ನಯನತಾರ VS ಧನುಷ್ ; ಲೇಡಿ ಸೂಪರ್ ಸ್ಟಾರ್ ಬಗ್ಗೆ ಹೇಳಿದ್ದೇನು ಮಿಲನಾ ನಾಯಕಿ ಪಾರ್ವತಿ ಮೆನನ್...?
ಪಾರ್ವತಿ ತಿರುವೋತ್ತು ಅಲಿಯಾಸ್ ಪಾರ್ವತಿ ಮೆನನ್.. ಕನ್ನಡಿಗರಿಗೆ ಅಪರಿಚತರೇನಲ್ಲ. ಪುನೀತ್ ರಾಜ್ ಕುಮಾರ್ ಅಭಿನಯದ ''ಮಿಲನ'' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ''ಮಳೆ ಬರಲಿ ಮಂಜೂ ಇರಲಿ''.. ''ಪೃಥ್ವಿ''.. ಮತ್ತು ''ಅಂದರ್ ಬಾಹರ್'' ಚಿತ್ರಗಳಲ್ಲಿ ನಟಿಸಿದರು. ಕನ್ನಡಿಗರ ಹೃದಯವನ್ನೂ ಗೆದ್ದರು
ಇನ್ನೂ ಮಾಲಿವುಡ್‌ನ ಈ ಬಟ್ಟಲುಗಣ್ಣಿನ ಚೆಲುವೆ ಕೇವಲ ತಮ್ಮ ಅಭಿನಯದಿಂದ ಮಾತ್ರ ಹೆಸರುವಾಸಿಯಾಗಿಲ್ಲ. ಬದಲಿಗೆ ತಮ್ಮ ನೇರ ಹಾಗೂ ದಿಟ್ಟ ನುಡಿಗಳಿಂದ ಕೂಡ ಹೆಸರುವಾಸಿಯಾದವರು ಇವರು. ಮಲಯಾಳಂನ ಸ್ಟಾರ್ ಒಬ್ಬರ ವಿರುದ್ಧ ನೇರಾನೇರವಾಗಿಯೇ ವಾಗ್ದಾಳಿ ನಡೆಸಿದ್ದ ಪಾರ್ವತಿ ವಿರುದ್ಧ ಆ ಸ್ಟಾರ್ ಅಭಿಮಾನಿಗಳು ಆ ನಂತರ ಸೈಬರ್ ಯುದ್ಧವನ್ನೇ ಸಾರಿದ್ದರು. ಆದರೆ ಪಾರ್ವತಿ ಮಾತ್ರ ಕುಗ್ಗಲಿಲ್ಲ. ಎದೆಗುಂದಲಿಲ್ಲ. 'ಉಯರೆ'ಯಂತಹ ಸಿನಿಮಾ ಮೂಲಕ ಮತ್ತೆ ಮಾಲಿವುಡ್‌ನಲ್ಲಿ ಪುಟಿದೆದ್ದವರು ಪಾರ್ವತಿ. ಇಷ್ಟೇ ಅಲ್ಲ ಮಲಯಾಳಂ ಚಿತ್ರರಂಗದಲ್ಲಿನ ಕಾಮಕಾಂಡವನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರವನ್ನು ಕೂಡ ನಿರ್ವಹಿಸಿದವರು ಪಾರ್ವತಿ ಮೆನನ್.

ಇಂಥ ಪಾರ್ವತಿ ಮೆನನ್ ಮೊನ್ನೆ ಧನುಷ್ ವಿರುದ್ಧ ನಯನತಾರ ಬಹಿರಂಗವಾಗಿ ಸಮರ ಸಾರಿದಾಗ ನಯನತಾರಾ ಪರ ಬೆಂಬಲದ ಧ್ವಜ ಹಾರಿಸಿದ್ದರು. ನಯನತಾರಾ ಬರೆದ ಮೂರು ಪತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಧನುಷ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಪಾರ್ವತಿ ಮೆನನ್ ತಮ್ಮ ಈ ನಡೆಯ ಹಿಂದಿನ ಕಾರಣವನ್ನು ಹೇಳಿದ್ದಾರೆ. ನಯನತಾರ ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.
