'ಕಾಂತಾರ- 1' ಚಿತ್ರಕ್ಕೆ ರಿಷಬ್ ಕಳರಿ ಪಯಟ್ಟು ಜರ್ನಿ ಹೇಗಿತ್ತು? ಸ್ವಗ್ರಾಮದಲ್ಲಿ ಕಳರಿ ಶಾಲೆ ಆರಂಭಿಸಲು ಶೆಟ್ರ ಒಲವು
ಕನ್ನಡದ ಹೆಮ್ಮೆಯ 'ಕಾಂತಾರ- 1' ಸಿನಿಮಾ ದೇಶ ವಿದೇಶಗಳಲ್ಲಿ ಸದ್ದು ಮಾಡ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯಲ್ಲಿ ಕಮಾಲ್ ಮಾಡಿದ್ದಾರೆ. ಅದರಲ್ಲೂ ಚಿತ್ರದ ಆಕ್ಷನ್ ಸನ್ನಿವೇಶಗಳು ಮೈ ಜುಮ್ ಎನಿಸುವಂತಿದೆ. ಚಿತ್ರಕ್ಕಾಗಿ ಕಳರಿ ಪಯಟ್ಟು, ಕುದುರೆ ಸವಾರಿಯನ್ನು ರಿಷಬ್ ಶೆಟ್ಟಿ ಕಲಿತಿದ್ದರು.
ನೇರಾನೇರ ಕಳರಿ ಪಯಟ್ಟು ವಿದ್ಯೆಯನ್ನು ಚಿತ್ರದಲ್ಲಿ ಬಳಸಿಕೊಂಡಿಲ್ಲ. ಆದರೆ ಮೈಜುಮ್ ಎನಿಸುವ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸಲು ಕಳರಿಪಯಟ್ಟು ಮೂಲಕ ರಿಷಬ್ ಶೆಟ್ಟಿ ದೇಹವನ್ನು ಪಳಗಿಸಿದ್ದರು. ಅದಕ್ಕಾಗಿ ತಿಂಗಳುಗಳ ಕಾಲ ಸಾಂಪ್ರದಾಯಿಕ ಕಲೆಯ ತರಬೇತಿ ಪಡೆದಿದ್ದರು. ಚೆಮ್ಮಲಸ್ಸೆರಿ ಮೂಲದ ಕಳರಿಪಯಟ್ಟು ಮಾಸ್ಟರ್ ವಿಪಿನ್ ದಾಸ್ ಮಾರ್ಗದರ್ಶನದಲ್ಲಿ ರಿಷಬ್ ತಯಾರಿ ನಡೆಸಿದ್ದರು.

ಸದ್ಯ 'ಕಾಂತಾರ- 1' ಚಿತ್ರದ ಯಶಸ್ಸಿನ ಜೊತೆಗೆ ಚೆಮ್ಮಲಸ್ಸೆರಿ ಮೂಲದ ಕಳರಿಪಯಟ್ಟು ಮಾಸ್ಟರ್ ವಿಪಿನ್ ದಾಸ್ ಕೂಡ ಮೆಚ್ಚುಗೆ ಪಡೆಯುತ್ತಿದ್ದಾರೆ. ಚೆಮ್ಮಲಸ್ಸೆರಿಯಲ್ಲಿರುವ 'ಆತ್ಮ ಕಳರಿ ವಿಲೇಜ್'ನಲ್ಲಿ ರಿಷಬ್ ಶೆಟ್ಟಿ ಸಾಂಪ್ರದಾಯಿಕ ಸಮರಕಲೆ ಕಲಿತಿದ್ದಾರೆ. ಈ ಬಗ್ಗೆ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.
ಕಾಂತಾರ ತಂಡವು ಮೈಪಯಟ್ಟು (ದೇಹದ ವ್ಯಾಯಾಮಗಳು), ಚುವಾಡು (ಮೂಲ ಹೆಜ್ಜೆಗಳು), ಕೊಳತಾರಿ (ಕೋಲುಗಳೊಂದಿಗೆ ಶಸ್ತ್ರಾಸ್ತ್ರ ತಂತ್ರಗಳು) ಮತ್ತು ಅಂಕತ್ತಾರಿ (ಖಡ್ಗ ಮತ್ತು ಈಟಿ ಯುದ್ಧಗಳಲ್ಲಿ ತರಬೇತಿ ಪಡೆದಿದೆ. ಚಿತ್ರಕ್ಕೆ ಅಗತ್ಯವಿರುವ ದೈಹಿಕ ಸಿದ್ಧತೆಗಾಗಿ ರಿಷಬ್ ಶೆಟ್ಟಿ 3 ವರ್ಷಗಳ ಹಿಂದೆ ವಿಪಿನ್ ದಾಸ್ ಅವರನ್ನು ಸಂಪರ್ಕಿಸಿದ್ದರು. ಅದೇ ಸಮಯದಲ್ಲಿ ಅವರು ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗಿ ನೆಲೆಸಿದ್ದರು. ವಿಪಿನ್ ದಾಸ್ ಮತ್ತವರ ತಂಡ ಅಲ್ಲಿಗೆ ಹೋಗಿ ಸಾಂಪ್ರದಾಯಿಕವಾಗಿ ತಾತ್ಕಾಲಿಕ ಕಳರಿ ಶಾಲೆ ಸ್ಥಾಪಿಸಿ ತರಬೇತಿ ನೀಡಿದ್ದರು.
