ಪಿ.ವಿ.ಆರ್ - ಐನಾಕ್ಸ್ ನಲ್ಲಿ ಇನ್ಮುಂದೆ ಮಲಯಾಳಂ ಚಿತ್ರಕ್ಕಿಲ್ಲ ಜಾಗ ; ಕಾರಣ ಏನ್ಗೊತ್ತಾ..?

ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬ ಮಾತು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಈ ಮಾತು ಕೇಳಿ ಬರ್ತಾನೆ ಇದೆ. ಇನ್ನೂ.. ಮಲ್ಟಿಪ್ಲೆಕ್ಸ್‌ನವರದ್ದು ಕಾಸ್ಟ್ಲೀ ದುನಿಯಾ. ಮೂಗುದಾರ ಹಾಕುವವರು ಯಾರು ಇಲ್ಲ. ಅವರು ಉಂಡಿದ್ದೇ ಉಗಾದಿ.. ಉಟ್ಟಿದ್ದೇ ದೀಪಾವಳಿ.. ಅನ್ನುವುದು ಬಹುತೇಕ ಜನಸಾಮಾನ್ಯರ ಅಭಿಪ್ರಾಯ.

ಇಂಥ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಇಲ್ಲಿಯವರೆಗೆ ಅನೇಕರು ಹೋರಾಡುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರು ಹೋರಾಟಕ್ಕೂ ಮೊದಲೇ ಶಸ್ತ್ರತ್ಯಾಗವನ್ನು ಕೂಡ ಮಾಡಿದ್ದಾರೆ. ಆದರೆ ಮಲಯಾಳಂ ಚಿತ್ರರಂಗ ಮಾತ್ರ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಗಂಭೀರವಾಗಿ ಸಮರ ಸಾರಿದಂತೆ ಇದೆ. ಇದರ ಮುನ್ಸೂಚನೆ ಅನ್ನುವಂತೆ ಮಲಯಾಳಂ ಸಿನಿಮಾಗಳನ್ನ ಇನ್ಮುಂದೆ ಪ್ರದರ್ಶನ ಮಾಡದೇ ಇರಲು ಮಲ್ಟಿಪ್ಲೆಕ್ಸ್ ಜಗತ್ತನ್ನ ಆಳುತ್ತಿರುವ ಪಿ.ವಿ.ಆರ್ ಹಾಗೂ ಐನಾಕ್ಸ್ ನಿರ್ಧರಿಸಿವೆ.

PVR And INOX Has Stopped Screening Of Malayalam Films Across India

ಹೌದು, ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷ ಮಲಯಾಳಂ ಚಿತ್ರರಂಗ ಚಿನ್ನದ ಬೆಳೆಯನ್ನ ಬೆಳೆಯುತ್ತಿದೆ. ಮಂಜುಮ್ಮೆಲ್ ಬಾಯ್ಸ್.. ಪ್ರೇಮಲು.. ಆಡು ಜೀವಿತಂ.. ಹೀಗೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ಮಲಯಾಳಂ ಚಿತ್ರರಂಗ ನೀಡಿದೆ. ಇನ್ನೂ.. ಫಹದ್ ಫಾಸಿಲ್ ಅಭಿನಯದ 'ಆವೇಶಂ' ಮತ್ತು 'ವರ್ಷಂಗಲ್ಕ್ಕು ಶೇಷಂ', ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರ ನಡುವೆ ಮಲ್ಟಿಪ್ಲೆಕ್ಸ್ ನವರ ಮುಂದೆ, ಕೇರಳ ಚಲನಚಿತ್ರ ನಿರ್ಮಾಪಕರ ಸಂಘ ಬೇಡಿಕೆಯನ್ನ ಇಟ್ಟಿದೆ. ನಿಮ್ಮ ನೀತಿ-ನಿಯಮ-ಶುಲ್ಕಗಳನ್ನೆಲ್ಲ ಬದಲಿಸಿಕೊಳ್ಳಿ ಎಂದಿದೆ.

