Toby Malayalam: ತೆಲುಗಿನಲ್ಲಿ ಗೆದ್ದ 'ಸಪ್ತಸಾಗರದಾಚೆ ಎಲ್ಲೋ: ಮಲಯಾಳಂ 'ಟೋಬಿ' ಕತೆ ಏನಾಯ್ತು?
ಕನ್ನಡದ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಹೆಚ್ಚು ಪರಭಾಷೆಗಳಿಗೆ ಡಬ್ ಆಗುತ್ತಿದೆ. ಕೆಲ ಸಿನಿಮಾಗಳು ಏಕಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿವೆ. ಮತ್ತೆ ಕೆಲವರು ಕನ್ನಡದಲ್ಲಿ ಸಕ್ಸಸ್ ಕಂಡ ಬಳಿಕ ಇತರೆ ಭಾಷೆಗಳಿಗೆ ಡಬ್ ಆಗುತ್ತಿದೆ. 'ಸಪ್ತಸಾಗರದಾಚೆ ಎಲ್ಲೋ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿದ್ದ 'ಟೋಬಿ' ಮಲಯಾಳಂನಲ್ಲಿ ತೆರೆಕಂಡಿದೆ.
ಕಳೆದ ಶುಕ್ರವಾರ 'ಟೋಬಿ' ಸಿನಿಮಾ ಕೇರಳದಲ್ಲಿ ರಿಲೀಸ್ ಆಗಿದೆ. ರಾಜ್ ಬಿ. ಶೆಟ್ಟಿ ಹಾಗೂ ಚೈತ್ರಾ ಆಚಾರ್ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗಿ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಚಿತ್ರಕ್ಕೆ ಕೇರಳದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅಲ್ಲಿನ ಪ್ರೇಕ್ಷಕರು ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಜೊತೆಗೆ 'ಟೋಬಿ'ಯನ್ನು ಹೋಲಿಸಿ ನೋಡುತ್ತಿದ್ದಾರೆ.

ಬಾಸಿಲ್ ನಿರ್ದೇಶನದ ಆಕ್ಷನ್ ಸಿನಿಮಾ 'ಟೋಬಿ' ಆಗಸ್ಟ್ 25ರಂದು ಕರ್ನಾಟಕದಲ್ಲಿ ರಿಲೀಸ್ ಆಗಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರೇಕ್ಷಕರು ರಾಜ್.ಬಿ ಶೆಟ್ಟಿ ನಟನೆಯನ್ನು ಬಹಳ ಮೆಚ್ಚಿಕೊಂಡಿದ್ದರು. ರಾಜ್, ಸಂಯುಕ್ತಾ ಹೊರನಾಡ್, ಚೈತ್ರಾ ಆಚಾರ್, ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳಲ್ಲಿ ಬೆರತು ಹೋಗಿದ್ದಾರೆ. ಎಲ್ಲರ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ಚಿಕ್ಕಂದಿನಿಂದಲೂ ಬಹಳ ದೌರ್ಜನ್ಯಕ್ಕೆ ಒಳಗಾದ ಬಾಲಕ ಬಹಳ ಒರಟನಾಗಿ ಬೆಳೆಯುತ್ತಾನೆ. ಕೋಪ ಬಂದರೆ ಎದುರಿಗೆ ನಿಂತವರನ್ನು ಚಚ್ಚಿ ಹಾಕುತ್ತಾನೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಆತನಿಂದ ಮಾಡಬಾರದ್ದನ್ನೆಲ್ಲಾ ಮಾಡಿಸುತ್ತಾರೆ. ಸತ್ಯ ಅರಿವಾದ ಮೇಲೆ ಮುಂದೇನು? ಎನ್ನುವುದು 'ಟೋಬಿ' ಕತೆ. ಚಿಕ್ಕ ಕತೆಯನ್ನು ಸಿನಿಮಾ ಮಾಡುವ ಪ್ರಯತ್ನ ಮಾಡಲಾಗಿತ್ತು.

ಟಿ. ಕೆ ದಯಾನಂದ್ ಬರೆದ 'ಟೋಬಿ' ಕತೆಗೆ ರಾಜ್ ಬಿ. ಶೆಟ್ಟಿ ಚಿತ್ರಕತೆ ಬರೆದು ನಟಿಸಿದ್ದಾರೆ. ರಾಜ್. ಬಿ ಶೆಟ್ಟಿ ಮಲಯಾಳಂ ಕೂಡ ಮಾತನಾಡುತ್ತಾರೆ. ಹಾಗಾಗಿ ತಾವೇ ಚಿತ್ರವನ್ನು ಕೇರಳದಲ್ಲಿ ಪ್ರಚಾರ ಮಾಡಿದ್ದರು. ಕಳೆದ ಶುಕ್ರವಾರ ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಶನಿವಾರ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಒಂದೊಳ್ಳೆ ಸಿನಿಮಾ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ.
ಆರಂಭದಲ್ಲಿ ಹಾಸ್ಯ ಪಾತ್ರಗಳಿಂದ ಗಮನ ಸೆಳೆದ ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದರು. 'ಟೋಬಿ' ಚಿತ್ರದಲ್ಲಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಪ್ರವೀಣ್ ಶೇರಿಯಾನ್ ಛಾಯಾಗ್ರಹಣ, ಮಿಧುನ್ ಮುಕುಂದನ್ ಸಂಗೀತ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಟೋಬಿ' ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಿತ್ತು.
ಕೊಚ್ಚಿ, ಅಲುವ, ಪೆರುಂಬವೂರ್, ಅಂಗಮಲೇ, ಎಡಪಳಿ ಸೇರಿದಂತೆ ಕೇರಳದ ಕೆಲವೆಡೆ 'ಟೋಬಿ' ಸಿನಿಮಾ ಪ್ರದರ್ಶನವಾಗುತ್ತಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರಾಲು ದಾಟಿ' ತೆಲುಗಿನಲ್ಲಿ ಸಖತ್ ಸದ್ದು ಮಾಡ್ತಿದೆ. ಮೊದಲ ದಿನವೇ ಬ್ರೇಕ್ ಈವನ್ ಮಾಡಿದ್ದ ಸಿನಿಮಾ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಕೆಮೆಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಆಂಧ್ರ, ತೆಲಂಗಾಣದಲ್ಲಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ 'ಸಪ್ತಸಾಗರಾಲು ದಾಟಿ' ಚಿತ್ರವನ್ನು ರಿಲೀಸ್ ಮಾಡಿದೆ. ಪ್ರೇಕ್ಷಕರು ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ತೆಲುಗು ರಾಜ್ಯಗಳಲ್ಲಿ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್‌ಗೆ ರಕ್ಷಿತ್ ಶೆಟ್ಟಿ ಖುಷಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡದ ಮತ್ತಷ್ಟು ಸಿನಿಮಾಗಳನ್ನು ಡಬ್ ಮಾಡಿ ರಿಲೀಸ್ ಮಾಡಲು 'ಟೋಬಿ' ಹಾಗೂ 'ಸಪ್ತಸಾಗರಾಲು ದಾಟಿ' ದಾರಿ ಮಾಡಿ ಕೊಟ್ಟಂತಾಗಿದೆ.


Click it and Unblock the Notifications











