ಮದುವೆಯಾದ 4ವರ್ಷದ ನಂತರ ಗುಡ್ ನ್ಯೂಸ್ ನೀಡಿದ 'ರತ್ನನ್ ಪ್ರಪಂಚ'ದ ರೆಬಾ
ಸಾಮಾನ್ಯವಾಗಿ ಮದುವೆಯಾದ ನಂತರ ನಾಯಕಿಯರು ಅವಕಾಶಗಳ ಕೊರತೆಯನ್ನು ಎದುರಿಸುತ್ತಾರೆ. ಇನ್ನು ಮಗು ಆದರೆ ಮುಗೀತು. ಸ್ಟಾರ್ ಹೀರೋಯಿನ್‌ಗಳ ಪಾಲಿಗೆ ಚಿತ್ರರಂಗದ ಬಾಗಿಲು ಬಹುತೇಕ ಮುಚ್ಚಿದಂತೆಯೇ. ಪೋಷಕ ಪಾತ್ರಗಳಿಗೆ ಆ ನಂತರ ಇವರನ್ನು ಸೀಮಿತಗೊಳಿಸಲಾಗುತ್ತೆ.
ಆದರೆ, ಇದಕ್ಕೆ ತದ್ವಿರುದ್ದ ಎನ್ನುವಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮದುವೆಯಾದ ನಂತರ ಕೂಡ ತಮ್ಮ ಬೇಡಿಕೆಯನ್ನು ಹಾಗೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗ್ತಾರೆ. ಉದಾಹರಣೆಗೆ ರೆಬಾ ಮೋನಿಕಾ ಜಾನ್.

ಹೌದು,ರೆಬಾ ಮೋನಿಕಾ ಜಾನ್.. ಮಲಯಾಳಿ ಚೆಲುವೆ. ಆದರೆ ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ನಲ್ಲಿ ಇವರು ತಮ್ಮ ಪದವಿ ಪೂರ್ಣಗೊಳಿಸಿದ್ದಾರೆ.
ಮಾಡೆಲಿಂಗ್ ನಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಲೇ "ಮಿಡುಕ್ಕಿ" ಎಂಬ ಮಲಯಾಳಂ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ರೆಬಾ ಮಲಯಾಳಂನ "ಜಾಕೋಬಿಂತೆ ಸ್ವರ್ಗರಾಜ್ಯಂ" ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ವಿಜಯ್ ಅಭಿನಯದ "ಬಿಗಿಲ್" ಚಿತ್ರದಲ್ಲೂ ಕಾಣಿಸಿಕೊಂಡರು.
ತೆಲುಗಿನ "ಸಮಜವರಗಮನ".. ಮಲಯಾಳಂನ "ಫೋರೆನ್ಸಿಕ್" ಚಿತ್ರದಲ್ಲಿಯೂ ಮಹತ್ತರ ಪಾತ್ರ ನಿರ್ವಹಿಸಿದ ರೆಬಾ "ರತ್ನನ್ ಪ್ರಪಂಚ" ಚಿತ್ರದ ಮೂಲಕ ಕನ್ನಡಕ್ಕೂ ಬಂದರು. ತಮ್ಮ ಅಭಿನಯದಿಂದ ಕನ್ನಡಿಗರ ಮನಸನ್ನೂ ಕೂಡ ಗೆದ್ದರು.
ಕನ್ನಡದಲ್ಲಿ ಇನ್ನೇನು ಅವಕಾಶಗಳ ಹೆಬ್ಬಾಗಿಲಯ ರೆಬಾ ಪಾಲಿಗೆ ತೆರಯಬೇಕಿತ್ತು. ಅಷ್ಟರಲ್ಲೇ ಜೋಮನ್ ಜೋಸೆಫ್ ಅವರ ಜೊತೆ ಮದುವೆಯಾಗಿ ಎಲ್ಲರನ್ನೂ ಅಚ್ಚರಿಗೆ ದೂಡಿದರು ರೆಬಾ.
ಹಾಗಂಥ ಮದುವೆಯಾದ ಮೇಲೆ ರೆಬಾಗೆ ಅವಕಾಶಗಳ ಕೊರತೆ ಕಾಡಲಿಲ್ಲ. ಆಗಲೇ ಹೇಳಿದಂತೆ ಮದುವೆಯಾದ ಮೇಲೂ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ಕಾಣಿಸಿಕೊಂಡರು ರೆಬಾ.