ಹೌದು, ಅಸಲಿಗೆ ಈ ಡಿಜಿಟಲ್ ಯುಗದಲ್ಲಿ ಚಿತ್ರವೊಂದು ನಿರ್ಮಾಣವಾಗಿ, ಬಿಡುಗಡೆ ಸಿದ್ಧವಾದ ನಂತರ.. ಯುಎಫ್​ಒ ಅಥವಾ ಕ್ಯೂಬ್​ಗೆ ಅಪ್​ಲೋಡ್ ಮಾಡಬೇಕು. ಇಲ್ಲಿ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್​ಗೆ ಬೇಕಾದ ರೀತಿಯಲ್ಲಿ ಸಿನಿಮಾದ ಫಾರ್ಮ್ಯಾಟ್​ ಬದಲಾಗುತ್ತೆ. ಆ ನಂತರ ಸಿನಿಮಾ ಥಿಯೇಟರ್​ನಲ್ಲಿ ಪ್ರಸಾರ ಕಾಣುತ್ತೆ. ಈ ಪ್ರಕ್ರಿಯೆಗಾಗಿ ಅನೇಕ ವರ್ಷಗಳಿಂದ ನಿರ್ಮಾಪಕರ ಬಳಿ ಹಣ ದೋಚುವ ವ್ಯವಸ್ಥಿತ ಕೆಲಸ ನಡೆಯುತ್ತಾನೇ ಇದೆ.

PVR And INOX Has Stopped Screening Of Malayalam Films Across India

ಇದೇ ವಿಚಾರಕ್ಕೆ ಅನೇಕ ಬಾರಿ ಅನೇಕರು ಧ್ವನಿ ಎತ್ತಿದ್ದು ಇದೆ. ಆ ಪೈಕಿ ಮಲಯಾಳಂ ಚಿತ್ರರಂಗ ಮೊದಲಿಂದ ಮುಂಚೂಣಿಯಲ್ಲಿಯೇ ಇದೆ. ವರ್ಚುವಲ್ ಪ್ರಿಂಟ್ ಫೀ { VPF } ನಿಂದ ನಿರ್ಮಾಪಕರಿಗೆ ಹಾಗೂ ಚಿತ್ರಮಂದಿರದ ಮಾಲೀಕರಿಗೆ ಲಾಭ ಅನ್ನುವುದು ಮರಿಚೀಕೆಯಾಗಿದೆ ಎಂಬ ಕೂಗು ಹಿಂದಿನಿಂದ ಕೇಳಿ ಬರುತ್ತಾನೆ ಇದೆ.

ಕೇರಳದ ಚಲನಚಿತ್ರ ವಿತರಣಾ ಸಂಘದ ಕಾರ್ಯದರ್ಶಿ ಎವರ್‌ಶೈನ್ ಮಣಿ ಹೇಳುವಂತೆ, ಯುಎಫ್‌ಒ ಹಾಗೂ ಕ್ಯೂಬ್ ಚಿತ್ರಮಂದಿರಗಳಿಗೆ ವರ್ಚುವಲ್ ಪ್ರಿಂಟ್ ಒದಗಿಸಲು ವಾರಕ್ಕೆ 11.500 ರೂಪಾಯಿ ಹಣವನ್ನ ಪೀಕುತ್ತವೆ. ಇನ್ನೂ ಮಲ್ಟಿಪ್ಲೆಕ್ಸ್ ಗಳಲ್ಲಿ ಈ ಮೊತ್ತ 24.500ರೂಪಾಯಿ ಗಡಿಯನ್ನ ದಾಟುತ್ತೆ. ಹೇಗೆ ಲೆಕ್ಕ ಹಾಕಿದರೂ ಒಂದು ಪ್ರದರ್ಶನಕ್ಕೆ 450 ರೂಪಾಯಿ ಖರ್ಚು ಆಗಿಯೇ ಆಗುತ್ತೆ.

