ಯಶ್ 'ಟಾಕ್ಸಿಕ್' ಚಿತ್ರತಂಡದ ಜೊತೆ ಕೈಜೋಡಿಸಿದ ಸಂಗೀತಾ ಜನಚಂದ್ರನ್; ಯಾರು ಈಕೆ?
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ತಯಾರಿ ನಡೀತಿದೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಸಿನಿಮಾ ಪ್ರಮೋಷ್ ಆರಂಭಿಸಲು ಚಿತ್ರತಂಡ ಮುಂದಾಗಿದೆ.
'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಇನ್ನು 45 ದಿನ ಮಾತ್ರ ಬಾಕಿಯಿದೆ. ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಭರದಿಂದ ಸಾಗುತ್ತಿದೆ. ರಿಲೀಸ್ ಡೇಟ್ ಪೋಸ್ಟ್‌ಪೋನ್ ಎನ್ನುವ ವದಂತಿಗಳಿಗೆ ತೆರೆ ಎಳೆದು ಅಂದುಕೊಂಡ ದಿನವೇ ಸಿನಿಮಾ ತೆರೆಗೆ ತರುವ ಪ್ರಯತ್ನ ಜೋರಾಗಿದೆ. ಇದೀಗ ಸಂಗೀತಾ ಜನಚಂದ್ರನ್ 'ಟಾಕ್ಸಿಕ್' ಚಿತ್ರತಂಡ ಸೇರಿಕೊಂಡಿದ್ದಾರೆ.

ಸ್ವತಃ ನಿರ್ದೇಶಕಿ ಗೀತು ಮೋಹನ್ ದಾಸ್ ತಂಡಕ್ಕೆ ಸಂಗೀತಾ ಜನಚಂದ್ರನ್ ಅವರನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಯಾರೀ ಸಂಗೀತಾ ಜನಚಂದ್ರನ್ ಎಂದು ಅಭಿಮಾನಿಗಳು ಹುಡುಕಾಟ ನಡೆಸುತ್ತಿದ್ದಾರೆ. ಡಾ. ಸಂಗೀತ ಜನಚಂದ್ರನ್, ಉದ್ಯಮಿ ಹಾಗೂ ಸ್ಟೋರೀಸ್ ಸೋಷಿಯಲ್‌ನ ಸಂಸ್ಥಾಪಕಿ ಕೂಡ ಹೌದು.
ಕೇರಳ ಮೂಲದ ಸಂಗೀತಾ ಜನಚಂದ್ರನ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಕೂಡ ಪಡೆದಿದ್ದಾರೆ. ಕಮ್ಯೂನಿಕೇಷನ್ಸ್ ಮ್ಯಾನೇಜರ್ ಆಗಿ ದೇಶ ವಿದೇಶಗಳಲ್ಲಿ 14 ವರ್ಷಗಳ ಅನುಭವ ಹೊಂದಿರುವ ಈಕೆ ತಮ್ಮದೇ ಆದ ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಷನ್ ಕಂಪನಿ ಆರಂಭಿಸಿದ್ದಾರೆ. ಈಗಾಗಲೇ ಕೆಲ ಸಿನಿಮಾಗಳಿಗೆ ಸಂಗೀತಾ ಜನಚಂದ್ರನ್ ಕೆಲಸ ಮಾಡಿದ್ದಾರೆ. 'ಟಾಕ್ಸಿಕ್' ಚಿತ್ರದ ಕೇರಳ ಮಾರ್ಕೆಟಿಂಗ್ ಜವಾಬ್ದಾರಿಯನ್ನು ಆಕೆ ವಹಿಸಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ಸಿದ್ಧವಾಗ್ತಿದೆ. ಅಷ್ಟೇ ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡಿ ಪ್ರೇಕ್ಷಕರ ಮುಂದೆ ಕೊಂಡೊಯ್ಯಬೇಕಿದೆ. ಅದಕ್ಕಾಗಿ ಘಟಾನುಘಟಿಗಳನ್ನು ಅಖಾಡಕ್ಕೆ ಇಳಿಸಲಾಗುತ್ತಿದೆ. ಇನ್ನು 'ಟಾಕ್ಸಿಕ್' ತಂಡ ಸೇರಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂಗೀತಾ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
"ಕಾಲ್ಪನಿಕ ಕಥೆಗಳನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ನಮ್ಮ ಮುಂದಿನ ಸಿನಿಮಾ 'ಟಾಕ್ಸಿಕ್'- ಎ ಫೇರ್‌ಟೇಲ್ ಫಾರ್ ಗ್ರೋನ್ ಅಪ್ಸ್ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್, ನಟ ಯಶ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಕೈಜೋಡಿಸಲು ಹೆಮ್ಮೆ ಎನಿಸುತ್ತಿದೆ" ಎಂದು ಬರೆದುಕೊಂಡಿದ್ದಾರೆ. 'ಟಾಕ್ಸಿಕ್' ಚಿತ್ರದ ಪ್ರಚಾರದಲ್ಲಿ ಸಂಗೀತಾ ಹೇಗೆ ಪಾತ್ರ ವಹಿಸುತ್ತಾರೆ ಎಂದು ಕಾದು ನೋಡಬೇಕಿದೆ.
ಬಹಳ ಅದ್ಧೂರಿಯಾಗಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ. ಯಶ್ ನಟಿಸೋದು ಮಾತ್ರವಲ್ಲ ಚಿತ್ರಕ್ಕೆ ಹಣ ಹೂಡಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಸೇರಿ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಸಣ್ಣ ಟೀಸರ್ ಮೂಲಕ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮುಂದೆ ಟ್ರೈಲರ್, ಸಾಂಗ್ಸ್ ಬರಬೇಕಿದೆ.
ಯಶ್ ಜೊತೆ ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅದ್ವಾನಿ ಸೇರಿ ಹಲವರು ನಟಿಸುತ್ತಿದ್ದಾರೆ. 'KGF'-2 ಬಳಿಕ ಯಶ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹಾಗಾಗಿ 'ಟಾಕ್ಸಿಕ್' ಸಿನಿಮಾ ಬಗ್ಗೆ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೇರಿದೆ. ಮಾರ್ಚ್ 19ರಂದು 'ಧುರಂಧರ್- 2' ಎದುರು ರಾಯನ ದರ್ಬಾರ್ ಶುರುವಾಗಲಿದೆ.
ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ 'ಟಾಕ್ಸಿಕ್' ಟೀಸರ್ ಕೋಟಿ ಕೋಟಿ ವೀವ್ಸ್ ಗಿಟ್ಟಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟಾಕ್ಕಿದೆ. ಹಸಿಬಿಸಿ ದೃಶ್ಯದ ಬಗ್ಗೆ ಪರ ವಿರೋಧ ಚರ್ಚೆ ನಡೀತು. ಆದರೂ ಅದನ್ನೆಲ್ಲಾ ಮೀರಿ ಟೀಸರ್ ಹಿಟ್ ಆಗಿದೆ. ಸಿನಿಮಾ ನೋಡಬೇಕು ಎಂದು ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ.


Click it and Unblock the Notifications











