'AMMA'ಗೆ ಗುಡ್ ಬೈ ಹೇಳಿದ 'ಮಿಲನ' ಪಾರ್ವತಿ: ಕಾರಣವೇನು?
ಮಲಯಾಳಂ ಖ್ಯಾತಿ ಪಾರ್ವತಿ ತಿರುವೊತ್ತು AMMA (ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್)ಗೆ ರಾಜಿನಾಮೆ ನೀಡಿದ್ದಾರೆ. ಸೋಮವಾರ AMMAಗೆ ಗುಡ್ ಬೈ ಹೇಳಿರುವ ಬಗ್ಗೆ ನಟಿ ಪಾರ್ವತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
AMMA ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಡವೆಲಾ ಬಾಬು ಮಹಿಳಾ ಕಲಾವಿದೆಯ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪಾರ್ವತಿ ರಾಜಿನಾಮೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ AMMA ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಡವೆಲಾ ಬಾಬು ನಟಿ ಭಾವನಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಬು ಮಾತು ಈಗ ಮಲಯಾಳಂ ಸಿನಿಮಾರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ.

ಭಾವನಾ ಬಗ್ಗೆ ಎಡವೆಲಾ ಬಾಬು ಹೇಳಿದ್ದೇನು?
AMMA ನಿರ್ಮಾಣ ಮಾಡುತ್ತಿರುವ ಟ್ವಂಟಿ:20 ಸಿನಿಮಾದ ಎರಡನೇ ಭಾಗದಲ್ಲಿ ಭಾವನಾ ಪಾತ್ರವಿದೆಯೇ? ಎಂದು ಕೇಳಿದ ಪ್ರಶ್ನೆಗೆ ಬಾಬು,'ಭಾವನಾ ಪ್ರಸ್ತುತ AMMAದ ಭಾಗವಾಗಿಲ್ಲ ಎಂದು ನಾನು ಹೇಳಬಲ್ಲೆ. ಮೊದಲ ಭಾಗದಲ್ಲಿ ಉತ್ತಮ ಪಾತ್ರವನ್ನು ಮಾಡಿದ್ದಾರೆ. ಸತ್ತವನ್ನು ಮರಳಿ ತರಲು ಸಾಧ್ಯವಿಲ್ಲ. AMMAದ ಭಾಗವಾಗಿರುವ ಕಲಾವಿದರನ್ನು ಸೇರಿಸಿಕೊಳ್ಳಬಹುದು' ಎಂದು ಹೇಳಿದ್ದಾರೆ.

ಹೇಳಿಕೆ ಸಮರ್ಥಿಸಿಕೊಂಡ ಬಾಬು
ಬಾಬು ಸತ್ತವನ್ನು ಮರಳಿ ಕರೆತರಲು ಸಾಧ್ಯವಿಲ್ಲ ಎಂದು ಹೇಳಿದ ಮಾತು ವಿವಾದ ಸೃಷ್ಟಿ ಮಾಡಿದೆ. ಮಹಿಳಾ ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಿದ ಬಾಬು ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವಿವಾದದ ಬಳಿಕ ಬಾಬು 'ಟ್ವೆಂಟಿ: 20 ಸಿನಿಮಾದ ಮೊದಲ ಭಾಗದಲ್ಲಿ ಭಾವನಾ ಪಾತ್ರ ಸತ್ತು ಹೋಗಿದೆ. ಮೊದಲ ಭಾಗದಲ್ಲಿ ಸತ್ತು ಹೋದ ಪಾತ್ರವನ್ನು ಎರಡನೇ ಭಾಗದಲ್ಲಿ ಕರೆತರಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಹೇಳಿರುವುದಾಗಿ ಬಾಬು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಾರ್ವತಿ ತಿರುವೊತ್ತು ಆಕ್ರೋಶ
ಇಷ್ಟೆಲ್ಲ ಬೆಳವಣಿಗೆಗಳ ನಡುವೆ ನಟಿ ಪಾರ್ವತಿ AMMAಗೆ ರಾಜಿನಾಮೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. '2018ರಲ್ಲಿ ನನ್ನ ಸ್ನೇಹಿತರು ರಾಜಿನಾಮೆ ನೀಡಿದಾಗ, ಕನಿಷ್ಠ ಕೆಲವರಿಂದ ಆದರೂ ಈ ಹಾಳಾದ ವ್ಯವಸ್ಥೆಯನ್ನು ಸರಿ ಮಾಡಬಹುದು ಎಂದು ಯೋಚಿಸಿ ಮುಂದುವರೆದೆ. ಆದರೆ ಪ್ರಧಾನ ಕಾರ್ಯದರ್ಶಿ ರಿಪೋರ್ಟರ್ ಜೊತೆ ಮಾತನಾಡಿರುವುದನ್ನು ನೋಡಿದ
ಬಳಿಕ, ಈ ಸಂಘದಲ್ಲಿ ಏನಾದರು ಬದಲಾವಣೆಯಾಗುತ್ತೆ ಅಂತ ಇದ್ದ ಭರವಸೆ ಹೊರಟುಹೋಗಿದೆ. ಈ ಸಂಸ್ಥೆ ತೊರೆದ ಮಹಿಳಾ ಸದಸ್ಯರಿಗೆ ಸತ್ತೋಗಿದ್ದಾರೆ ಎಂದು ಹೇಳುವುದು ಮರಣದಂಡನೆ ಹೇಳಿಕೆಯ ತಿದ್ದುಪಡಿಗೂ ಮೀರಿದೆ' ಎಂದು ಹೇಳಿದ್ದಾರೆ.
Recommended Video

ಎಡವೆಲಾ ಬಾಬು ರಾಜಿನಾಮೆಗೆ ಒತ್ತಾಯ
'ಬಾಬು ಅವರು ರೂಪಕ ಬಳಸಿದ್ದಾರೆಂದು ನಂಬಬಹುದು. ಆದರೆ ಅದು ಅವರ ಕೆಟ್ಟ ಮನೋಭಾವನ್ನು ತೋರಿಸುತ್ತಿದೆ. ನಾನು ಅವರಿಗೆ ಕರುಣೆ ತೋರುತ್ತೇನೆ. ಈ ವಿಚಾರ ಚರ್ಚಿಸಲು ಪ್ರಾರಂಭಿಸಿದಾಗ ಅನೇಕರು ಅವರನ್ನು ಬೆಂಬಲಿಸುತ್ತಾರೆ ಎಂದು ನನಗೆ ಗೊತ್ತು.' ಎಂದಿದ್ದಾರೆ.
ಎರಡು ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ನಟಿ ಪಾರ್ವತಿ ಎಡವೆಲಾ ಬಾಬು ರಾಜಿನಾಮೆಗೆ ಒತ್ತಾಯಿಸಿದ್ದಾರೆ. ಜೊತೆಗೆ AMMAದ ಸದಸ್ಯರು ರಾಜಿನಾಮೆಗೆ ಒತ್ತಾಯಮಾಡಬೇಕೆಂದು ಹೇಳಿದ್ದಾರೆ.

Click it and Unblock the Notifications











