"7 ವರ್ಷಗಳಿಂದ ಕಿರುಕುಳ ಅನುಭವಿಸುತ್ತಿದ್ದೇನೆ"; ಪೃಥ್ವಿರಾಜ್ ಸುಕುಮಾರನ್ ಪತ್ನಿ ಆವೇದನೆ
ಸೋಶಿಯಲ್ ಮೀಡಿಯಾ ಕಿರುಕುಳ ಎನ್ನುವುದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದರ್ಶನ್ ಅಭಿಮಾನಿಗಳು ನನಗೆ ಕೆಟ್ಟದಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ರಮ್ಯಾ ದೂರು ನೀಡಿದ್ದಾರೆ. ನಟ ಪ್ರಥಮ್ ಕೂಡ ಟ್ರೋಲ್ಸ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪತ್ನಿ ಸುಪ್ರಿಯಾ ಮೆನನ್ ತಮ್ಮ ನೋವು ತೋಡಿಕೊಂಡಿದ್ದಾರೆ.
7 ವರ್ಷಗಳಿಂದ ಮಹಿಳೆ ಒಬ್ಬರು ನನಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸುಪ್ರಿಯಾ ಮೆನನ್ ಆವೇದನೆ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದಷ್ಟು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಕ್ರಿಸ್ಟಿನಾ ಎಂಬಾಕೆ ನನಗೆ ಪದೇ ಪದೆ ಮೆಸೇಜ್ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"2018ರಿಂದ ಆನ್‌ಲೈನ್ ಟ್ರೋಲ್ಸ್, ಕಿರುಕುಳ ಎದುರಿಸುತ್ತಿದ್ದೇನೆ. ನನ್ನನ್ನು ಟಾರ್ಗೆಟ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಅಕೌಂಟ್‌ಗಳನ್ನು ಕ್ರಿಯೇಟ್ ಮಾಡಿರುವ ಈ ಮಹಿಳೆ ನನ್ನನ್ನು ಟ್ಯಾಗ್ ಮಾಡಿ ಏನೇನೋ ಪೋಸ್ಟ್ ಮಾಡುತ್ತಾನೆ. ಆಕೆಯ ಹೆಸರು ಕ್ರಿಸ್ಟಿನಾ. ಆಕೆ ನನ್ನ ಬಗ್ಗೆ ಮಾಡುವ ಪೋಸ್ಟ್‌ಗಳೆಲ್ಲಾ ಬಹಳ ಅವಹೇಳಕಾರಿಯಾಗಿರುತ್ತದೆ. ನಾನು ಆಕೆಯ ಅಕೌಂಟ್ ಬ್ಲಾಕ್ ಮಾಡಿದರೂ ಮತ್ತೆ ಹೊಸ ಅಕೌಂಟ್ ಕ್ರಿಯೇಟ್ ಮಾಡಿ ಪೋಸ್ಟ್ ಮಾಡುತ್ತಾಳೆ" ಎಂದು ಸುಪ್ರಿಯಾ ಮೆನನ್ ತಿಳಿಸಿದ್ದಾರೆ.
ಆಕೆ ಯಾರು ಎನ್ನುವುದು ನನಗೆ ಬಹಳ ಹಿಂದೆಯೇ ಗೊತ್ತಾಯಿತು. ಆದರೂ ಇಷ್ಟ ವರ್ಷ ಸುಮ್ಮನಿದ್ದೆ. ಅದಕ್ಕೂ ಒಂದು ಕಾರಣ ಇದೆ ಎಂದು ಸುಪ್ರಿಯಾ ಹೇಳಿದ್ದಾರೆ. "ಆಕೆಗೆ ಒಬ್ಬ ಚಿಕ್ಕ ಮಗನಿದ್ದಾನೆ. ಹಾಗಾಗಿ ಇಷ್ಟು ದಿನ ಸುಮ್ಮನಿದ್ದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ನನ್ನ ಬಗ್ಗೆ ಟಾರ್ಗೆಟ್ ಮಾಡುತ್ತಿದ್ದಾಳೆ. ಕೊನೆಗೆ ಕೊನೆಯುಸಿರೆಳೆದ ನನ್ನ ತಂದೆಯನ್ನು ಟಾರ್ಗೆಟ್ ಮಾಡಿ ಕೆಟ್ಟದಾಗಿ ಕಾಮೆಂಟ್ ಮಾಡಿದಳು. ಹಾಗಾಗಿ ಆಕೆಯ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದೇನೆ" ಎಂದು ಹೇಳಿದ್ದಾರೆ. ಸುಪ್ರಿಯಾ ಆರೋಪ ಮಾಡುತ್ತಿರುವ ಮಹಿಳೆ ಪ್ರಸ್ತುತ ಅಮೆರಿಕದಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಈಟೈಮ್ಸ್ ವರದಿ ಮಾಡಿದೆ.

2011ರಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ಹಾಗೂ ಸುಪ್ರಿಯಾ ಮೆನನ್ ಮದುವೆ ನಡೆದಿತ್ತು. NDTV ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರು ಸುಪ್ರಿಯಾ. ಮೂಲತಃ ಮಲಯಾಳಿ ಆಗಿದ್ದರು ಮುಂಬೈನಲ್ಲಿ ಆಕೆ ನೆಲೆಸಿದ್ದರು. ಒಮ್ಮೆ ಮಲಯಾಳಂ ಚಿತ್ರರಂಗದ ಬಗ್ಗೆ ಸುದ್ದಿ ಮಾಡಬೇಕು ಎಂದಾಗ ಸ್ನೇಹಿತರೊಬ್ಬರು ಆಗಷ್ಟೆ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದ ಪೃಥ್ವಿರಾಜ್ ನಂಬರ್ ಕೊಟ್ಟಿದ್ದರು. ಹೀಗೆ ಪೃಥ್ವಿರಾಜ್ ಜೊತೆ ಶುರುವಾಗಿದ್ದ ಪರಿಚಯ ಮುಂದೆ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರೂ ಮದುವೆ ಆಗಿದ್ದರು. BBC ವರದಿಗಾರ್ತಿಯಾಗಿಯೂ ಸುಪ್ರಿಯಾ ಕೆಲಸ ಮಾಡಿದ್ದರು. ಸದ್ಯ ಮುಂಬೈನಲ್ಲೇ ದಂಪತಿ ನೆಲೆಸಿದ್ದಾರೆ.
ಪೃಥ್ವಿರಾಜ್ ಪ್ರೊಡಕ್ಷನ್ಸ್ ಎಂಬ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಸಂಸ್ಥೆಯನ್ನು ಪೃಥ್ವಿರಾಜ್ ಹುಟ್ಟುಹಾಕಿದ್ದಾರೆ. ಅದರ ಜವಾವ್ದಾರಿಯನ್ನು ಪತ್ನಿ ಸುಪ್ರಿಯಾ ನಿಭಾಯಿಸುತ್ತಿದ್ದಾರೆ. 'ಕೆಜಿಎಫ್- 2', 'ಕಾಂತಾರ', '777 ಚಾರ್ಲಿ' ರೀತಿಯ ಕನ್ನಡ ಸಿನಿಮಾಗಳನ್ನು ಇದೇ ಸಂಸ್ಥೆ ಮೂಲಕ ಕೇರಳದಲ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾ ಕಿರುಕುಳದ ಬಗ್ಗೆ ಸುಪ್ರಿಯಾ ಕಾನೂನು ಕ್ರಮ ಕೈಗೊಳ್ಳುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











