"ಇದೇ ಸಿನ್ಮಾ ಮಲಯಾಳಂನಲ್ಲಿ ಬಂದಿದ್ರೆ ನೋಡ್ತಿದ್ರಿ, ಎನ್ನುವುದು ನಮ್ಮ ಅಸೂಯೆ"; ರಾಜ್ ಬಿ ಶೆಟ್ಟಿ
ಕನ್ನಡ ಚಿತ್ರರಂಗ ಸದ್ಯ ಸಂಕಷ್ಟದಲ್ಲಿದೆ. ಎಲ್ಲಾ ಸಿನಿಮಾಗಳು ಗೆಲ್ಲುತ್ತಿಲ್ಲ. ಈ ವರ್ಷ ಕನ್ನಡ ಸಿನಿಮಾಗಳ ಸಾಧನೆ ಹೇಳಿಕೊಳ್ಳುವಂತಿಲ್ಲ. ಒಳ್ಳೆಯ ಸಿನಿಮಾಗಳನ್ನು ಜನ ಚಿತ್ರಮಂದಿರಕ್ಕೆ ಬಂದು ನೋಡುತ್ತಿಲ್ಲ ಎನ್ನುವ ಆರೋಪವೂ ಇದೆ.
ಈ ವರ್ಷ ಮಲಯಾಳಂ ಚಿತ್ರಗಳು ಬಂಗಾರ ಬೆಳೆ ತೆಗೆದಿವೆ. ಮೊದಲ 6 ತಿಂಗಳಲ್ಲೇ ಒಟ್ಟಾರೆ ಬಂದ ಸಿನಿಮಾಗಳ ಅಂದಾಜು ಕಲೆಕ್ಷನ್ 600 ಕೋಟಿ ರೂ. ದಾಟಿದೆ. ಸಣ್ಣಸಣ್ಣ ಸಿನಿಮಾಗಳು 100 ಕೋಟಿ ರೂ. ಗಡಿ ದಾಟಿ ಅಚ್ಚರಿ ಮೂಡಿಸಿವೆ. ಸಾಕಷ್ಟು ಜನ ಮಲಯಾಳಂ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗವನ್ನು ಹೋಲಿಸಿ ಮಾತನಾಡುತ್ತಿದ್ದಾರೆ.

ಕನ್ನಡಕ್ಕಿಂತ ಮಲಯಾಳಂ ಚಿತ್ರರಂಗ ಚಿಕ್ಕದು. ಸಿನಿಮಾಗಳ ಬಜೆಟ್ ಕಮ್ಮಿ. ಆದರೂ ಅಲ್ಲಿ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿವೆ. ನಾವು ಯಾಕೆ ಹಿಂದೆ ಉಳಿದಿದ್ದೀವಿ ಎಂದು ಕೇಳುತ್ತಿದ್ದಾರೆ. ಇದೇ ಪ್ರಶ್ನೆಯನ್ನು ನಟ, ನಿರ್ದೇಶಕ ರಾಜ್. ಬಿ ಶೆಟ್ಟಿ ಮುಂದಿಟ್ಟರೆ ಅವರು ಹೇಳುವುದು ಬೇರೆ. ಇತ್ತೀಚೆಗೆ ಮಲಯಾಳಂನ 'ಟರ್ಬೊ' ಚಿತ್ರದ ಮುಖ್ಯ ಪಾತ್ರದಲ್ಲಿ ಅವರು ನಟಿಸಿ ಬಂದಿದ್ದಾರೆ.
'ರೂಪಾಂತರ' ಚಿತ್ರಕ್ಕೆ ಬಹರಗಾರರಾಗಿ ರಾಜ್. ಬಿ ಶೆಟ್ಟಿ ಕೆಲಸ ಮಾಡಿದ್ದಾರೆ. ಸಿನಿಮಾ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹಲವು ಸಂಗತಿ ಹಂಚಿಕೊಂಡಿದ್ದಾರೆ. ಇದೇ ಸಿನಿಮಾ ಮಲಯಾಳಂನಲ್ಲಿ ಬಂದಿದ್ದರೆ ಕೊಂಡಾಡುತ್ತಿದ್ದಿರಿ ಎಂದು ಕೆಲವರು ಹೇಳುತ್ತಾರೆ, ಆ ಬಗ್ಗೆ ಏನಂತೀರಾ? ಎನ್ನುವ ಪ್ರಶ್ನೆ ಎದುರಾಗಿತ್ತು.