ವಿಪಿನ್ ದಾಸ್ ಶಿಷ್ಯರಾಗಿ, ರಿಷಬ್ ಶೆಟ್ಟಿ ಅನೇಕ ಸಾಂಪ್ರದಾಯಿಕ ತಂತ್ರಗಳನ್ನು, ಅಪರೂಪದ ಶಸ್ತ್ರಾಸ್ತ್ರಗಳನ್ನು ಬಳಸುವ ವಿಧಾನವನ್ನೂ ಕರಗತ ಮಾಡಿಕೊಂಡರು. 'ಕಾಂತಾರ'ದ ಮೊದಲ ಭಾಗದಲ್ಲಿ ಸ್ಟಂಟ್ ದೃಶ್ಯವೊಂದರಲ್ಲಿ ಶೆಟ್ಟಿಗೆ ಭುಜದ ಪೆಟ್ಟಾಗಿತ್ತು. ಸಾಂಪ್ರದಾಯಿಕ ಕಳರಿ ಮರ್ಮ ಚಿಕಿತ್ಸೆಯಿಂದ (ಪ್ರೆಶರ್ ಪಾಯಿಂಟ್ ಹೀಲಿಂಗ್) ಅವರು ಚೇತರಿಸಿಕೊಂಡರು. ಆತ್ಮ ಕಳರಿ ತಂಡದ ಸದಸ್ಯರಾದ ಗೋಕುಲ್, ಗೋಪಿಕಾ, ವಿಗಿಲೇಶ್, ಮತ್ತು ಅನುಶ್ರೀ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನು ಕಳರಿಪಯಟ್ಟು ತರಬೇತಿ ನೀಡಿದ ಪ್ರಭಾವವನ್ನು ಮನಗಂಡ ರಿಷಬ್ ಶೆಟ್ಟಿ ತಮ್ಮ ಸ್ವಗ್ರಾಮದಲ್ಲಿ ಕಳರಿ ಶಾಲೆಯನ್ನು ಸ್ಥಾಪಿಸಲು ಬೆಂಬಲವನ್ನು ಕೋರಿದ್ದಾರೆ ಎಂದು ಮಾತೃಭೂಮಿ ಪತ್ರಿಕೆಗೆ ವಿಪಿನ್ ಮಾಹಿತಿ ನೀಡಿದ್ದಾರೆ. 'ಕಾಂತಾರ- 1' ಚಿತ್ರ ಆಕ್ಷನ್ ಸೀಕ್ವೆನ್ಸ್‌ಗಳು ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಟ್ಟಿದೆ. ಕಾಡಿನಲ್ಲಿ ನಡೆಯುವ ಆಕ್ಷನ್ ಸೀಕ್ವೆನ್ಸ್, ಗುಳಿಗ ದೈವ ಆವಾಹನೆ ಸಮಯದಲ್ಲಿ ಅವರ ಸ್ಟಂಟ್ಸ್ ಹುಬ್ಬೇರಿಸುವಂತಿದೆ. ಅದಕ್ಕೆಲ್ಲಾ ಈ ಕಳರಿಪಯಟ್ಟು ತರಬೇತಿ ಸಹಕಾರಿಯಾಗಿದೆ.
ಕೇರಳದ ಪುರಾತನ ಸಮರ ಕಲೆಯಿದು. 11-12ನೇ ಶತಮಾನದಲ್ಲಿ ಕೇರಳದಲ್ಲಿ ಕಳರಿ ಪಯಟ್ಟು ಸಮರಕಲೆ ಹುಟ್ಟಿಕೊಂಡಿತ್ತು. ದೇಶ ವಿದೇಶದಲ್ಲಿ ಜನಪ್ರಿಯವಾಗಿರುವ ಮಾರ್ಷಲ್ ಆರ್ಟ್ಸ್‌ಗೂ ಇದೇ ಕಳರಿ ಪಯಟ್ಟು ಮೂಲ ಎನ್ನಲಾಗುತ್ತದೆ. ಕನ್ನಡದ 'ಒಂದಾನೊಂದು ಕಾಲದಲ್ಲಿ' ಸೇರಿ ಕೆಲ ಸಿನಿಮಾಗಳಲ್ಲಿ ಕಳರಿ ಪಯಟ್ಟು ಸನ್ನಿವೇಶಗಳನ್ನು ನೋಡಬಹುದು.
ಸದ್ಯ 'ಪಲ್ಲಿಚಟ್ಟಂಬಿ' ಚಿತ್ರಕ್ಕಾಗಿ ವಿಪನ್ ಅವರ ಮಾರ್ಗದರ್ಶನದಲ್ಲಿ ಮಲಯಾಳಂ ನಟ ಟೊವಿನೋ ಥಾಮಸ್ ಕಳರಿಪಯಟ್ಟು ಕಲಿಯುತ್ತಿದ್ದಾರೆ. 'ಕಾಂತಾರ' ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಮತ್ತವರ ತಂಡ 5 ವರ್ಷಗಳ ಕಾಲ ಶ್ರಮಿಸಿದೆ. ಚಿತ್ರಕ್ಕಾಗಿ ರಿಷಬ್ ತನು ಮನ ಅರ್ಪಿಸಿದ್ದಾರೆ. ಅವರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಈಗ ಸಿಗುತ್ತಿದೆ.


Click it and Unblock the Notifications