ಆದರೂ ಯಾರು ತಲೆಯನ್ನ ಕೆಡಿಸಿಕೊಳ್ಳಲಿಲ್ಲ. ಹೀಗಾಗಿಯೇ ಮಲಯಾಳಂ ನಿರ್ಮಾಪಕರು ಈಗ 'ಪ್ರೊಡ್ಯೂಸರ್ ಡಿಜಿಟಲ್ ಕಂಟೆಂಟ್'ನ {PDC } ಸಿದ್ಧಪಡಿಸಿದ್ದಾರೆ.ಕೊಚ್ಚಿಯಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಯಾದ 09 ಸ್ಕ್ರೀನ್ ಗಳನ್ನೊಂದಿರುವ ಪಿ.ವಿ.ಆರ್ ಐನಾಕ್ಸ್ ಮಲ್ಟಿಪ್ಲೆಕ್ಸ್ ಗಳಲ್ಲಿ ತಮ್ಮ 'ಪ್ರೊಡ್ಯೂಸರ್ ಡಿಜಿಟಲ್ ಕಂಟೆಂಟ್' ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಮಲಯಾಳಂ ಚಿತ್ರ ನಿರ್ಮಾಪಕರ ಈ ಮನವಿಗೆ ಪಿ.ವಿ.ಆರ್ ಮಣೆ ಹಾಕಿಲ್ಲ. ಯುಎಫ್ಒ, ಕ್ಯೂಬ್ ಬದಲು 'ಪ್ರೊಡ್ಯೂಸರ್ ಡಿಜಿಟಲ್ ಕಂಟೆಂಟ್'ನ ಒಪ್ಪಲು ತಯಾರಿಲ್ಲ. ಇದಕ್ಕಾಗಿ ಮತ್ತೆ ಹಣ ಹೂಡಿಕೆ ಮಾಡಲು ಪಿವಿಆರ್​ ರೆಡಿ ಇಲ್ಲ.

ಈ ಕಾರಣಕ್ಕೆ ಕೆರಳಿ ಕೆಂಡವಾಗಿರುವ ಮಲಯಾಳಂ ಚಿತ್ರರಂಗ ತಮ್ಮ ಮನವಿಯನ್ನು ಪುರಸ್ಕರಿಸುವವರೆಗೆ ಪಿವಿಆರ್ ಜೊತೆ ನಾವು ಕೋಆಪರೇಟ್ ಮಾಡುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದೆ. ನಿರ್ಮಾಪಕರ ಜೊತೆ ಹಂಚಿಕೆದಾರರು ಧ್ವನಿಗೂಡಿಸಿರುವ ಕಾರಣ ಸಮಸ್ಯೆ ಇನ್ನೂ ಜಟಿಲವಾಗಿದೆ.

ಹೀಗಾಗಿಯೇ ಮಲಯಾಳಂ ಸಿನಿಮಾಗಳ ಪ್ರಸಾರ ನಿಲ್ಲಿಸಲು ಪಿವಿಆರ್​ ನಿರ್ಧರಿಸಿದೆ. ತೆಲುಗಿಗೆ ಡಬ್ ಆಗಿ ಯಶಸ್ವೀ ಪ್ರದರ್ಶನ ಕಾಣುತ್ತಿದ್ದ ಮಲಯಾಳಂ ಬ್ಲಾಕ್ ಬಸ್ಟರ್ ಸಿನಿಮಾ ಮಂಜುಮ್ಮೆಲ್ ಬಾಯ್ಸ್ ಚಿತ್ರವನ್ನೂ ಪಿವಿಆರ್ ಐನಾಕ್ಸ್ ಹೇಳದೇ ಕೇಳದೇ ಎತ್ತಂಗಡಿ ಮಾಡಿದೆ. ಪಿವಿಆರ್ ಐನಾಕ್ಸ್ ನ ಈ ಧೋರಣೆಯನ್ನ ಖಂಡಿಸಿರುವ ತೆಲುಗು ವಿತರಕರು, ಸದ್ಯಕ್ಕೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. ಪಿವಿಆರ್ ಐನಾಕ್ಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಮಲಯಾಳಂ ಚಿತ್ರಗಳನ್ನ ಪ್ರದರ್ಶಿಸದೇ ಇರಲು ಪಿವಿಆರ್ ಐನಾಕ್ಸ್ ಮುಂದಾಗಿದೆ. ಆ ಕಡೆ ಮಲಯಾಳಂ ಚಿತ್ರರಂಗ ಕೂಡ ಪಟ್ಟು ಸಡಿಲಿಸದೇ ಕುಳಿತಿದೆ. ಈ ಹಗ್ಗ ಜಗ್ಗಾಟದ ಫಲಿತಾಂಶ ಏನಾಗಲಿದೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ.

More from Filmibeat

English summary
Over the past few days, screening giant PVR-INOX have stopped screening Malayalam films across India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X