ಆ ಪೈಕಿ "ಎಫ್ ಐ ಆರ್".. "ಇನ್ನಾಲೆ ವರೆ".. "ಆಕಾಶ್ ವಾಣಿ".. "ಬೂ".. "ಮಳೆಯಲ್ಲಿ ನನಗಿರೇನ್".. ಪ್ರಮುಖವಾದವು. ರಜಿನಿಕಾಂತ್ ಅಭಿನಯದ ಲೋಕೇಶ್ ಕನಗರಾಜ್ ನಿರ್ದೇಶನದ "ಕೂಲಿ" ಚಿತ್ರದಲ್ಲಿಯೂ ಬಹುಮುಖ್ಯವಾದ ಪಾತ್ರವನ್ನು ರೆಬಾ ನಿರ್ವಹಿಸಿದ್ದರು.
ಇವತ್ತು ಕೂಡ ರೆಬಾ ಮೋನಿಕಾ ಜಾನ್ ಡಿಮ್ಯಾಂಡ್ ಕಡಿಮೆಯಾಗಿಲ್ಲ. ವಿಜಯ್ ಅಭಿನಯದ ಕೊನೆಯ ಚಿತ್ರ "ಜನನಾಯಗನ್" ನಲ್ಲಿಯೂ ರೆಬಾ ಅಭಿನಯಿಸಿದ್ದಾರೆ. ಇಂಥಾ ರೆಬಾ ಈಗ ಮದುವೆಯಾಗಿ ನಾಲ್ಕು ವರ್ಷದ ನಂತರ ಗುಡ್ ನ್ಯೂಸ್ ನೀಡಿದ್ದಾರೆ. ಸುಂದರವಾದ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಾವು ಗರ್ಭಿಣಿಯಾಗಿರುವ ಸುದ್ದಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ತೇಜಸ್ವಿ ಪ್ರಕಾಶ್, ಅಮೃತಾ ಅಯ್ಯಂಗಾರ್, ಟೋವಿನೋ ಥಾಮಸ್, ವರ್ಷಾ ಬೊಳ್ಳಮ್ಮ, ಅಪರ್ಣಾ ಬಾಲಮುರಳಿ, ಅಹನಾ ಕೃಷ್ಣ, ದಿಶಾ ಮದನ್, ಜ್ವಾಲಾ ಗುಟ್ಟಾ, ಸಂಯುಕ್ತಾ ಹೆಗಡೆ, ಹೀಗೆ ಭಾರತೀಯ ಚಿತ್ರರಂಗದ ಹಲವರು ರೆಬಾಗರ ಶುಭಾಶಯ ಕೋರಿದ್ದಾರೆ. ಅಭಿನಂದನೆ ಸಲ್ಲಿಸಿದ್ದಾರೆ. ಬೇಬಿ ಬಂಪ್ ಫೋಟೊಶೂಟ್ ನ ಮೆಚ್ಚಿಕೊಂಡಿದ್ದಾರೆ.
ಅಂದ್ಹಾಗೇ ರೆಬಾ ಮೋನಿಕಾ ಜಾನ್ ಅವರ ಪತಿ ಜೋಮನ್ ಜೋಸೆಫ್ ದುಬೈ ಮೂಲದ ಉದ್ಯಮಿ. ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಇಬ್ಬರು ಮದುವೆಗೂ ಮುನ್ನ ಮೂರುವರೆ ವರ್ಷ ಪ್ರೇಮ ಗೀತೆ ಹಾಡಿದ್ದರು.
ರೆಬಾ ಅವರ ಹುಟ್ಟುಹಬ್ಬದಂದೇ ಜೋಮನ್ ದುಬೈನಲ್ಲಿ ತಮ್ಮ ಮನದ ಮಾತು ಹಂಚಿಕೊಂಡಿದ್ದು ವಿಶೇಷ. ಹೀಗೆ ಪ್ರೀತಿಸಿ ಮನೆಯವರ ಮನವೊಲಿಸಿ ಸತಿ ಪತಿಗಳಾದ ಇಬ್ಬರು ಈಗ ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ.


Click it and Unblock the Notifications