ಈ ಕುರಿತು 'ಮನೋರಮಾ ನ್ಯೂಸ್'ಗೆ ಸಂದರ್ಶನ ನೀಡಿರುವ ಪಾರ್ವತಿ ಮೆನನ್, ನಯನತಾರ ಹಂತ ಹಂತವಾಗಿ ಮೇಲೆ ಬಂದವರು. ಚಿತ್ರರಂಗದಲ್ಲಿ ಎದ್ದು-ಬಿದ್ದು-ಗೆದ್ದವರು. ಆಳ ಅಗಲವನ್ನು ಚೆನ್ನಾಗಿ ಅರಿತವರು. ಇನ್ನೂ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದಿಗೆ ನಯನತಾರಾ ಸೂಕ್ತವಾದ ವ್ಯಕ್ತಿ. ಇಂತಹ ವ್ಯಕ್ತಿ ಒಬ್ಬರ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದರೆ ವಿಚಾರ ಗಂಭೀರವಾಗಿದೆ ಎಂದೇ ಅರ್ಥ ಎಂದಿದ್ದಾರೆ. ಸುಖಾ ಸುಮ್ಮನೆ ಬಾಯಿಗೆ ಬಂದಂತೆ ಯಾವತ್ತು ಮಾತನಾಡದ ನಯನತಾರಾ ಬಹಿರಂಗವಾದ ಮೂರು ಪುಟಗಳ ಪತ್ರ ಬರೆದಿದ್ದಾರೆ ಅಂದರೆ ಅಲ್ಲಿ ನಿಜಕ್ಕೂ ಸಮಸ್ಯೆ ಇದೆ ಎಂದೇ ಅರ್ಥ ಎಂದು ಹೇಳಿದ್ದಾರೆ.
ಇನ್ನು, ಧನುಷ್ ಮೇಲೆ ನಯನತಾರಾ ಆರೋಪ ಮಾಡಿದ ಬೆನ್ನಲ್ಲಿಯೇ ನಯನತಾರ ವಿರುದ್ಧ ಧನುಷ್ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ನಯನತಾರ ಅವರನ್ನು ನಿಂದಿಸುತ್ತಿದ್ದಾರೆ. ತೀರಾ ಕೀಳಾಗಿ ಟ್ರೋಲ್ ಮಾಡುತ್ತಿದ್ದಾರೆ. ಈ ವಿಚಾರದ ಕುರಿತು ಕೂಡ ಮಾತನಾಡಿರುವ ಪಾರ್ವತಿ ಮೆನನ್, ಯಾರೇ ಆಗಿರಲಿ ಆರಂಭದಲ್ಲಿ ಈ ತರಹದ ಸೈಬರ್ ದಾಳಿ ನಡೆದಾಗ ಮಾನಸಿಕ ಆಘಾತವಾಗುತ್ತೆ. ನೋವಾಗುತ್ತೆ. ಆದರೆ ನಯನತಾರ ಇವೆಲ್ಲ ಸೈಬರ್ ದಾಳಿಯನ್ನು, ಟ್ರೋಲ್‌ಗಳನ್ನೇದುರಿಸಿಕೊಂಡು ಬಂದಿದ್ದಾರೆ. ಮುನ್ನಡೆದಿದ್ದಾರೆ. ಹೀಗಾಗಿಯೇ ಲೇಡಿ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು ನಯನತಾರ ಅವರು ಬರೆದ ಪತ್ರ ಓದಿದ ತಕ್ಷಣ ಬೆಂಬಲಿಸಬೇಕೆಂಬ ಭಾವನೆ ನನಗೆ ಬಂತು ಈ ಕಾರಣಕ್ಕೆ ನಾನು ನಯನತಾರ ಪರ ನಿಂತುಕೊಂಡಿದ್ದೇನೆ ಎಂದು ಹೇಳಿರುವ ಪಾರ್ವತಿ ಮೆನನ್, ನಾನು ಸದಾ ಜನರ ಪರ ನಿಲ್ಲುತ್ತೇನೆ. ಅದರಲ್ಲಿಯೂ ಮಹಿಳೆಯರಾಗಿದ್ದರೆ ನನ್ನ ಬೆಂಬಲ ಸದಾ ಅವರಿಗೆ ಇದ್ದೇ ಇರುತ್ತೆ ಎಂದು ಹೇಳಿದ್ದಾರೆ. ಚಿತ್ರರಂಗದಲ್ಲಿ ಈ ವಿಚಾರದಲ್ಲಿ ಕೆಲವರು ಮೌನಕ್ಕೆ ಶರಣಾಗಿದ್ದಾರೆ ಅವರ ಬಗ್ಗೆ ನಾವೇನು ಹೇಳಲು ಸಾಧ್ಯ ಇಲ್ಲ. ಮಾತನಾಡಿಯೆಂದು ಒತ್ತಾಯವನ್ನು ಮಾಡಲು ಕೂಡ ಆಗುವುದಿಲ್ಲ ಎಂದು ಕೂಡ ಪಾರ್ವತಿ ಮೆನನ್ ಹೇಳಿದ್ದಾರೆ.


Click it and Unblock the Notifications











