇತರರು ಖಚಿತಪಡಿಸಿದ್ದಾರೆ.
ಮಹಿಳೆಯ ಹೇಳಿಕೆಯನ್ನು ಕೇರಳ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ದಾಖಲಿಸಿಕೊಂಡಿದೆ. ಘಟನೆ ನಡೆದ ದಿನಾಂಕದ ಬಗ್ಗೆ ಗೊಂದಲ ಶುರುವಾಗುತ್ತಿದ್ದಂತೆ ಮಹಿಳೆ ಹೊಸ ವಾದವನ್ನು ಮುಂದಿಟ್ಟಿದ್ದಾರೆ. ನಾನು ದೂರು ನೀಡುವ ವೇಳೆ ಘಟನೆ ನಡೆದ ದಿನಾಂಕದ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದರೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಒಂದು ದಿನಾಂಕ ಹೇಳಿದ್ದೆ. ಆಗ ನಾನು ಅರೆ ನಿದ್ರಾವಸ್ಥೆಯಲ್ಲಿದ್ದೆ. ಹಾಗಾಗಿ ಆ ದಿನಾಂಕ ಹೇಳಿದ್ದೆ ಎಂದಿದ್ದಾರೆ.
ಸದ್ಯ ಅಧಿಕಾರಿಗಳು ನನ್ನ ಹಾಗೂ ನಿವಿನ್ ಪೌಲಿ ಪಾರ್ಸ್‌ಪೋರ್ಟ್ ಪಡೆದುಕೊಂಡಿದ್ದಾರೆ. ಅದರಲ್ಲಿ ನಾವು ದುಬೈನಲ್ಲಿ ಇದ್ದ ಬಗ್ಗೆ ಮಾಹಿತಿ ಸಿಗುತ್ತದೆ. ತನಿಖೆ ಮುಂದುವರೆಯಲಿ ಎಂದು ಮಹಿಳೆ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.
ಇನ್ನು ನಟ ನಿವಿನ್ ಪೌಲಿ ತಮ್ಮ ಮೇಲೆ ಆರೋಪ ಮಾಡಿರುವ ಮಹಿಳೆ ವಿರುದ್ಧ ಪ್ರತಿದೂರು ನೀಡಿದ್ದಾರೆ. ಮಾನಹಾನಿ ಪ್ರಕರಣ ದಾಖಲಿಸುವ ಬಗ್ಗೆಯೂ ಮಾತನಾಡಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಲ್ಲಿ ನಿವಿನ್ ಪೌಲಿ ನಟಿಸಿದ್ದಾರೆ. ಖ್ಯಾತ ನಟನ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವುದು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೇಮಾ ಕಮಿಟಿ ವರದಿ ಬೆನ್ನಲ್ಲೇ ಮಲಯಾಳಂ ಚಿತ್ರರಂಗದಲ್ಲಿ ಹಲವರು ವಿರುದ್ಧ ಆರೋಪ ಕೇಳಿಬರುತ್ತಿದೆ. ಮೀಟು ಅಭಿಯಾನದಲ್ಲಿ ಕೆಲ ನಟಿಯರು ತಮಗಾದ ಕಹಿ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಮಾಲಿವುಡ್ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್ ಲಾಲ್ ರಾಜಿನಾಮೆ ನೀಡಿದ್ದಾರೆ.


Click it and Unblock the Notifications