"ಇದೇ ಸಿನಿಮಾ ಮಲಯಾಳಂನಲ್ಲಿ ಬಂದಿದ್ರೆ ನೋಡ್ತಿದ್ರಿ, ಎನ್ನುವುದು ನಮ್ಮ ಅಸೂಯೆಯನ್ನು ತೋರಿಸುತ್ತದೆ. ಒಂದು ವಿಚಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ವಿಭಾಗದಲ್ಲೂ ನಾವು ಮಲಯಾಳಂನಷ್ಟು ಚೆನ್ನಾಗಿ ಮಾಡ್ತಿದ್ದೀವಾ? ಅಭಿನಯ, ಮೇಕಪ್, ಛಾಯಾಗ್ರಹಣ, ಮ್ಯೂಸಿಕ್, ಮಾರ್ಕೆಟಿಂಗ್ ಎಲ್ಲವೂ ಅಷ್ಟೇ ಚೆನ್ನಾಗಿದ್ಯಾ? ಇಲ್ವಲ್ಲಾ? ನಾವು ಯಾವುದೋ ಒಂದರಲ್ಲಿ ತಪ್ಪು ಮಾಡುತ್ತಿದ್ದೀವಿ ಅಲ್ವಾ"
"ಇನ್ನೊಂದು ವಿಚಾರ ಏನಂದ್ರೆ ಮಲಯಾಳನಲ್ಲಿ ಸಣ್ಣ ಬಜೆಟ್ ಎಂದುಕೊಳ್ಳುವ ಯಾವುದೇ ಸಿನಿಮಾ ಸಣ್ಣ ಬಜೆಟ್ಟಿನದ್ದಲ್ಲ. ಪ್ರೇಮಲು 8ರಿಂದ 10 ಕೋಟಿ ಸಿನಿಮಾ. ನಮಗೆ 3 ಕೋಟಿ ಸಿನಿಮಾ ಎನಿಸಬಹುದು. ಆದರೆ ನಾವು ಮಾಡುತ್ತಿರುವುದು 2 ರಿಂದ 3 ಕೋಟಿ ಸಿನಿಮಾ. ಅವರು ಮಾಡುತ್ತಿರುವುದು 8ರಿಂದ 10 ಕೋಟಿ ಸಿನಿಮಾಗಳು. ಸಣ್ಣದು ಅಂದ್ರೆ ಇಷ್ಟು ಬಜೆಟ್ ಆಗುತ್ತದೆ"
"ಆವೇಶಂ 30ರಿಂದ 35 ಕೋಟಿ ರೂ. ಸಿನಿಮಾ. ಮಂಜುಮೇಲ್ ಬಾಯ್ಸ್ ಕೂಡ 30 ರಿಂ 35 ಕೋಟಿ ರೂ. ಬಜೆಟ್. 'ಆಡುಜೀವಿತಂ' 70 ಕೋಟಿ ರೂ. ಸಿನಿಮಾ. ಹಾಗಾದರೆ ಯಾವುದು ಸಣ್ಣ ಬಜೆಟ್ ಸಿನಿಮಾ. ಏನೂ ಗೊತ್ತಿಲ್ಲದೇ ಮಾತನಾಡುವುದು ತಪ್ಪು. ಆದರೆ ಏನು ಚೆನ್ನಾಗಿ ಮಾಡುತ್ತಿದ್ದಾರೆ ಎನ್ನುವುದು ಮುಖ್ಯ"
"ಆಡುಜೀವಿತಂ ಬಂತು. ಅದಕ್ಕೂ ಮುನ್ನ 'ಬ್ರಹ್ಮಯುಗಂ' ಬಂತು. ಅದಾದಮೇಲೆ ಮಂಜುಮೇಲ್ ಬಾಯ್ಸ್, ಅದಕ್ಕೂ ಮುನ್ನ ಪ್ರೇಮಲು, ಬಳಿಕ ಆವೇಶಂ. ಹೀಗೆ ಒಂದರ ಹಿಂದೊಂದು ಉತ್ತಮ ಸಿನಿಮಾ ಬರ್ತಿದೆ. ನಮ್ಮಲ್ಲಿ ಹೇಳಿ ನೋಡೋಣ ಎಂದು ರಾಜ್. ಬಿ ಶೆಟ್ಟಿ ಪ್ರಶ್ನಿಸಿದ್ದಾರೆ. ಸಿನಿಮಾ ರಿಲೀಸ್ ಡೇಟ್ ವಿಚಾರದಲ್ಲಿ ಅಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳುತ್ತಾರೆ. ನಮ್ಮಲ್ಲಿ ಆಗ್ತಿಲ್ಲ" ಎಂದಿದ್ದಾರೆ.


Click it and Unblock the Notifications











